ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಧರ್ಮನಿರ್ಲಕ್ಷ್ಯದಿಂದ ಜ್ಞಾನ ವಿಕಸನ ಅಸಾಧ್ಯ

Srinivasa Murthy VN
Updated On : 9 Feb 2014, 11:12 am

ತುಮಕೂರು: ಶಿಕ್ಷಣ ಎಂಬ ಪವಾಡಸದೃಶ ಸಂಸ್ಕಾರ ಸಮಾಜದ ಎಲ್ಲ ಸಮಸ್ಯೆಗಳಿಗೆ ದಿವ್ಯೌಷಧ. ಮಾನವನ ಇಚ್ಛಾಶಕ್ತಿಯ ಅಭಿವ್ಯಕ್ತತೆಯನ್ನು ಸಕಾರಾತ್ಮಕವಾದ ನಿಗ್ರಹಕ್ಕೆ ಒಳಪಡಿಸಿದಾಗ ಶಿಕ್ಷಣವು ನಮ್ಮ ಶರೀರ, ಮನಸ್ಸು, ಇಂದ್ರಿಯಗಳನ್ನು ಪರಿವರ್ತಿಸುವ ಶಕ್ತಿಯನ್ನು ದೊರಕಿಸಿಕೊಡುತ್ತದೆ ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ಸ್ವಾಮಿ ಮುಕ್ತಿದಾನಂದರು ಹೇಳಿದರು.
ಆವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ  ಶಿಕ್ಷಕರ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದರು. ಮಾನವನಲ್ಲಿ ಪರಿಪೂರ್ಣ ಜ್ಞಾನ ವಿಕಸನಕ್ಕೆ ಸಮರ್ಪಕ ವಿಚಾರಧಾರೆ ದೊರೆಯದೆ ಆಧುನಿಕ ಶಿಕ್ಷಣವೆಂಬುದು ಪ್ರಸ್ತುತ ಸಮಾಜದಲ್ಲಿ ಸಂಕಟ, ಕ್ಲೇಶ, ಧರ್ಮಾಂಧತೆ, ವಿರೋಧಾಭಾಸಗಳಿಗೆ ಎಡೆ ಮಾಡಿಕೊಟ್ಟಿರುವುದರಿಂದ ಧರ್ಮ ನಿರ್ಲಕ್ಷ್ಯದ ಬದುಕು ಸ್ವಾರ್ಥ ಹಾಗೂ ಮೋಜಿನ ಜೀವನಕ್ಕೆ ನಾಂದಿಯಾಗಿದೆ  ಎಂದು ನುಡಿದರು.
ಜನ್ಮಸಿದ್ಧ ಹಕ್ಕು: ಸ್ವಾಮಿ ವಿವೇಕಾನಂದರು ಆಪೇಕ್ಷಿಸಿದಂತೆ ಮಾನವನ ಸಹಜ ಸ್ವರೂಪವಾದ ದಿವ್ಯತೆಯನ್ನು ಬದುಕಿನ ಪ್ರತಿ ಚಲನವಲನದಲ್ಲಿಯೂ ಅಭಿವ್ಯಕ್ತವಾಗುವಂತೆ ಜೀವನೋದ್ದೇಶವನ್ನು ಮೈಗೂಡಿಸಿಕೊಳ್ಳುವುದು ಮಾನವನ ಜನ್ಮಸಿದ್ಧ ಹಕ್ಕಾಗಿದೆ. ಆದ್ದರಿಂದ ಇಂದಿನ ಜಾತ್ಯತೀತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಯನ್ನು ಕೇವಲ ದೇಹ ಮತ್ತು ಮನಸ್ಸುಗಳ ಬೆಳವಣಿಗೆಯ ಮಟ್ಟಕ್ಕೆ ಸೀಮಿತವಾಗಿಸಿ ಅದನ್ನು ಜೈವಿಕ ಪ್ರಕ್ರಿಯೆಯಾಗಿ ಅಪರಿಪೂರ್ಣಗೊಳಿಸಿದ್ದೇವೆ. ನಿಜಕ್ಕೂ ಪ್ರಾಚೀನ ಭಾರತವು ಜ್ಞಾನ, ಮಾನವೀಯತೆ, ಮೌಲ್ಯಗಳಿಗೆ ಆಧಾರವನ್ನಾಗಿಸಿದ್ದ ಶಿಕ್ಷಣವೆಂಬ ದಿವ್ಯೌಷಧವನ್ನು ಸಂಕೀರ್ಣಗೊಳಿಸಿ ಜಾತ್ಯತೀತ ಶಿಕ್ಷಣದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದೆ ಎಂದರು. ಆದ್ದರಿಂದ ನಾವು ಪ್ರಾಚೀನ ಭಾರತವು ಪ್ರತಿಪಾದಿಸಿದ್ದ ಶೈಕ್ಷಣಿಕ ವ್ಯವಸ್ಥೆಗೆ ಮಣಿದು ಅದನ್ನು ನಮ್ಮ ಸಮಾಜದಲ್ಲಿ ಪುನಃ ಪ್ರತಿಷ್ಠಾಪಿಸುವ ಅನಿವಾರ್ಯತೆ ಇದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಿಕ್ಷಕರ ಕರ್ತವ್ಯ: ಇದೇ ಸಂದರ್ಭದಲ್ಲಿ ಗದಗ-ಬಿಜಾಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ನಿರ್ಭಯಾನಂದರು ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿದ್ಯಾಭ್ಯಾಸದ ಪ್ರಾರಂಭವು ಮರುಹುಟ್ಟು ಎಂದೇ ಪರಿಗಣಿಸಲ್ಪಟ್ಟಿದ್ದು ಮಕ್ಕಳ ಮನಸ್ಸಿನಲ್ಲಿ ವಿನೂತನವಾದುದನ್ನು ಶ್ರದ್ಧೆಯಿಂದ ಕಲಿಯಲು ಉತ್ಸುಕತೆ ಹಾಗೂ ಕಾತರತೆಯನ್ನು ಮೂಡಿಸಬೇಕಾದುದು ಶಿಕ್ಷಕನ ಕರ್ತವ್ಯವಾಗಿರುತ್ತದೆ ಎಂದರು.
ಆತನು ವಿದ್ಯಾರ್ಥಿಗಳಲ್ಲಿ ಅನವಶ್ಯಕವಾದುದರ ಕುರಿತಾದ ವಿಚಾರಗಳಲ್ಲಿ ನಿರ್ಲಕ್ಷ್ಯ ಹಾಗೂ ಅತ್ಯವಶ್ಯಕವಾದ ವಿಚಾರಗಳಲ್ಲಿ ಶ್ರದ್ಧೆ, ವ್ಯಾಕುಲತೆ ಹಾಗೂ ವ್ರತಬದ್ಧತೆಯನ್ನು ವಣದ್ಧಿಸಿ ಆತನನ್ನು ಸಂಸ್ಕಾರಸಂಪನ್ನ ಸಮಾಜಜೀವಿಯನ್ನಾಗಿ ರೂಪಿಸಬೇಕು. ಸದ್ಗುಣ ಸಾಮರ್ಥ್ಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಮೇಳೈಸಿಕೊಂಡ ಶಿಕ್ಷಕರು ಮಾತ್ರವೇ ರಾಷ್ಟ್ರಕ್ಕೆ ಸತ್ಪ್ರೆಜೆಗಳನ್ನು ನೀಡಬಲ್ಲರು ಎಂದರು. ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಚರ್ಚಾಸ್ಪರ್ಧೆ ಹಾಗೂ ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪರ್ಯಾಯ ಪಾರಿತೋಷಕ ಹಾಗೂ ವಿಶೇಷ ಬಹುಮಾನಗಳನ್ನು ನೀಡಲಾಯಿತು. ತುಮಕೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ 1200 ಶಿಕ್ಷಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಪತ್ರಕರ್ತ ಹುಣಸವಾಡಿ ರಾಜನ್ ಹಾಗೂ ತುಮಕೂರು ಜಿಲ್ಲೆಯ ಶಿಕ್ಷಣ ಉಪನಿರ್ದೇಶಕ ಈಶ್ವರಯ್ಯ,  ಗೋಪಾಲಕೃಷ್ಣ ಮತ್ತು ಶಿಕ್ಷಣಾಧಿಕಾರಿ ನಂಜಯ್ಯ ಹಾಗೂ ಕುಮುದಮ್ಮ ಉಪಸ್ಥಿತರಿದ್ದರು. ಸ್ವಾಮಿ ವೀರೇಶಾನಂದ ಸರಸ್ವತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಎನ್. ಕೃಷ್ಣಮೂರ್ತಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement