ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುಜೀವನ ಕಾರ್ಯಕ್ರಮ ಯಶಸ್ಸು ಅನುಕರಣೀಯ

Srinivasa Murthy VN
Updated On : 9 Feb 2014, 11:14 am

ತುಮಕೂರು: ಕುಣಿಗಲ್ ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಸುಜೀವನ ಕಾರ್ಯಕ್ರಮ ನಿಮ್ಮೆಲ್ಲರ ಸಹಕಾರದಿಂದ ಯಶಸ್ಸು ಕಂಡಿದೆ. ನಾವು ಹಾಕಿದ ಶ್ರಮಕ್ಕೆ ಪ್ರತಿಫಲವನ್ನು ಇಂದು ನಿಮ್ಮ ಭಾಗವಹಿಸುವಿಕೆಯ ರೂಪದಲ್ಲಿ ಕಾಣುತ್ತಿದ್ದೇವೆ. ಇದೊಂದು ಅನುಕರಣೀಯ ಪ್ರಯತ್ನ ಎಂದು ವಟ್ಟಿಕುಟಿ ಇಂಡಿಯಾ ಫೌಂಡೇಷನ್ನಿನ ಚೇರ್ಮನ್ ರಾಜ್ ವಟ್ಟಿಕುಟಿ ಅಭಿಪ್ರಾಯಪಟ್ಟರು.
ಅವರು ಕುಣಿಗಲ್ ತಾಲೂಕಿನ ಸಂತೆಮಾವತ್ತೂರಿನಲ್ಲಿ ನಡೆದ ಸ್ವಸಹಾಯ ಸಂಘಗಳ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ  ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ಪ್ರತಿಯೊಂದು ಕುಟುಂಬದಲ್ಲೂ ಕನಿಷ್ಠ ಒಬ್ಬರಾದರೂ ಕಾಲೇಜು ಶಿಕ್ಷಣ ಪಡೆಯುವಂತಾಗಲಿ  ಎಂದು ಭಾಗವಹಿಸಿದ ಸ್ವಸಹಾಯ ಸಂಘಗಳ ಸದಸ್ಯರಲ್ಲಿ ಮನವಿ ಮಾಡಿಕೊಂಡರು.
ಇನಿಶಿಯೇಟಿವ್ಸ್ ಫಾರ್ ಡೆವಲಪ್‌ಮೆಂಟ್ ಫೌಂಡೇಷನ್ (ಐ.ಡಿ.ಎಫ್.) ಸಂಸ್ಥೆಯು ವಟ್ಟಿಕುಟಿ ಫೌಂಡೇಷನ್ನಿನ ಸಹಯೋಗದೊಂದಿಗೆ ಕುಣಿಗಲ್ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸುಜೀವನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, 32 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ. ಸಮುದಾಯ ಸಂಘಟನೆ, ಆರ್ಥಿಕ ಸೇರ್ಪಡೆ, ಸುಸ್ಥಿರ ಕೃಷಿಗೆ ಉತ್ತೇಜನ, ಒಕ್ಕೂಟ ರಚನೆ ಮುಂತಾದ ಅನೇಕ ಚಟುವಟಿಕೆಗಳು ಇದರಲ್ಲಿ ಒಳಗೊಂಡಿವೆ.
ಯಂತ್ರ ವಿತರಣೆ: ಈ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಎಪ್ಪತ್ತೆರಡು ಸ್ವಸಹಾಯ ಮತ್ತು ಕೃಷಿಕ ಸಂಘಗಳಿಗೆ (ತಲಾ 36 ಸ್ವಸಹಾಯ ಮತ್ತು ಕೃಷಿಕ ಸಂಘಗಳು) ಅಭಿನಂದನಾ ಪತ್ರ ಹಾಗೂ ಔಷಧ ಸಿಂಪರಣಾ ಯಂತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಸುಜೀವನ ಒಕ್ಕೂಟದ ಡಿ.ರಮೇಶ್ ಅವರು ಮಾತನಾಡಿ  ಈ ಕಾರ್ಯಕ್ರಮವು ನಮ್ಮ ತಾಲೂಕಿನಲ್ಲಿ ನಿರಂತರವಾಗಿ ಮುಂದುವರಿಯಬೇಕು ಹಾಗೂ ಇತರೆ ತಾಲೂಕುಗಳಿಗೂ ಹರಡಬೇಕು  ಎಂದರು.
ಈ ಸಂದರ್ಭದಲ್ಲಿ ವೀಸಾ ಸಂಸ್ಥೆಯ ದಕ್ಷಿಣ ಏಷ್ಯಾ ಮಟ್ಟದ ವ್ಯವಸ್ಥಾಪಕ ಉತ್ತಮ್ ನಾಯಕ್ ಹಾಗೂ ಅದೇ ಸಂಸ್ಥೆಯ ವಿಷಾಲ್ ನರ್ವಾಲ್ ಅವರು ಹಾಜರಿದ್ದರು.
ಹಂಚಿಕೊಂಡ ಅನುಭವ: ಯೋಜನೆಯ ಫಲಾನುಭವಿಗಳ ಪರವಾಗಿ ಚೌಡನಕುಪ್ಪೆ ಗ್ರಾಮದ ಸರಸ್ವತಿ, ಜಯಂತಿ ಹಾಗೂ ಜಿನ್ನಾಗರ ಗ್ರಾಮದ ರಮೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಐದು ರುಪಾಯಿ ಸಾಲ ಪಡೆಯಲೂ ಪರದಾಡುವ ಕುಟುಂಬಗಳಿಗೆ ಈ ಯೋಜನೆಯು ಐವತ್ತು ಸಾವಿರದವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ ಕಲ್ಪಿಸಿರುವುದಲ್ಲದೇ ಸುಸ್ಥಿರ ಕೃಷಿ ತಂತ್ರಜ್ಞಾನವನ್ನು ಹೊಲ ಮನೆಯತನಕ ತಲುಪಿಸಿ, ರೈತಜೀವನೋಪಾಯ ಗಟ್ಟಿ ಮಾಡಿರುವುದನ್ನು ಅವರು ವಿಶೇಷವಾಗಿ ಸ್ಮರಿಸಿದರು. ವಿವೇಕಾನಂದ ಎನ್. ಸಾಲಿಮಠ್ ಅವರು ಎಲ್ಲರನ್ನೂ ಸ್ವಾಗತಿಸಿದರೆ, ಟಿ.ವಿ.ಶ್ರೀಕಾಂತ್ ಶೆಣೈ ವಂದಿಸಿ, ಸತ್ಯಮಾಧವ ಅವರು ಪ್ರಗತಿಯ ಕಿರುವರದಿಯನ್ನು ಮಂಡಿಸಿದರು ಹಾಗೂ ಮು.ಲ. ಕೆಂಪೇಗೌಡ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement