ಜಿ.ಕೆ. ಗುಂಡಣ್ಣನವರಿಗೆ ಸನ್ಮಾನ
ತುಮಕೂರು: ಗ್ರಾಮಾಂತರ ಪ್ರದೇಶದ ಬಿಳಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಜಿ.ಕೆ. ಗುಂಡಣ್ಣ ನಿವೃತ್ತರಾದ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾ ಸರ್ಕಾರಿ ಪಪೂ ಕಾಲೇಜುಗಳ ಪ್ರಿನ್ಸಿಪಾಲರ ಸಂಘದ ವತಿಯಿಂದ ಸನ್ಮಾನ ಏರ್ಪಡಿಸಲಾಗಿತ್ತು.
ಪ್ರಾಚಾರ್ಯರ ಸಂಘದ ಶೈಕ್ಷಣಿಕ ಸಮಿತಿ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಅಭಿನಂದನಾ ನುಡಿಗಳನ್ನಾಡಿ, ಗ್ರಾಮೀಣ ಪ್ರದೇಶದಲ್ಲಿ 40 ವರ್ಷಗಳ ಹಿಂದೆಯೇ ಆರಂಭವಾದ ಈ ಪಪೂ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಗುಂಡಣ್ಣವರ ಸೇವೆ ಶ್ಲಾಘನೀಯ. ಅವರ ಜೀವನ, ಕರ್ತವ್ಯ ನಿರ್ವಹಣೆ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಎಚ್.ಕೆ. ನರಸಿಂಹಮೂರ್ತಿ ಮಾತನಾಡಿ, ಭಾರತೀಯ ಪರಂಪರೆ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದಿದೆ. ಅವುಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ. ಹಿಂದೆ ಗುರುವಿಗೆ ಪ್ರಮುಖ ಸ್ಥಾನವಿತ್ತು. ಈಗ ಅತ್ಯಾಧುನಿಕ ಯಂತ್ರಗಳಿಂದ ಮನುಷ್ಯನ ಜೀವನ ಯಾಂತ್ರಿಕವಾಗಿದೆ. ಇನ್ನಾದರೂ ಹೃದಯವಂತಿಕೆ
ಬೆಳೆಸಿಕೊಳ್ಳದಿದ್ದರೆ, ಬದುಕು ದುಸ್ತರವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಬಿ.ಕೆ. ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು. ತಗಡೂರು ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲೆ ಸಿದ್ದಗಂಗಮ್ಮ, ಉಪನ್ಯಾಸಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.