ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳಾ ಸಬಲೀಕರಣಕ್ಕೆ ರಾಹುಲ್ ಒತ್ತು

Srinivasa Murthy VN
Updated On : 11 Feb 2014, 12:16 pm

ತುಮಕೂರು: ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಒತ್ತು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಅವರು ಸೋಮವಾರ ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 10 ವರ್ಷಗಳ ಹಿಂದೆ ಸೋನಿಯಾಗಾಂಧಿ ಅವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರಿನಲ್ಲಿ ಬೃಹತ್ ಸ್ತ್ರೀಶಕ್ತಿ ಸಮಾವೇಶ ಮಾಡಿದ್ದರು. ಈಗ ಅವರ ಪುತ್ರ ಹಾಗೂ ಎಐಸಿಸಿ ಉಪಾಧ್ಯಕ್ಷ  ರಾಹುಲ್‌ಗಾಂಧಿ ಮಹಿಳಾ ಸಮಾವೇಶ ನಡೆಸುತ್ತಿದ್ದಾರೆ ಎಂದರು.
ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಫೆ.16 ರಂದು ಬೆಳಗ್ಗೆ 11.30 ಕ್ಕೆ ರಾಹುಲ್ ಗಾಂಧಿ ಮಹಿಳಾ ಸಮಾವೇಶ ನಡೆಸಿಕೊಡುವುದಲ್ಲದೆ ಸಂವಾದದಲ್ಲೂ ಭಾಗವಹಿಸುವರು. ನಂತರ ತುಮಕೂರು  ಚಿತ್ರದುರ್ಗ ಮಧ್ಯದ ಷಟ್ಪದ ರಸ್ತೆಯ ಉದ್ಘಾಟನಾ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದಾರೆ.
ನಂತರ ತುಮಕೂರು, ಗೂಳೂರು, ಹೊನ್ನುಡಿಕೆ, ನಾಗವಲ್ಲಿ, ಹೆಬ್ಬೂರು ಹಾಗೂ ಕುಣಿಗಲ್‌ನಲ್ಲಿ ರಾಹುಲ್ ಗಾಂಧಿ ರೋಡ್ ಷೋ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಟ್ರಾಫಿಕ್  ಸಮಸ್ಯೆ ಆಗದಂತೆ ಎಚ್ಚರ: ರೋಡ್ ಶೋ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುವುದು. ಈಗಾಗಲೇ ಗುಲ್ಬರ್ಗದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಆರಂಭಿಸಿದ್ದು ಇದರ ಭಾಗವಾಗಿ ತುಮಕೂರಿನಲ್ಲೂ ಪ್ರಚಾರವನ್ನು ವಿಧ್ಯುಕ್ತವಾಗಿ ಆರಂಭಿಸಲಾಗುವುದು ಎಂದರು.
ಉಪವಿಭಾಗ ಕೇಂದ್ರದಲ್ಲಿ ಮಹಿಳಾ ಸಮಾವೇಶ ಮಾಡಬೇಕೆಂದು ನಿರ್ಧರಿಸಲಾಗಿತ್ತು. ತಾವು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಅವರು ಮಾತನಾಡಿ ತುಮಕೂರನ್ನು ಆಯ್ಕೆ ಮಾಡಿದೆವು ಎಂದರು. ಅಲ್ಲದೇ ರಾಹುಲ್ ಗಾಂಧಿ ತುಮಕೂರಿಗೆ ಬರುವುದರಿಂದ ಕಾರ್ಯಕರ್ತರಲ್ಲೂ ಉತ್ತೇಜನ ಬರುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ಈಗಾಗಲೇ ರಾಹುಲ್ ಗಾಂಧಿ ಕೂಡ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಆದೇಶ ನೀಡಿದ್ದಾರೆ ಎಂದರು.
ಟಿಕೆಟ್ ಕೇಳೋದ್ರಲ್ಲಿ ತಪ್ಪಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಪುತ್ರ ಸಂತೋಷ ಜಯಚಂದ್ರ ಲೋಕಸಭಾ ಟಿಕೆಟ್ ಕೇಳುವುದರಲ್ಲಿ ತಪ್ಪೇನು ಇಲ್ಲ. ಆದರೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು. ಅಹಿಂದ ವರ್ಗಗಳ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದೇ ಇರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ. ನೋವಿರುವ ಶೋಷಿತ ಸಮುದಾಯದವರು ಸಭೆ ಮಾಡಿ  ತಮ್ಮ ಕಷ್ಟ ತೋಡಿಕೊಂಡರೆ ತಪ್ಪೇನು. ಆ ಸಮಾವೇಶಕ್ಕೆ ತಮ್ಮನ್ನು ಕರೆಯದೇ ಇರುವುದರಿಂದ ತಮಗೂ ಸಿಎಂ ಗೂ ಮನಸ್ತಾಪವಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಶಾಸಕ ಡಾ. ರಫೀಕ್ ಅಹಮದ್, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ಆರ್. ನಾರಾಯಣ್, ಬಿ.ಎಲ್. ಶಂಕರ್ ಮುಂತಾದವರು ಇದ್ದರು.

ತಮ್ಮ ಮಗ ಆಕಾಂಕ್ಷಿ: ಸಚಿವ ಜಯಚಂದ್ರ
ತುಮಕೂರು: ತುಮಕೂರು ಲೋಕಸಭಾ ಚುನಾವಣೆಗೆ ತಮ್ಮ ಪುತ್ರ ಸಂತೋಷ ಜಯಚಂದ್ರ ಆಕಾಂಕ್ಷಿ ಅಲ್ಲಾ ಎಂದು ಹೇಳಲಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದರು. ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಲೆಕ್ಕಾಚಾರ ನಡೆದಿದೆ. ಆದರೆ ಅಂತಿಮವಾಗಿ ಮುದ್ರೆ ಹೊತ್ತುವುದು ಹೈಕಮಾಂಡ್ ಎಂದು ಸ್ಪಷ್ಟಪಡಿಸಿದರು.
ಎತ್ತಿನಹೊಳೆ ಡ್ರಾಪ್ ಆಗಿಲ್ಲ:  ಎತ್ತಿನಹೊಳೆ ಯೋಜನೆ ಡ್ರಾಪ್ ಆಗಿಲ್ಲ. ಆದರೆ ಡಿಪಿಆರ್ ಆಗಬೇಕಾದಾಗ ಸ್ವಲ್ಪ ಬದಲಾವಣೆ ಆಯ್ತು. ಈ  ಹಿನ್ನೆಲೆಯಲ್ಲಿ ತಡೆಯಾಗಿದೆ. ಈಗಾಗಲೇ ಒಂದು ಹಂತದ ಟೆಂಡರ್ ಆಗಿದೆ ಎಂದರು. ತುಮಕೂರು ದಾವಣಗೆರೆ ಹಾಗೂ ತುಮಕೂರು ರಾಯದುರ್ಗ ರೈಲ್ವೆ ಯೋಜನೆಗೆ ಎರಡೂವರೆ ಸಾವಿರ ಎಕರೆ ಜಾಗಬೇಕಾಗಿದೆ ಎಂದರು.

ಲೋಕಸಭೆಗೆ ಸ್ಪರ್ಧಿಸುವುದಿಲ್ಲ: ಪರಮೇಶ್ವರ್
ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ಅವರು ತುಮಕೂರಿಗೆ ಫೆ. 16 ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಫೆ. 17 ರಂದು ಕಾಂಗ್ರೆಸ್ ಪಟ್ಟಿ ಬಿಡುಗಡೆ ಗೊಳಿಸಲಾಗುವುದು. ಯುವಕರು, ಮಹಿಳೆಯರು ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಸೇರಿದಂತೆ ರಾಜ್ಯ ಸರ್ಕಾರದ ಯಾವ ಸಚಿವರು ಲೋಕಸಭಾ ಕಣಕ್ಕೆ ಇಳಿಯುತ್ತಾರೆ ಎಂಬುದರ ಬಗ್ಗೆ ಫೆ. 17 ರಂದು ಮಾಹಿತಿ ನೀಡಲಾಗುವುದು ಎಂದರು.
ಮಹಿಳಾ ಮೀಸಲಾತಿ ಬಿಲ್ ಬರಲು ತಾವೇ ಕಾರಣ ಎಂಬ ದೇವೇಗೌಡರ ಮಾತಿಗೆ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್ ಯಾವ ಪಕ್ಷ ಮಹಿಳೆಯರ ಪರವಾಗಿದ್ದಾರೆ, ಯಾರು ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತರ ಪರವಾಗಿದೆ ಎಂಬುದನ್ನು ಇತಿಹಾಸವೇ ಹೇಳುತ್ತದೆ ಎಂದು ಕುಟುಕಿದರು.
ವೇದಿಕೆಗಳಲ್ಲಿ ಕಣ್ಣೀರು ಹಾಕುವ ಅಭ್ಯಾಸವಿರುವ ದೇವೇಗೌಡರು ಪಾರ್ಲಿಮೆಂಟ್‌ನಲ್ಲಿ ಮಹಿಳಾ ಬಿಲ್ ಮಸೂದೆ ಜಾರಿ ಸಂದರ್ಭದಲ್ಲಿ ಏಕೆ ಕಣ್ಣೀರು ಹಾಕಲಿಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷ ಜಾತಿ ಆಧಾರಿತ ಸಮಾವೇಶ ಮಾಡುತ್ತಿದೆ ಎಂಬ ಹೇಳಿಕೆ ಪ್ರತಿಕ್ರಿಯಿಸದ ಪರಮೇಶ್ವರ್ ಮೈಸೂರಿನಲ್ಲಿ ಜೆಡಿಎಸ್ ವತಿಯಿಂದ ಮಾಡಿದ ಹಿಂದುಳಿದ ವರ್ಗಗಳ ಸಮಾವೇಶ ಜಾತಿಯ ಸಮಾವೇಶವಲ್ಲವೆ ಎಂದು ಪ್ರಶ್ನಿಸಿದರು. ಈ ಬಾರಿ ಕಾಂಗ್ರೆಸ್ ಎಲ್ಲಾ 28 ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವುದು ಎಂದು ತಿಳಿಸಿದರು.

ಜಿಎಸ್‌ಬಿ ಬಗ್ಗೆ ಗೊತ್ತಿಲ್ಲ
ತುಮಕೂರು: ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಅವರ ಬಗ್ಗೆ ಯಾವುದೇ ಮಾಹಿತಿಯೂ ತಮಗಿಲ್ಲ ಎಂದರು. ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಈಗ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement