ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ: ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಜಿಜ್ಞಾಸೆಗೊಳಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಯಿತು.
ಶನಿವಾರ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರಾರಂಭದಲ್ಲೇ ಅನೇಕ ಆಕ್ಷೇಪಣೆಗಳು ವ್ಯಕ್ತವಾದವು. ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ ಸಾಹಿತ್ಯ ಸಮ್ಮೇಳನದ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುವಾಗ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿತ್ತು. ಕೆಲವೇ ಮಂದಿ ಹುಳಿಯಾರಿನಲ್ಲಿ ಸೇರಿ ಕೈಗೊಂಡ ಏಕಪಕ್ಷೀಯ ತೀರ್ಮಾನದಿಂದ ಇಂದು ಗೊಂದಲಗಳುಂಟಾಗಿವೆ ಎಂದರು. ಪುರಸಭೆಯ ಸ್ಥಾಯಿಸಮಿತಿ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಆಜೀವ ಸದಸ್ಯರ ಸಭೆ ಕರೆಯದೆ ತೀರ್ಮಾನ ಕೈಗೊಂಡಿದ್ದು ಮೊದಲ ತಪ್ಪಾಗಿದೆ. ಜಿಲ್ಲಾ ಸಮ್ಮೇಳನವನ್ನು ಇದೀಗ ತಾನೆ ಮಾಡಿರುವುದರಿಂದ
ತಾಲೂಕು ಸಮ್ಮೇಳನದ ಅವಶ್ಯಕತೆಯಿರಲಿಲ್ಲ. ಈ ಮುಂಚೆ ಹುಳಿಯಾರು ಹೋಬಳಿ ಸಮ್ಮೇಳನಕ್ಕೆ ಎಚ್.ಎಸ್. ಶಿವಲಿಂಗಯ್ಯನವರನ್ನು ಸಮ್ಮೇಳನಾಧ್ಯಕ್ಷರನ್ನಾಗಿಯು, ಕಸಬಾ ಹೋಬಳಿ ಸಮ್ಮೇಳನಕ್ಕೆ ಸಿ.ಕೆ.ಪರಶುರಾಮಯ್ಯನವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಸಮ್ಮೇಳನವನ್ನು ನಡೆಸುವುದಾಗಿ ಘೋಷಿಸಿ ಯಾವುದನ್ನು ಮಾಡಲಿಲ್ಲ. ನಂತರ ಏಕಾಏಕಿ ಹುಳಿಯಾರಿನಲ್ಲಿ ಸಭೆ ಸೇರಿ ಹುಳಿಯಾರು ನಟರಾಜ್ ಅವರನ್ನು ಸಮ್ಮೇಳನಾಧ್ಯಕ್ಷರೆಂದು ಘೋಷಿಸಿ ಹುಳಿಯಾರಿನಲ್ಲೇ ಸಮ್ಮೇಳನವನ್ನು ನಡೆಸುವುದಾಗಿ ಪ್ರಚಾರ ಮಾಡಿ,ಈಗ ಹುಳಿಯಾರಿನಲ್ಲಿ ಸಮ್ಮೇಳನ ನಡೆಸಿದರೆ ವಿಷ ಕುಡಿಯುತ್ತೇನೆ, ನೇಣುಹಾಕಿಕೊಳ್ಳುತ್ತೇನೆಂದು ಹೇಳಿದರೆಂದು, ಸಮ್ಮೇಳನದ ಸ್ಥಳಬದಲಾವಣೆ ಮಾಡಿದ್ದೀರಿ. ಇಲ್ಲಿಯು ಯಾರಾದರು ಅದೇ ರೀತಿ
ಬ್ಲಾಕ್ಮೇಲ್ ಮಾಡಿದರೆ ಪುನಃ ನಿಮ್ಮ ಕಾರ್ಯಕ್ರಮವನ್ನು ಬದಲಾಯಿಸಿಕೊಳ್ಳುವುದಿಲ್ಲವೆಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.
ಗೊಂದಲಮಯವಾಯಿತು: ಕಸಾಪ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಮಾತನಾಡಿ ಹುಳಿಯಾರಿನಲ್ಲಿ ಸಮ್ಮೇಳನ ನಡೆಸುವ ಬಗ್ಗೆ ತಾಲೂಕಿನ ಆಜೀವ ಸದಸ್ಯರ ಸಭೆಯನ್ನು ಹುಳಿಯಾರಿನಲ್ಲಿ ಕರೆಯಲಾಗಿತ್ತು. ಜಿಲ್ಲಾ ಸಮ್ಮೇಳನವನ್ನು ನಡೆಸಿರುವುದರಿಂದ, ತಾಲೂಕು ಸಮ್ಮೇಳನ ನಡೆಸುವ ಬಗ್ಗೆ ಸಮಿತಿಯಲ್ಲಿ ತೀರ್ಮಾನಕ್ಕೆ ಬರಲಾಯಿತು ಎಂದರು. ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರರನ್ನು ಉದ್ಘಾಟನೆಗೆ ಕರೆಸಿ, ಹುಳಿಯಾರು ನಟರಾಜ್ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಸಬೇಕೆಂಬ ಇರಾದೆ ಕಸಾಪಗಿತ್ತು. ಆದರೆ ತ.ಶಿ. ಬಸವಮೂರ್ತಿಯವರ ನಿಲುವಿನಿಂದಾಗಿ ಎಲ್ಲಾ ಗೊಂದಲಮಯವಾಯಿತು ಎಂದರು.
ನಂತರ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಮ್ಮೇಳನವನ್ನು ನಡೆಸೋಣ. ನಾವೇ ತ.ಶಿ.ಬಸವಮೂರ್ತಿಯವರ ಮನೆಗೆ ಹೋಗಿ ಅವರ ಮನವೊಲಿಸಿ ಕರೆತರುವ ಪ್ರಯತ್ನ ಮಾಡೋಣ ಎಂದು ಸಭೆಯಲ್ಲಿ ತಿಳಿಸಿ, ಸಭೆಯನ್ನು ಬರಕಾಸ್ತು ಮಾಡಿ, ಬಸವಮೂರ್ತಿಯವರ ಮನವೊಲಿಕೆಗೆ ತಹಸೀಲ್ದಾರ್ ಮತ್ತು ಕಸಾಪ ಅಧ್ಯಕ್ಷರೊಂದಿಗೆ ಶಾಸಕರು ಹುಳಿಯಾರಿನ ದಾರಿ ಹಿಡಿದರು.
ಸಭೆಯಲ್ಲಿ ಪುರಸಭಾಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ನೇತ್ರಾವತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಮುಂತಾದವರಿದ್ದರು.