ಹಾಸನದ ಪ್ರಭಾವಿ ರಾಜಕಾರಣಿಯಿಂದ ಹೇಮಾವತಿ ನಾಲೆ ಒಡೆಯಲು ಕುಮ್ಮಕ್ಕು, ಅಧಿಕಾರಿಗಳಿಗೆ ಧಮಕಿ!
ಜಿಲ್ಲಾ ಬಿಜೆಪಿ ಮುಖಂಡರ ಗಂಭೀರ ಆರೋಪ 5ರಂದು ಮುತ್ತಿಗೆ ಹಾಕಲು ಸಿದ್ಧತೆ
ತುಮಕೂರು: ಹಾಸನ ಭಾಗದ ಪ್ರಭಾವಿ ರಾಜಕಾರಣಿಗಳು ಹೇಮಾವತಿ ನಾಲೆಯನ್ನು ಒತ್ತೆಯಾಗಿಟ್ಟುಕೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ಗೌಡ, ಮಾಧುಸ್ವಾಮಿ, ಸೊಗಡು ಶಿವಣ್ಣ, ಬಿ.ಸಿ. ನಾಗೇಶ್, ಕಿರಣಕುಮಾರ್ ಮಾತನಾಡಿ, ಹಾಸನ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರ ನಡುವೆ 2.5 ಕೋಟಿ ಟೆಂಡರ್ ಅವಾರ್ಡ್ ಪಡೆಯಲು ಪ್ರಭಾವಿ ರಾಜಕಾರಣಿಗಳು ಮಾಡಿರುವ ಕೃತ್ಯ ಇರಬಹುದು ಎಂದು ಶಂಕಿಸಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ನಾಲೆ ಒಡೆಯಲು ರೈತರಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನೂತನವಾಗಿ ನಿರ್ಮಿಸಿರುವ ನಾಗಸಮುದ್ರ ಕೆರೆಗೆ ನೀರು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಈ ಕೆರೆಯ ಅಚ್ಚುಕಟ್ಟುದಾರರು ಕಾನೂನು ಬಾಹಿರವಾಗಿ ನೀರು ತುಂಬಿಸಲು ನಾಲೆ ಒಡೆದಿರುವ ಸಂಶಯವಿದೆ. ಹಾಸನದ ಪ್ರಭಾವಿ ರಾಜಕಾರಣಿಯೊಬ್ಬರು ಕಾವೇರಿ ನೀರಾವರಿ ನಿಗಮದ ಕಾರ್ಯದರ್ಶಿಗಳಿಗೆ ಮತ್ತು ಇಲಾಖಾ ಅಧಿಕಾರಿಗಳಿಗೆ ಕರೆ ಮಾಡಿ ತುಮಕೂರು ಜಿಲ್ಲೆಗೆ ನೀರು ಹರಿಸಿದ್ದೇ ಆದಲ್ಲಿ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಧಮಕಿ ಹಾಕಿದ್ದಾರೆ ಎಂದರು.
ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಹಾಸನದ ಜಿಲ್ಲಾ ಉಸ್ತುವಾರಿ ಮಂತ್ರಿ ಮಹದೇವಪ್ರಸಾದ್ ಅವರು ಆದೇಶಿಸಿದ ಹಿನ್ನೆಲೆಯಲ್ಲಿ ಜು.22ರಂದು ಜಿಲ್ಲೆಗೆ ನೀರು ಹರಿಯುತ್ತಿರುವಾಗ ಮೊದಲ ಹಂತದಲ್ಲೇ ಅಂದರೆ ಎರಡನೇ ದಿನಕ್ಕೆ 62ನೇ ಕಿ.ಮೀ.ನಲ್ಲಿ ನಾಲೆ ಬಿರುಕುಗೊಂಡು ತುಮಕೂರಿಗೆ ಬರುವ ನೀರು ಸ್ಥಗಿತಗೊಂಡಿದೆ. ಇದೆಲ್ಲವೂ ಪ್ರಭಾವಿ ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಇದರ ಸಮಗ್ರ ತನಿಖೆಗಾಗಿ ಸರ್ಕಾರ ಸಿಒಡಿ ತನಿಖೆಗೆ ವಹಿಸಬೇಕು ಎಂದಿದ್ದಾರೆ.
ಕಳೆದ 3 ವರ್ಷಗಳಲ್ಲಿ 3 ಬಾರಿ ನಾಲೆ ಒಡೆದು ತುಮಕೂರು ಜಿಲ್ಲೆಗೆ ನೀರು ಬಂದಿಲ್ಲ. 2012-13ರಲ್ಲಿ 47ನೇ ಕಿ.ಮೀನಲ್ಲಿ ನಾಲೆ ಒಡೆದು ಹೋಗಿ 13 ದಿನ ನೀರು ಹರಿದಿರಲಿಲ್ಲ. 2013-14ನೇ ಸಾಲಿನಲ್ಲಿ ಜು.17, 2013 ರಂದು 71.14ನೇ ಕಿ.ಮೀ.ನಲ್ಲಿ ಮೇಲ್ಗಾಲುವೆ ಆಗಮನದ ಭಾಗದಲ್ಲಿ ನಾಲೆ ಬಿರುಕುಗೊಂಡು 28 ದಿನ ನೀರು ಸ್ಥಗಿತಗೊಂಡಿತು. ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರು ಹರಿಯಬೇಕಿದ್ದು, ಆದರೆ ನೀರು ಹರಿದಿದ್ದು ಕೇವಲ 21 ಟಿಎಂಸಿ ಮಾತ್ರ. ಇನ್ನು 4 ಟಿಎಂಸಿ ನೀರು ನಾಲೆ ಬಿರುಕುಗೊಂಡ ನಿಮಿತ್ತ ನೀರು ಹರಿಯಲೇ ಇಲ್ಲ. 2014-15ನೇ ಸಾಲಿನಲ್ಲಿ ಕಳೆದ ಜು.27ರಂದು ನೂತನವಾಗಿ ನಿರ್ಮಿಸಿರುವ ನಾಗಸಮುದ್ರ ಕೆರೆ ಹತ್ತಿರ ನಾಲೆ ಬಿರುಕುಗೊಂಡು ನೀರು ಸ್ಥಗಿತಗೊಂಡಿದೆ. ಮೇಲ್ಕಂಡ ಅಂಶಗಳನ್ನು ನೋಡಿದಾಗ ಇದು ಉದ್ದೇಶಪೂರ್ವಕವಾಗಿ ನಾಲೆ ಒಡೆದಿರುವಂತ ಸಂಶಯವಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
2013-14ರಲ್ಲಿ ನಮಗೆ 23 ಟಿಎಂಸಿ ಬೇಡಿಕೆ ಇದ್ದು ಕೆವಲ 13 ಟಿಎಂಸಿ ನೀರು ಮಾತ್ರ ನಮಗೆ ಲಭ್ಯವಾಗಿದೆ. ನಾಲೆ ಒಡೆಯುವಂತಹ ಕ್ಷುಲ್ಲಕ ಕಾರಣಗಳಿಂದಾಗಿ ನಮ್ಮ ಪಾಲಿನ ನೀರು ಹರಿಯಲಿಲ್ಲ. ಹೀಗಾಗಿ ಗೊರೂರು ಜಲಾಶಯದ ಮುಖ್ಯ ಎಂಜಿನಿಯರ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದಿದ್ದಾರೆ.
ಪ್ರತಿ ವರ್ಷವೂ ಇದೇ ರೀತಿ ಆದರೆ ನಮ್ಮ ಜಿಲ್ಲೆಯ ಜನರ ಜಾನುವಾರುಗಳ ಪರಿಸ್ಥಿತಿ ಏನಾಗಬೇಕು? ಪ್ರಸಕ್ತ ಸಾಲಿನ ಮುಂಗಾರಿನಲ್ಲೇ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ತಿನ್ನಲು ಅನ್ನ ಆಹಾರ ಇಲ್ಲದಿರುವ ಸ್ಥಿತಿಯಲ್ಲಿ ತುಮಕೂರು ಜಿಲ್ಲೆಗೆ ಇದರಿಂದಾಗಿ ಸರ್ಕಾರ ಕಾನೂನು ರೀತ್ಯಾ ನಮ್ಮ ಜಿಲ್ಲೆಗೆ ಮೀಸಲಿಟ್ಟಿರುವ ಹಾಗು ಬೇಡಿಕೆ ಇರುವ ನೀರನ್ನು ಸಮರ್ಪಕವಾಗಿ ಹರಿಸಲು ಪ್ರಾಮಾಣಿಕಾವಾಗಿ ಪ್ರಯತ್ನ ಮಾಡಿ ನೀರು ಹರಿಸಲು ಅಗತ್ಯ ಕ್ರಮ ಜರುಗಿಸಲು ಸುರೇಶ್ಗೌಡ ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆ.5ರಂದು ತುಮಕೂರಿನ ಮುಖ್ಯ ಎಂಜಿನಿಯರ್ ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಿ ಸಮಗ್ರ ತನಿಖೆಗೆ ಆಗ್ರಹಿಸಿ ನಮ್ಮ ಬೇಡಿಕೆಯಾದ 25 ಟಿಎಂಸಿ ನೀರು ಹರಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಗಣೇಶ್, ಎಂ.ಬಿ.ನಂದೀಶ್ ಮುಂತಾದವರು ಇದ್ದರು.
ದುರಸ್ತಿ ಸ್ಥಳಕ್ಕೆ ಸಂಸದರ ಭೇಟಿ
ತುಮಕೂರು: ತುಮಕೂರು ಜಿಲ್ಲೆಗೆ ನೀರು ಸರಬರಾಜು ಮಾಡುವ ಹೇಮಾವತಿ ನಾಲೆ ಒಡೆದು ಹೋಗಿ ನೀರು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ತುಮಕೂರು ಸಂಸದ ಎಸ್.ಪಿ. ಮುದ್ದಹನುಮೇಗೌಡ ಶನಿವಾರ ಭೇಟಿ ನೀಡಿ ದುರಸ್ತಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತುಮಕೂರು ಜಿಲ್ಲೆಯ 10 ತಾಲೂಕುಗಳಿಗೂ ಕುಡಿಯುವ ನೀರು ಒದಗಿಸುವ ಈ ನಾಲೆ ಕಳೆದ ಮೂರು ವರ್ಷಗಳಿಂದಲೂ ಒಡೆದು ಹೋಗುತ್ತಿರುವುದರಿಂದ ಜಿಲ್ಲೆಗೆ ಹರಿಯುವ ನೀರಿನಲ್ಲಿ ಕಡಿತಗೊಂಡು ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಪಕ್ಷದ ಕೆಲ ಮುಖಂಡರೊಂದಿಗೆ ಸಂಸದರು ಭೇಟಿ ನೀಡಿದ್ದರು. ನಾಲಾ ದುರಸ್ತಿ ಕಾರ್ಯದಲ್ಲಿ ತೊಡಗಿರುವ ಹೇಮಾವತಿ ಮುಖ್ಯ ಎಂಜಿನಿಯರ್ ಪದ್ಮನಾಭ್, ಕಾರ್ಯಪಾಲಕ ಎಂಜಿನಿಯರ್ ನಾರಾಯಣ, ಸಹಾಯಕ ಎಂಜಿನಿಯರ್ ಚಿಕ್ಕಮಲ್ಲಯ್ಯ ಅವರಿಂದ ದುರಸ್ತಿ ಕಾಮಗಾರಿ ಕುರಿತು ಮಾಹಿತಿ ಪಡೆದರು.
ದುರಸ್ತಿ ಮಾಡುವಾಗ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮುಂದಿನ ಎಂಟು ದಿನಗಳಲ್ಲಿ ಹೇಮೆಯ ನೀರು ಜಿಲ್ಲೆಗೆ ಹರಿಯಲಿದೆ ಎಂದು ಮುದ್ದಹನುಮೇಗೌಡ ತಿಳಿಸಿದರು. ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ಈ ಭಾಗದಲ್ಲಿ ನಾಲೆ ಒಡೆದು ಹೋಗುತ್ತಿದ್ದು, ಪದೇ ಪದೇ ಹೀಗಾಗಲು ಏನು ಕಾರಣ ಎಂಬುದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ನೀರಾವರಿ ಸಚಿವರು ಹಾಗೂ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ ಸಂಸದರು, ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ನಾಲೆ ಶಿಥಿಲಗೊಂಡಿರುವುದು ಮತ್ತು ಹೊಸ ದಿಂಡು ಹಾಕುವ ಕಾಮ.ಗಾರಿಯಲ್ಲಿ ಕಳಪೆ ಗುಣಮಟ್ಟ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸರಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಕಳಪೆ ಕಾಮಗಾರಿ ನಡೆದು ಸಾರ್ವಜನಿಕರ ಹಣ ಪೋಲಾಗಿರುವುದು ಕಂಡು ಬಂದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ತುಮಕೂರು ಮತ್ತು ನಾಗಮಂಗಲ ನಾಲೆಗಳಿಗೆ ನೀರು ಒದಗಿಸುವ ಹೇಮಾವತಿ ನಾಲೆಯ 0-72 ಕಿ.ಮಿ. ನಾಲೆಯ ಅಗಲೀಕರಣದ ಅಂದಾಜು ರು. 523 ಕೋಟಿ ಯೋಜನೆ ಸಿದ್ಧಗೊಂಡಿದ್ದು, ಕಾವೇರಿ ನೀರಾವರಿ ನಿಗಮದ ಮುಂದಿದೆ. ಅದಕ್ಕೆ ಶೀಘ್ರ ಅನುಮೋದನೆ ನೀಡಿ ಕಾಮಗಾರಿ ಆರಂಭಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು. ನಾಲೆ ಪದೇ ಪದೇ ಒಡೆದು ಹೋಗಲು ಸ್ಪಷ್ಟ ಕಾರಣ ತಿಳಿದು ಬರುತ್ತಿಲ್ಲ. ಆದ್ದರಿಂದ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸಂಸದರೊಂದಿಗೆ ಕಾಂಗ್ರೆಸ್ ಮುಖಂಡರಾದ ಹೊನ್ನಗಿರಿಗೌಡ, ಚೌದ್ರಿರಂಗಪ್ಪ, ಎಚ್.ಎಸ್. ಹೇಮಂತಕುಮಾರ್, ಕೇಂಪೀರೇ ಗೌಡ, ಜಿ.ಪಂ.ಮಾಜಿ ಸದಸ್ಯ ಶಿವರಾಮಯ್ಯ, ಚಿಕ್ಕಸ್ವಾಮಿ ಇನ್ನಿತರ ಮುಖಂಡರು ಜೊತೆಗಿದ್ದರು.
ವಾರದಲ್ಲಿ ತುಮಕೂರು ನಾಲೆಗೆ ಬರಲಿದೆ ನೀರು
ತುಮಕೂರು ಮತ್ತು ನಾಗಮಂಗಲ ನಾಲೆಗಳಿಗೆ ನೀರುಸರಬರಾಜು ಮಾಡುವ ಹೇಮಾವತಿ ಎಡದಂಡೆ ನಾಲೆ 62 ನೇ ಕಿ.ಮಿ.ನಲ್ಲಿ ಒಡೆದಿದ್ದು, ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು,ಮುಂದಿನ 7-8 ದಿನಗಳಲ್ಲಿ ತುಮಕೂರು ನಾಲೆಗೆ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜಯಪ್ರಕಾಶ್ ತಿಳಿಸಿದ್ದಾರೆ. ನೀರು ಪೋಲಾಗುವುದನ್ನು ತಡೆಯುವ ಉದ್ದೇಶದಿಂದ ರು. 2.30 ಕೋಟಿಗಳಲ್ಲಿ ಹೊಸ ಬಂಡ್ ಹಾಕುವ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಒಂದು ವಾರದ ನಂತರ ನೀರು ಹರಿಸಲಾಗಿದ್ದು, ಒತ್ತಡಕ್ಕೆ ಒಡೆದಿರುವ ಶಂಕೆಯಿದೆ. ಒಡೆದಿರುವ ಜಾಗದ ದುರಸ್ತಿ ಕಾಮಗಾರಿ ಆರಂಭವಾಗಿದ್ದು, 4 ಮೀಟರ್ ಬೆಡ್ ಹಾಕುವ ಕಾಮಗಾರಿ ಪೂರ್ಣಗೊಂಡಿದ್ದು, 5 ಮೀಟರ್ ಎತ್ತರಕ್ಕೆ ಎಂಬಾಕ್ಮೆಂಟ್ ನಿರ್ಮಾಣ ಆರಂಭವಾಗಲಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ಈ ಭಾಗದಲ್ಲಿ ನಾಲೆ ಒಡೆದು ಹೋಗುತ್ತಿದ್ದು, ಪದೇ ಪದೇ ಹೀಗಾಗಲು ಏನು ಕಾರಣ ಎಂಬುದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು. ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಕಳಪೆ ಕಾಮಗಾರಿ ನಡೆದು ಸಾರ್ವಜನಿಕರ ಹಣ ಪೋಲಾಗಿರುವುದು ಕಂಡು ಬಂದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು
ಮುದ್ದಹನುಮೇಗೌಡ
ತುಮಕೂರು ಸಂಸದ
ಹೇಮಾವತಿ ಮುಖ್ಯ ನಾಲೆ ಸ್ವಚ್ಛತೆಗೆ ಸೂಚನೆ
ಕುಣಿಗಲ್: ಪಟ್ಟಣದ ದೊಡ್ಡಕೆರೆ ಸೇರಿದಂತೆ ತಾಲೂಕಿನ ವಿವಿಧ ಕೆರೆಗಳಿಗೆ ಕುಡಿಯುವ ನೀರು ಪೂರೈಸುವ ಹೇಮಾವತಿ ಮುಖ್ಯ ನಾಲೆಯಲ್ಲಿ ಕೆಲವೆಡೆ ಕಲ್ಲು ಬಂಡೆಗಳು ಬಿದ್ದಿದ್ದರೆ, ಮತ್ತೆ ಕೆಲವೆಡೆ ಬೃಹದಾಕಾರದ ಮರಗಳು ಬೆಳೆದಿದೆ. ಇನ್ನು ಕೆಲವೆಡೆ ಹೂಳು ತುಂಬಿದ್ದು ತೆರವುಗೊಳಿಸದ ನಾಲಾ ವಲಯದ ಅಧಿಕಾರಿಗಳನ್ನು ಶಾಸಕ ಡಿ. ನಾಗರಾಜಯ್ಯ ತರಾಟೆಗೆ ತೆಗೆದುಕೊಂಡರು. ಶನಿವಾರ ಕುಣಿಗಲ್ ದೊಡ್ಡಕೆರೆ ಮೂಲಕ ನಾಲಾವಲಯದ ಪರಿಶೀಲನೆ ನಡೆಸಿದ ಶಾಸಕರು, ದೊಡ್ಡಕೆರೆಯ ಏರಿಯ ಮೇಲೆ ಜಂಗಲ್ ಕಟ್ ಮಾಡದ ಕಾರಣ ಏರಿಯ ಮೇಲೆ ಮರಗಳು ಬಳೆದಿದ್ದು, ಕೂಡಲೆ ಅಗತ್ಯ ಕ್ರಮ ಕೈಗೊಂಡು ಏರಿ ಸದೃಢವಾಗಿಟ್ಟುಕೊಳ್ಳುವಂತೆ ಶಾಸಕರು ಸೂಚನೆ ನೀಡಿದರು. ಹೇಮಾವತಿ ಮುಖ್ಯನಾಲೆಯ 180ನೇ ಕಿಮಿಯಿಂದ 159ಕಿಮಿವರೆಗೂ ನಾಲೆ ಉದ್ದಕ್ಕೂ ಪರಿಶೀಲನೆ ನಡೆಸಿದ ಶಾಸಕರು, 179ನೇ ಕಿಮಿ ಪ್ರದೇಶದಲ್ಲಿ ನಾಲೆ ಮತ್ತು ನಾಲಾಬದುವಿನಲ್ಲೆ ಮರಗಳು ಬೆಳೆದಿದ್ದು, 176ಕಿಮಿ ನಾಲೆಯಲ್ಲಿ ದೊಡ್ಡಗಾತ್ರದ ಬಂಡೆಗಳು ಬಿದ್ದಿದ್ದವು. ಕೆಲವೆಡೆ ಬಹುತೇಕ ಹೂಳು ತುಂಬಿದ್ದರಿಂದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈಗಾಗಲೆ ಚನ್ನರಾಯಪಟ್ಟಣದ ಬಳಿ ಮುಖ್ಯ ಕಾಲುವೆ ದುರಸ್ತಿಕಾರ್ಯ ಪೂರ್ಣಗೊಂಡು ಕೆಲವೆ ದಿನದಲ್ಲಿ ತಾಲೂಕಿಗೆ ಹೇಮಾವತಿ ನೀರು ಹರಿಸಬೇಕಿದೆ. ಆದರೆ ನಾಲಾ ವಲಯದ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸದಿರುವುದರಿಂದ ನಿಗದಿತ ಅವಧಿಯೊಳಗೆ ಹೇಮಾವತಿ ನೀರು ಹರಿಸಲು ತೊಂದರೆಯಾಗಲಿದೆ. ಇನ್ನೊಂದು ವಾರದೊಳಗೆ ಸಮರೋಪಾದಿಯಲ್ಲಿ ನಾಲೆಯಲ್ಲಿ ಅಡಚಣೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶಾಸಕರ ಜೊತೆ ಇದ್ದ ಜಿಪಂ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ನಾಲಾ ವಲಯದ ಅದಿಕಾರಿಗಳು, ತಮ್ಮ ವ್ಯಾಪ್ತಿಯ ನಾಲೆಗಳ ದುರಸ್ತಿ ಸೇರಿದಂತೆ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಪುರಸಭೆ ಅಧ್ಯಕ್ಷ ಕೆ.ಎಲ್. ಹರೀಶ್, ಹೇಮಾವತಿ ನಾಲಾ ವಲಯದ ಇಇ ನಾಗರಾಜ್, ಎಇಇಕುಣಿಗಲ್ ವಲಯ ಶಿವರಾಜ್, ಎಇಇ ಹೆಬ್ಬೂರು ವಲಯ ಪಾಂಡುರಂಗಶೆಟ್ಟಿ, ಎಇಇ ತುಮಕೂರು ವಲಯ ಶಿವಕುಮಾರಯ್ಯ, ತಾಪಂ ಇಒ ಶಂಕರಪ್ಪ, ಜಿಪಂ ಎಇಇ ಮರಿಗೌಡ, ಸಿಪಿಐ ಧರ್ಮೇಂದ್ರ, ಲೋಕೋಪಯೋಗಿ ಇಲಾಖೆ ಎಇಇ ಲಕ್ಷ್ಮೀಪ್ರಸನ್ನ ಇದ್ದರು.
ಇನ್ನೊಂದು ವಾರದಲ್ಲಿ ದೊಡ್ಡಕೆರೆಗೆ ಹೇಮೆ
ಕುಣಿಗಲ್: ಇನ್ನೊಂದು ವಾರದಲ್ಲಿ ತಾಲೂಕಿನ ದೊಡ್ಡಕೆರೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಹೇಮಾವತಿ ನೀರು ಹರಿಸಲಾಗುವುದು ಎಂದು ಶಾಸಕ ಡಿ. ನಾಗರಾಜಯ್ಯ ತಿಳಿಸಿದರು.ನಾಲೆ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಿಯಮದಂತೆ ನಾಲೆಯ ಕೊನೆಭಾಗದಿಂದ ನೀರು ಹರಿಸಲು ಕ್ರಮಕೈಗೊಳ್ಳುವಂತೆ ಈಗಾಗಲೆ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗಿದೆ. ದೊಡ್ಡಕೆರೆಯ ಮುಂಭಾಗದ ನಾಲಾ ವಲಯದ ಕಾಮಗಾರಿ ಪ್ರಗತಿಯಲ್ಲಿದ್ದು, ಬಿದನಗೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ 190ನೇ ಕಿಮಿ ನಾಲೆ ಕಾಮಗಾರಿ ಪೂರ್ಣಗೊಂಡಿದ್ದು, ಹೆದ್ದಾರಿ ಬದಿಯ ನಾಲೆಗೆ ಹಾಕಿರುವ ಮಣ್ಣನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಜಂಗಲ್ ಕಟ್ ಮತ್ತು ನಾಲೆಹೂಳು ತೆಗೆಯಲು ಹೆಚ್ಚಿನ ಅನುದಾನಕ್ಕೆ ಕಾವೇರಿ ನೀರಾವರಿ ನಿಗಮದ ಎಂಡಿ ಅವರಿಗೆ ಮನವಿ ಸಲ್ಲಿಸಿದ್ದು ಪೂರಕವಾಗಿ ಸ್ಪಂದಿಸಿದ್ದಾರೆ. ಈಗಾಗಲೆ ವಿವಿಧ ಅನುದಾನದಲ್ಲಿ ತಾಲೂಕಿನಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ನಿರ್ವಹಣೆ ಮಾಡದ ಗುತ್ತಿಗೆ ದಾರರಿಗೆ ನೋಟಿಸ್ ಜಾರಿ ಮಾಡುವಂತೆ ಸಂಬಂಧಪಟ್ಟ ಲೋಕೋಪಯೋಗಿ ಎಇಇ ಅವರಿಗೆ ಸೂಚನೆ ನೀಡಲಾಗಿದೆ ಎಂದರು. ಪುರಸಬೆ ಅಧ್ಯಕ್ಷ ಕೆ.ಎಲ್. ಹರೀಶ್, ವಕ್ತಾರ ಕೆ. ರಮೇಶ್ ಇದ್ದರು