ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿಷ್ಪ್ರಯೋಜಕ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಸಿತ

Srinivasa Murthy VN
Updated On : 9 Feb 2014, 11:13 am

ತುಮಕೂರು: ಅಮೆರಿಕದ ಆರ್ಥಿಕ ಮುಗ್ಗಟ್ಟು ಮತ್ತು ಪೌರಾತ್ಯ ರಾಷ್ಟ್ರಗಳ ಹಿಂಜರಿತ ಮತ್ತು ರಾಜಕಾರಣಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೈಗೊಳ್ಳುವ ಹಲವಾರು ನಿಷ್ಪ್ರಯೋಜಕ ಯೋಜನೆಗಳಿಂದ ಭಾರತದ ಆರ್ಥಿಕ ಕುಸಿತ ಮತ್ತು ರುಪಾಯಿಯ ಅಪಮೌಲ್ಯೀಕರಣಕ್ಕೆ ಕಾರಣವೆಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಟಿ.ಗಂಗಾಧರಯ್ಯ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ, ಅರ್ಥಶಾಸ್ತ್ರ ವೇದಿಕೆ ಉದ್ಘಾಟನೆ ಮತ್ತು  ಕರೆನ್ಸಿ ಅಪಮೌಲ್ಯೀಕರಣ ಮತ್ತು ಅದರ ಪರಿಣಾಮಗಳನ್ನು ಕುರಿತು ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಒಂದು ರು.ಗೆ ಒಂದು ಕೆ.ಜಿ. ಅಕ್ಕಿಯನ್ನು ನೀಡುವುದರಿಂದ ದುಡಿಯುವ ಮನಸ್ಸುಗಳು ಕೂಡ ಸೋಮಾರಿಗಳಾಗುತ್ತಿರುವುದನ್ನು ನೋಡಿದರೆ, ಮಣ್ಣಿನಲ್ಲಿಯೇ ಹುಟ್ಟಿ ಮಣ್ಣಿನಲ್ಲಿಯೇ ಬೆಳೆದ ರೈತನ ನೋವನ್ನು ಅರಿಯಲು ರಾಜಕಾರಣಿಗಳಿಂದ ಸಾಧ್ಯವಾಗುತ್ತಿಲ್ಲವೇ ಆಯ್ಕೆಯಾದ ರಾಜಕಾರಣಿಗಳು ಚೀಪ್  ಪಾಪ್ಯುಲಾರಿಟಿಯನ್ನು ಪಡೆಯಲು ಈ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದನ್ನು ನೋಡಿದರೆ, ಮುಂದಿನ ಪೀಳಿಗೆಯ ಬಗ್ಗೆ ಅರಿವಿಲ್ಲದಿರುವುದು ಗೋಚರವಾಗುತ್ತದೆ ಎಂದರು.
ಸರ್ಕಾರದ ಯೋಜನೆ ಕಾರಣ: ಆಶಯ ನುಡಿಗಳನ್ನಾಡಿದ ವಿಭಾಗದ ಮುಖ್ಯಸ್ಥರೂ, ಆರ್ಥಿಕ ತಜ್ಞೆಯೂ ಆದ ಡಾ.ಲೀಲಾಲೇಪಾಕ್ಷ್ ಅವರು ಮಾತನಾಡುತ್ತಾ, ರು. ಅಪಮೌಲ್ಯವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲವೇಕೆಂದರೆ, ಸರ್ಕಾರ ಹಾಕಿಕೊಳ್ಳುವ ಯೋಜನೆಗಳೇ ಕಾರಣವೆಂದರು. ಕಳೆದ 9 ತಿಂಗಳಿನಿಂದ ರುಪಾಯಿ ಶೇ. 13.50 ರಷ್ಟು ಅಪಮೌಲ್ಯವಾಗಿದ್ದು, ಸ್ವಾತಂತ್ರ್ಯಾ ನಂತರದಲ್ಲಿ ಇದುವರೆವಿಗೂ 62 ಬಾರಿ ಅಪಮೌಲ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಿಕ್ಕಹನುಮಯ್ಯ ಮಾತನಾಡುತ್ತಾ ಅರ್ಥಶಾಸ್ತ್ರದ ಆರ್ಥಿಕ ಯೋಜನೆಗಳನ್ನು, ನೀತಿಗಳನ್ನು ಸರಿಯಾಗಿ ಅರಿಯುವಲ್ಲಿ ಯುವಕರು ವಿಫಲರಾಗಿದ್ದಾರೆಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜಗದೀಶ್ ಅವರು ಅರ್ಥಶಾಸ್ತ್ರ ಅಧ್ಯಯನ ವೇದಿಕೆ ಇನ್ನು ಹೆಚ್ಚಿನ ಇಂತಹ ವಿಚಾರ ಸಂಕಿರಣಗಳನ್ನು ನಡೆಸಲೆಂದು ಆಶಿಸಿದರು. ಹಿರಣ್ಮಯಿ ಪ್ರಾರ್ಥಿಸಿದರು. ಶೋಭಾ ಮತ್ತು ಸಂಗಡಿಗರು ನಾಡಗೀತೆಯನ್ನ ಹಾಡಿದರು. ಉಪನ್ಯಾಸಕ ಜಿ.ತಿಪ್ಪೇಸ್ವಾಮಿ ಸ್ವಾಗತಿಸಿದರೆ, ಜಿ.ಕೆ.ನಾಗರಾಜ್ ವಂದಿಸಿದರು. ಶಿವಕುಮಾರಸ್ವಾಮಿ ಪರಿಚಯಿಸಿದರೆ, ಅಶ್ವಿನಿ ನಿರೂಪಿಸಿದರು.

ಎತ್ತ ಕೊಂಡೊಯ್ಯುತ್ತಿದೆ
ನವೋದಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಸಿ.ಬಸಪ್ಪನವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ಭಾರತ ಇಂದಿನ ಯುವ ಜನಾಂಗವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದೆ ಪ್ರಶ್ನಾರ್ಹವೆಂದರು. ಬಹು ರಾಷ್ಟ್ರೀಯ ಕಂಪೆನಿಗಳು ಮತ್ತು ರಾಜಕಾರಣಿಗಳು ಯುವ ಜನರನ್ನು ಸ್ಮಶಾನಕ್ಕೆ ಕೊಂಡೊಯ್ಯುತ್ತಿದೆಯೇ ಎಂದು ಪ್ರಶ್ನಿಸಿದರು. 4.8 ವಿತ್ತೀಯ ಕೊರತೆಯನ್ನಿಟ್ಟುಕೊಂಡು 800 ಕೋಟಿ ರು.ಯನ್ನು ಮುಂಬರುವ ಲೋಕಸಭಾ ಚುನಾವಣೆಗೆ ಖರ್ಚು  ತಗಲುತ್ತದೆಂದು ಹೇಳಲು ನಾಚಿಕೆಯಾಗುವುದಿಲ್ಲವೆ ಎಂದು ಪ್ರಶ್ನಿಸುತ್ತಾ, ಪ್ರಜಾಪ್ರಭುತ್ವದ ಬಂಡವಾಳಶಾಹಿಗಳೇ ರಾಷ್ಟ್ರವನ್ನು ಸಾಲದ ದವಡೆಗೆ ನೂಕುತ್ತಾ, ನಮ್ಮಂತಹ ಮಧ್ಯಮ ವರ್ಗದವರಿಗೆ ಹೆಚ್ಚು ಹೊರೆ ಬೀಳಲು ಕಾರಣವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement