ಮಕ್ಕಳು ಸೃಜನಾತ್ಮಕ ಬರವಣೆಗೆ ರೂಢಿಸಿಕೊಳ್ಳಲಿ
ತಿಪಟೂರು: ಮಕ್ಕಳಲ್ಲಿರುವ ಸೃಜನಾತ್ಮಕ ಪ್ರತಿಭೆಯನ್ನು ಹೊರತರುವಲ್ಲಿ ಕ್ರಿಯಾತ್ಮಕ ಬರವಣಿಗೆ ಹಾಗೂ ಸಾಹಿತ್ಯ ಕಟ್ಟುವ ಕಾರ್ಯಕ್ರಮ ಸಹಕಾರಿಯಾಗಲಿವೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಾಲಭವನದ ಸೊಸೈಟಿ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 8ರಿಂದ 16ರ ವಯಸ್ಸಿನ ಮಕ್ಕಳಿಗಾಗಿ ಕಥೆ, ಕವನ, ಪ್ರಬಂಧ ಕುರಿತು ಕ್ರಿಯಾತ್ಮಕ ಬರವಣಿಗೆ ಕಾರ್ಯಾಗಾರ ಮತ್ತು ಮಕ್ಕಳ ಸಾಹಿತ್ಯ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಪಠ್ಯಪುಸ್ತಕಗಳಿಗೇ ಸೀಮಿತವಾಗದೆ ಪಠ್ಯೇತ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಥೆ, ಕವನಗಳ ರಚನೆಯ ಮೂಲಕ ತಮ್ಮಲ್ಲಿರುವ ಜ್ಞಾನಾರ್ಜನೆಯನ್ನು ಸಂಪಾದಿಸುವ ಜೊತೆಗೆ ಸೃಜನಾತ್ಮಕ ಬರವಣೆಗೆಯನ್ನು ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ತಾ.ಪಂ.ಅಧ್ಯಕ್ಷೆ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಎಸ್. ರಾಜು, ಬಿಇಓ ಪ್ರಭುಸ್ವಾಮಿ ಮಾತನಾಡಿದರು. ಸಿಡಿಪಿಓ ಪಿ. ಓಂಕಾರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಕೆ.ಎನ್. ರೇಣುಕಯ್ಯ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ 60ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ಪ್ರತಿಭಾವಂತ ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆಮಾಡಿ ಮಕ್ಕಳ ಸಾಹಿತ್ಯ ಕಮ್ಮಟಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ಕಾರ್ಯಾಗಾರದಲ್ಲಿ ಇಸಿಓಗಳಾದ ಬಸವರಾಜು, ಆರ್. ರಾಥೋಡ್, ಸಹ ಶಿಕ್ಷಕ ಜುಂಜಯ್ಯ ಮತ್ತಿತರರಿದ್ದರು.
ರೂಪಶ್ರೀ ಪ್ರಾರ್ಥಿಸಿ, ಗೋಪಾಲಸ್ವಾಮಿ ಸ್ವಾಗತಿಸಿ, ಸಿಆರ್.ಪಿ ಸೋಮಶೇಖರ್ ನಿರೂಪಿಸಿ, ಇಸಿಓ ಕೋಡಾಚಾರ್ ವಂದಿಸಿದರು.