ಉಳ್ಳವರು ಶಿವಾಲಯವ ಮಾಡಲಿ
ಚಿಕ್ಕನಾಯಕನಹಳ್ಳಿ: ಮೋಜಿನ ಜೀವನದ ಮೋಹಕ್ಕೆ ಬಲಿಯಾಗಿ ಮಾನವ ಇಂದು ಯಾತ್ರಿಕ ಜೀವನ ಬದುಕನ್ನು ನಡೆಸುತ್ತಿದ್ದಾನೆ. ಇದರಿಂದ ಶಾಶ್ವತ ನೆಮ್ಮದಿ ಕಾಣಲು ಸಾಧ್ಯವಾಗದು ಎಂದು ತಮ್ಮಡೀಹಳ್ಳಿ ಮಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಭಕ್ತರ ನೆರವಿನಿಂದ ಕಟ್ಟಿಸಿರುವ ಶ್ರೀಮರುಳಸಿದ್ದೇಶ್ವರ ಪ್ರಾರ್ಥನಾ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದರು. ಮಾನವ ಇಂದು ಬದುಕುವ ಭರವಸೆಯನ್ನೇ ಕಳೆದುಕೊಂಡಿದ್ದಾನೆ. ಕ್ಷಣಿಕದಲ್ಲಿ ಇಹದ ಎಲ್ಲಾ ಸುಖಗಳನ್ನು
ಅನುಭವಿಸಬೇಕೆಂದು ಬಯಸುವುದರಿಂದ, ಪುಣ್ಯಕಾರ್ಯಗಳಿಗೆ ಮನಸ್ಸು ವಾಲುವುದಿಲ್ಲ. ಇದರಿಂದ ಆತ ಅಲ್ಪಾಯುವಾಗುತ್ತಾನೆ. ಹುಟ್ಟಿಗೆ ಒಂದೇ ದಾರಿಯಾದರೆ, ಸಾವಿಗೆ ನೂರಾರು ದಾರಿ. ಆದ್ದರಿಂದ ಬದುಕಿರುವಷ್ಟು ದಿನ ಪುಣ್ಯಕಾರ್ಯಗಳಲ್ಲಿ ತೊಡಗಿಕೊಳ್ಳೋಣ ಎಂದರು. ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಮರುಳಸಿದ್ದೇಶ್ವರರು 400 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ನಿಡುವಳ್ಳಿಯಲ್ಲಿ ಜನಿಸಿದರು. ಭಕ್ತರ ಉದ್ಧಾರಕ್ಕಾಗಿ ಹಲವಾರು ಕಡೆ ಸಂಚರಿಸುತ್ತಾ, ತಮ್ಮ ಪವಾಡಗಳನ್ನು ಮೆರೆದರು. ಕೆಲವೆಡೆ ಶಾಂತಮೂರ್ತಿಯಾಗಿ ಕಂಡರೆ, ಹಲವೆಡೆ ಉಗ್ರಸ್ವರೂಪಿಯಾಗಿ ಕಾಣುತ್ತಾರೆ. ಆದರೂ ಆತನ ಗದ್ದಿಗೆಗಳಿರುವಲ್ಲಿ ಭಕ್ತರಿಗೆ ಪ್ರಸಾದದ ಕೊರತೆಯಾಗದಂತೆ ದಾಸೋಹ ವ್ಯವಸ್ಥೆಯಾಗಿರುವುದು ಮರುಳಸಿದ್ದನ ಮಹಿಮೆಗೆ ಸಾಕ್ಷಿಯಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೂ ರಾಜಕಾರಣಿಗಳು ಗಂಟೆಗಟ್ಟಲೆ ಕಾಯಿಸಿ ಬರುವುದಕ್ಕೆ ಆಕ್ಷೇಪಿಸಿದರು.
ಸಂತೋಷದ ಸಂಗತಿ: ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ. ಜಯಚಂದ್ರ ಅವರು ತಡವಾಗಿ ಬಂದಿದ್ದಕ್ಕೆ ಉಭಯ ಶ್ರೀಗಳ ಕ್ಷಮೆಯಾಚಿಸುತ್ತಾ, ನಿಜವಾಗಿಯು ಇದೊಂದು ಅದ್ಭುತ ಕಾರ್ಯವೆಂದು ಹೇಳಿದರೆ ತಪ್ಪಾಗಲಾರದು. 90 ಲಕ್ಷರು.ಗಳ ಇಡೀ ಪ್ರಾರ್ಥನಾ ಮಂದಿರದ ವೆಚ್ಚವನ್ನು ದಾನಿಗಳಾದ ಸತೀಶ್ ಅವರೊಬ್ಬರೇ ಭರಿಸಿರುವುದು ದುರಾಸೆಯ ಮನಸ್ಥಿಯ ಜನರೇ ತುಂಬಿರುವ ಈ ಕಾಲದಲ್ಲಿ ಆಶ್ಚರ್ಯವಾಗಿದೆ. ಸಿರಿಬಂದ ಕಾಲದಲ್ಲಿ ಕರೆದು ದಾನವ ಮಾಡಿ ಎಂಬಂತೆ ಅವರು ಭಕ್ತರ ಅನುಕೂಲಕ್ಕಾಗಿ ಇಂತಹ ಅದ್ಭುತ ಕಾರ್ಯ ಮಾಡಿರುವುದು ನನ್ನ ಮನಸ್ಸಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.
ಹಿಂದು ಧರ್ಮದ ಸಂಸ್ಕೃತಿ ಉಳಿದಿದ್ದರೆ ಅದು ಮರುಳಸಿದ್ದ, ಸಿದ್ದಲಿಂಗೇಶ್ವರ ಮತ್ತು ಸಿದ್ದರಾಮರಂತಹ ಶರಣರಿಂದ. 12ನೇ ಶತಮಾನದ ಶರಣರ ಕಾಲದಲ್ಲಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರುಎಂದರು.
ತೂಲಾಕು ಪಂಚಾಯ್ತಿ ಅಧ್ಯಕ್ಷ ಕೆಂಕೆರೆ ನವೀನ್, ದಾನಿಗಳಾದ ಸತೀಶ್, ಪುರಸಭಾಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ, ತಹಸೀಲ್ದಾರ್ ಕಾಮಾಕ್ಷಮ್ಮ ಮುಂತಾದವರಿದ್ದರು.