ಅಪೂರ್ಣಗೊಂಡಿರುವ ಹೆಬ್ಬೂರು ಅಂಬೇಡ್ಕರ್ ಭವನ
ತುಮಕೂರು: ಸುಮಾರು 10 ವರ್ಷಗಳಿಂದ ಚಾಲನೆಯಲ್ಲಿರುವ ತುಮಕೂರು ಗ್ರಾಮಾಂತರದ ಹೆಬ್ಬೂರು ಅಂಬೇಡ್ಕರ್ ಭವನದ ಕಾಮಗಾರಿ ಇನ್ನೂ ಮುಗಿದಿಲ್ಲ. ಕಾಂಗ್ರೆಸ್, ಕಾಂಗ್ರೆಸ್- ಜೆಡಿಎಸ್, ಜೆಡಿಎಸ್-ಬಿಜೆಪಿ, ನಂತರ ಬಿಜೆಪಿ, ಈಗ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಕಾಮಗಾರಿ ಮುಗಿದಿಲ್ಲ ಎಂದು ಅಂಬೇಡ್ಕರ್ ಸಮುದಾಯ ಭವನ ಹೋರಾಟ ಸಮಿತಿಯ ಸದಸ್ಯ ಗಾಂಧಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಎಲ್ಲ 3 ಪ್ರಮುಖ ಪಕ್ಷಗಳು ಆಡಳಿತ ನಡೆಸಿದರೂ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದಿರುವುದು ರಾಜಕೀಯ ಇಚ್ಛಾಶಕ್ತಿಗೆ ಹಿಡಿದ ಕನ್ನಡಿಯಾಗಿದೆ. 3 ಪ್ರಮುಖ ಪಕ್ಷಗಳು ಅಂಬೇಡ್ಕರ್ ಭವನ ಕಾಮಗಾರಿ ನಿರ್ಲಕ್ಷಿಸಿದ್ದು, 3 ಪಕ್ಷಗಳ ದಲಿತ ವಿರೋಧಿ ನೀತಿ ಕಣ್ಣಿಗೆ ರಾಚುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಅಪೂರ್ಣಗೊಂಡು, ಅನೈತಿಕ ಚಟುವಟಿಕೆಗಳ ತಾಣವಾಗಿರುವ ಹೆಬ್ಬೂರು ಅಂಬೇಡ್ಕರ್ ಸಮುದಾಯ ಭವನವನ್ನು ಕೂಡಲೇ ಪೂರ್ಣಗೊಳಿಸದಿದ್ದಲ್ಲಿ, ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿರುವ ಗಾಂಧಿರಾಜ್, 3 ಪ್ರಮುಖ ಪಕ್ಷಗಳ ದಲಿತ ವಿರೋಧಿ ನೀತಿಗೆ ಹೆಬ್ಬೂರು ಅಂಬೇಡ್ಕರ್ ಸಮುದಾಯ ಭವನ ಉದಾಹರಣೆಯಾಗಿದೆ ಎಂದು ವಿಷಾದಿಸಿದ್ದಾರೆ.
ವಿಷಾದ: 2003 ರಲ್ಲಿ ಅಂದಿನ ಶಾಸಕರಾದ ಮುದ್ದಹನುಮೇಗೌಡರ ಸಮ್ಮುಖದಲ್ಲಿ ಗೃಹ ಸಚಿವ ಮಲ್ಲಿಕಾರ್ಜುನಖರ್ಗೆ ಅವರಿಂದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕೆಲ ತಾಂತ್ರಿಕ ತೊಂದರೆಗಳಿಂದ ಕಾಮಗಾರಿ ವಿಳಂಬವಾಯಿತು. ಹೋರಾಟ ಸಮಿತಿಯ ಹೋರಾಟದ ಫಲವಾಗಿ ಮತ್ತೆ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು. 2010 ರಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡರು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಂದ ಮತ್ತೆ ಶಂಕುಸ್ಥಾಪನೆ ನೆರವೇರಿಸಿ, ಒಂದು ಕೋಟಿ ರು. ವೆಚ್ಚದಲ್ಲಿ ಸುಂದರಭವನ ನಿರ್ಮಿಸುವುದಾಗಿ ಭರವಸೆ ನೀಡಿದರು. ಆದರೆ ಭವನದ ಕನಸು ಈಡೇರಲೇ ಇಲ್ಲ ಎಂದು ಗಾಂಧಿ ರಾಜ್ ವಿಷಾದಿಸಿದ್ದಾರೆ.
20 ಲಕ್ಷ ರು. ಬಿಡುಗಡೆ: 17-4-2012 ರಲ್ಲಿ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಭೇಟಿ ನೀಡಿದ ವೇಳೆ ಹೋರಾಟ ಸಮಿತಿ ಮನವಿ ಮೇರೆಗೆ 20 ಲಕ್ಷ ರು. ಬಿಡುಗಡೆ ಮಾಡಿದರು. ಈಗಲೂ ಅರ್ಧಕ್ಕೆ ಅಪೂರ್ಣಗೊಂಡ ಕಾಮಗಾರಿ ಕಣ್ಣಿಗೆ ರಾಚುತ್ತಿದ್ದು, ಕಿಟಕಿ, ಬಾಗಿಲುಗಳಿಲ್ಲದೆ ಮಲ ಮೂತ್ರ ವಿಸರ್ಜನೆಯ ತಾಣವಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ಬೂರಿನ ಹೆಮ್ಮೆಯ ಸಾಂಸ್ಕೃತಿಕ ಭವನವಾಗಬೇಕಿದ್ದ ಅಂಬೇಡ್ಕರ್ ಭವನದ ಕಾಮಗಾರಿ ಅಪೂರ್ಣಗೊಳ್ಳಲು ಕಾರಣಗಳೇನು ಎಂಬುದನ್ನು ಶಾಸಕ ಸುರೇಶ್‌ಗೌಡ ತಿಳಿಸಬೇಕಿದೆ. ಕೋಟಿ-ಕೋಟಿ ರು. ಕಾಮಗಾರಿ ತಂದಿದ್ದೇನೆ ಎಂದು ಹೇಳುವ ತುಮಕೂರು ಗ್ರಾಮಾಂತರದ ಶಾಸಕರು, ದಲಿತರ ಸಮಸ್ಯೆಯ ಕುರಿತು
ನಿರ್ಲಕ್ಷ್ಯ ಧೋರಣೆ ತಾಳಿರುವುದಕ್ಕೆ ಉದಾಹರಣೆಯಾಗಿದೆ. ಜತೆಗೆ ಅಂಬೇಡ್ಕರ್‌ಗೆ ಮಾಡಿದ ಅಪಮಾನವೂ ಹೌದು ಎಂದಿರುವ ಗಾಂಧಿರಾಜ್, ಕೂಡಲೇ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ, ಹೋರಾಟ ಅನಿವಾರ್ಯ ಎಂದು ಅಂಬೇಡ್ಕರ್ ಸಮುದಾಯ ಭವನ ಹೋರಾಟ ಸಮಿತಿಯ ಸದಸ್ಯರೂ ಆಗಿರುವ ಗಾಂಧಿರಾಜ್ ಎಚ್ಚರಿಕೆ ನೀಡಿದ್ದಾರೆ.
ಸಮಾನತೆ ಕಾಯ್ದುಕೊಂಡ 3 ಪಕ್ಷಗಳು
ಹೆಬ್ಬೂರು ಅಂಬೇಡ್ಕರ್ ಭವನ ಕಾಮಗಾರಿ ನಿರ್ಲಕ್ಷಿಸುವ ಮೂಲಕ ರಾಜ್ಯದ 3 ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮಾನತೆ ಕಾಯ್ದುಕೊಂಡಿವೆ ಎಂದು ಹೋರಾಟ ಸಮಿತಿಯ ಗಾಂಧಿರಾಜ್ ಮಾರ್ಮಿಕವಾಗಿ ನುಡಿದಿದ್ದಾರೆ. 3 ಪಕ್ಷಗಳ ಆಡಳಿತದಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಅಪೂರ್ಣಗೊಂಡಿರುವ ಹೆಬ್ಬೂರು ಅಂಬೇಡ್ಕರ್ ಭವನ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ದಲಿತ ಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.