ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೀನರಲ್ಲಿ ಆತ್ಮವಿಶ್ವಾಸ ಉದ್ದೀಪನಗೊಳಿಸಿ

Srinivasa Murthy VN
Updated On : 11 Feb 2014, 12:17 pm

ತುಮಕೂರು: ಸಮಾಜದಲ್ಲಿ ಜನಸಾಮಾನ್ಯರಲ್ಲಿಯೂ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿ ಆತನನ್ನೂ ಕ್ರಿಯಾಶೀಲ ಬದುಕಿಗೆ ಪ್ರೇರೇಪಿಸಬೇಕಾದ ಅನಿವಾರ್ಯತೆಯನ್ನು ರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದರು ಒತ್ತಿ ಹೇಳಿದ್ದಾರೆ. ಸಮಾಜದ ಉಳ್ಳವರು ಅಶಕ್ತರನ್ನು ಮಾನವೀಯ ದೃಷ್ಟಿಯಿಂದ ನಡೆಸಿಕೊಂಡಾಗ ಅವರಿಗೂ ಸಹ ತಮ್ಮ ಮೇಲೆ ಭಗವತ್ಕೃಪೆಯಿದ್ದು ತಾವೂ  ಭವಿಷ್ಯದಲ್ಲಿ ಉಜ್ವಲ ಪ್ರಗತಿಯನ್ನು ಸಾಧಿಸಲು ಪ್ರಯತ್ನಶೀಲರಾಗಬೇಕೆಂದು ಮನವರಿಕೆಯಾಗುತ್ತದೆ ಎಂದು ತಮಿಳುನಾಡು ಕೊಯಮತ್ತೂರಿನ ರಾಮಕೃಷ್ಣ ಮಿಷನ್
ವಿದ್ಯಾಲಯದ ಮುಖ್ಯಸ್ಥ ಸ್ವಾಮಿ ಅಭಿರಾಮಾನಂದರು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ  ಜೀವಂತ ದುರ್ಗಾಪೂಜಾ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಗದಗ- ಬಿಜಾಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ನಿರ್ಭಯಾನಂದರು ಆಶೀರ್ವಚನ ನೀಡುತ್ತಾ,  ಶೋಕವಿಹೀನ ಸಮಾಜ ನಿರ್ಮಾಣಕ್ಕೆ ಸಮಾಜದಲ್ಲಿ ಏಕತ್ವದ ಭಾವನೆ ಅತ್ಯಗತ್ಯ. ಸಮಾಜದಲ್ಲಿ ಹೊರ ಚಹರೆಯಲ್ಲಿ ಜನರು ವಿಭಿನ್ನವಾಗಿ ಕಂಡರೂ ಆಂತರ್ಯದಲ್ಲಿರುವ ದಿವ್ಯತೆಯಲ್ಲಿ ಭಿನ್ನತೆಯಿಲ್ಲವೆಂದು ವೇದಗಳು ಸಾರುತ್ತವೆ. ಸಾಮಾನ್ಯನು ಸ್ವಾವಲಂಬಿಯಾಗುವವರೆಗೂ ಸಮಾಜದ ಉಳ್ಳವರು ಅವರಿಗೆ ಸಹಾಯ ಮಾಡಲೇಬೇಕು ಎಂದರು.
ಅಭ್ಯುದಯ ಸಾಧ್ಯ: ದಾನ ನೀಡುವ ವಸ್ತುವಿಗಿಂತ ಅದರ ಹಿಂದಿರುವ ಭಾವನೆ ಮುಖ್ಯವಾಗುತ್ತದೆಯಲ್ಲದೆ ಇಂತಹ ಪ್ರಕ್ರಿಯೆಯು ಮಾತ್ರವೇ ಪ್ರತಿಯೊಬ್ಬರೂ ತಮ್ಮ ತಮ್ಮ ದಿವ್ಯತೆಯನ್ನು ಗೌರವಿಸಿ ಇತರರನ್ನು ಮಾನವೀಯವಾಗಿ ಆದರಿಸುವಂತಾಗುತ್ತದೆ ಎಂಬ ಉಪನಿಷತ್ ಋಷಿಗಳ ಸಂದೇಶವನ್ನು ನಿರ್ಲಕ್ಷಿಸಿದ್ದು ನಮ್ಮ ದೇಶದ ಇತಿಹಾಸದಲ್ಲಿ ದೊಡ್ಡ ದುರಂತಕ್ಕೆ ನಾಂದಿಯಾಯಿತು. ಆದ್ದರಿಂದ ಧರ್ಮಾನುಷ್ಠಾನದಿಂದ ಮಾತ್ರವೇ ವ್ಯಕ್ತಿಯ ಹಾಗೂ ಸಮಾಜದ ಅಭ್ಯುದಯ ಸಾಧ್ಯ  ಎಂದರು.
ಹೊರ ರಾಷ್ಟ್ರಗಳಲ್ಲಿಯೂ ಸ್ವೀಕೃತ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ತಿಮ್ಮಪ್ಪ ಭಟ್ ಮಾತನಾಡಿ, ನಾಗರಿಕತೆಯ ಉತ್ತುಂಗದಲ್ಲಿದ್ದ ಭಾರತದ ಮೇಲೆ ವಿದೇಶಿಯರ ಆಕ್ರಮಣ ಮತ್ತು ದಬ್ಬಾಳಿಕೆಗಳು ದೇಶವನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಿತು. ರಾಮಕೃಷ್ಣ ಮತ್ತು ವಿವೇಕಾನಂದರ ಚಿಂತನೆಗಳು ಭಾರತೀಯರನ್ನು ಜನಸಾಮಾನ್ಯರ ಉದ್ಧಾರಕ್ಕೆ ಮತ್ತು
ಸ್ತ್ರೀಯರ ಔನ್ನತ್ಯಕ್ಕೆ ಶ್ರಮಿಸಲು ದಿಕ್ಸೂಚಿಯಾಯಿತು. ಆದ್ದರಿಂದಲೇ ಈ ಈರ್ವರ ಚಿಂತನೆಗಳು ಭಾರತದ ಗಡಿಯನ್ನು ದಾಟಿ ಹೊರ ರಾಷ್ಟ್ರಗಳಲ್ಲಿಯೂ ಸ್ವೀಕೃತವಾಯಿತು. ಪಾಶ್ಚಾತ್ಯರು ಉಪನಿಷತ್ ಸಂದೇಶಗಳಿಂದ ಪ್ರೇರಿತವಾದ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಸ್ವೀಕರಿಸಿದ್ದು ಗಮನಾರ್ಹ ಸಂಗತಿ  ಎಂದರು.
ರಾಜ್ಯ ಲೆಕ್ಕ ಪತ್ರ ಇಲಾಖೆಯ ಮಹಾ ನಿಬಂಧಕ ಪೋಂಡೆಯವರು,  ಸಮಾಜದಲ್ಲಿ ಮೋಜು ಮತ್ತು ಸ್ವಾರ್ಥ ಬದುಕಿನ ಅಮಲಿನಲ್ಲಿರುವ ಜನತೆ ಅಶಾಂತಿ ಮತ್ತು ಹೇಡಿತನದ ಪರಂಪರೆಯನ್ನು ಹುಟ್ಟು ಹಾಕಿ ನಿಷ್ಕ್ರಿಯತೆಯನ್ನು ಬೆಳೆಸುತ್ತಿದ್ದಾರೆ. ಆಶ್ರಮದಲ್ಲಿ ನೆರವೇರಿದ ಜೀವಂತ ದುರ್ಗಾ ಪೂಜೆಯು ನಿಜಕ್ಕೂ ಅಪೂರ್ವವಾದ ಕಾರ್ಯಕ್ರಮವಾಗಿದ್ದು ಇದು ಸಮಾಜದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ದಿಕ್ಸೂಚಿಯಾಗಿದೆ  ಎಂದು ಶ್ಲಾಘಿಸಿದರು.
ವೇದಘೋಷದೊಂದಿಗೆ ಸ್ವಾಗತ: ಜೀವಂತ ದುರ್ಗಾಪೂಜಾ ಕಾರ್ಯಕ್ರಮದಲ್ಲಿ ನಗರದ ಕೊಳೆಗೇರಿಗಳಲ್ಲಿ ವಾಸಿಸುವ, ರಸ್ತೆಗಳಲ್ಲಿ ಭಿಕ್ಷೆ ಬೇಡುವ 225 ಅಶಕ್ತ ತಾಯಂದಿರನ್ನು ಆಶ್ರಮದ ಯತಿ ಸಮೂಹವು ವೇದಘೋಷ ಹಾಗೂ ಪೂರ್ಣ ಕುಂಭದೊಂದಿಗೆ ಆಶ್ರಮಕ್ಕೆ ಸ್ವಾಗತಿಸಿತು. ಆಶ್ರಮದ ನೂರಾರು ಸ್ತ್ರೀ ಭಕ್ತರು ಉಚ್ಚ ಕಂಠದಿಂದ ಶ್ರೀ ಲಲಿತಾ ಸಹಸ್ರ ನಾಮ ಸ್ತೋತ್ರವನ್ನು ಪಠಿಸುತ್ತಾ ದೀನ-ದಲಿತ ತಾಯಂದಿರನ್ನು  ಸಾಕ್ಷಾತ್  ಶಾರದಾದೇವಿ  ಎಂದೇ ಪೂಜಿಸಿ ಅನ್ನದಾನ, ವಸ್ತ್ರದಾನ, ಧಾನ್ಯದಾನಗಳಿಂದ ಸತ್ಕರಿಸಿದ ರೀತಿಯು ಮನೋಜ್ಞವಾಗಿತ್ತು.  
ಕಾರ್ಯಕ್ರಮದಲ್ಲಿ ಶಿವಮೊಗ್ಗೆಯ ಸ್ವಾಮಿ ವಿನಯಾನಂದರು, ಬಿಜಾಪುರದ ಸ್ವಾಮಿ ನರೇಶಾನಂದರು, ಸ್ಥಳೀಯ ಆಶ್ರಮದ ಸ್ವಾಮಿ ಧೀರಾನಂದರು, ಸ್ವಾಮಿ ಪ್ರಣವಾನಂದರು ಹಾಗೂ ಸ್ವಾಮಿ ವೈರಾಗ್ಯಾನಂದರು ಉಪಸ್ಥಿತರಿದ್ದರು.
ತುಮಕೂರು ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.  ಕೃಷ್ಣಮೂರ್ತಿ ನಿರೂಪಿಸಿ, ವಂದಿಸಿದರು. ಬಿದರೆ ಕೃಷ್ಣಮೂರ್ತಿ ವೇದಘೋಷವನ್ನು ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement