ಕಣ್ಣು ಸುಡಬೇಡಿ, ಮಣ್ಣು ಮಾಡಬೇಡಿ, ದಾನ ಮಾಡಿ: ಮಲ್ಲಿಕಾರ್ಜುನಯ್ಯ
ತಿಪಟೂರು: ಮರಣದ ನಂತರ ಕಣ್ಣುಗಳನ್ನು ಸುಡಬೇಡಿ, ಮಣ್ಣು ಮಾಡಬೇಡಿ ಬೇರೆಯವರಿಗೆ ದಾನ ಮಾಡಿ ಅಂಧತ್ವವನ್ನು ನಿವಾರಣೆ ಮಾಡಿ. ಅದೇ ರೀತಿ ದೇಹದ ಪ್ರತಿಯೊಂದೂ ಅಂಗವನ್ನೂ ಮಾನವೀಯತೆ ಮೇರೆಗೆ ಸಂದರ್ಭಕ್ಕೆ ತಕ್ಕಂತೆ ದಾನಮಾಡುವತ್ತ ಎಲ್ಲರೂ ಗಮನಹರಿಸಬೇಕೆಂದು ನಿವೃತ್ತ ಪ್ರಾಂಶುಪಾಲ ಕೆ.ಸಿ. ಮಲ್ಲಿಕಾರ್ಜುನಯ್ಯ ತಿಳಿಸಿದರು.
ತಾಲೂಕಿನ ಕುಪ್ಪಾಳು ಶ್ರೀ ಮಲ್ಲಿಕಾರ್ಜುನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದಿ. ಕೆ.ಎಂ. ಚನ್ನಬಸವಯ್ಯನವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ಪೊರೆ ರೋಗದ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ ಅವರು ಎಲ್ಲ ದಾನಕ್ಕಿಂತ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ಪ್ರತಿಯೊಬ್ಬರೂ ತಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ಇತರರ ಬಾಳಿಗೆ ದಾರದೀಪವಾಗುತ್ತದೆ.
ಆದ್ದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಮಾಹಿತಿ ಪಡೆದು ನೇತ್ರದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ನಟರಾಜು ಶಿಬಿರ ಉದ್ಘಾಟಿಸಿ ಮಾತನಾಡಿ ಪ್ರಾಂಶುಪಾಲರಾದ ಕೆ.ಸಿ. ಮಲ್ಲಿಕಾರ್ಜುನಯ್ಯನವರ ತಮ್ಮ ದಿವಂಗತ ಪುತ್ರನ ಕಣ್ಣು, ಕಿಡ್ನಿ, ಹೃದಯ ಭಾಗಗಳನ್ನು ದಾನ ಮಾಡಿದ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಪ್ರಕಾಶಪ್ಪ ವಹಿಸಿದ್ದರು. ನೇತ್ರ ತಜ್ಞರಾದ ಡಾ.ಸುರೇಶ್, ಡಾ.ಪ್ರಕಾಶ್ ಬಾಬು, ಪ್ರಾಂಶುಪಾಲ ಬಿ. ನಾಗರಾಜು ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು. 30 ಜನರನ್ನು ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಚಂದನ ಪ್ರಾರ್ಥಿಸಿ, ಚಂದ್ರಶೇಖರ್ ಸ್ವಾಗತಿಸಿ, ಪ್ರಭುಸ್ವಾಮಿ ನಿರೂಪಿಸಿ, ಎಸ್.ಸೋಮಶೇಖರ್ ವಂದಿಸಿದರು.