ಅಂಗವಿಕಲರ ಸೇವೆ ಭಗವಂತನ ಸೇವೆಗಿಂತಲೂ ಶ್ರೇಷ್ಠ
ತುಮಕೂರು: ಅಂಗವಿಕಲರು, ಅಶಕ್ತರ ಸೇವೆ ಮಾಡುವುದು ಭಗವಂತನ ಸೇವೆಗಿಂತಲೂ ಶ್ರೇಷ್ಠಎಂದು ಮಾಜಿ ಸಚಿವೆ ಹಾಗೂ ವಿಧಾನಪರಿಷತ್ ಸದಸ್ಯೆ ಮೋಟಮ್ಮ ತಿಳಿಸಿದ್ದಾರೆ.
ನಗರದ ಸ್ವಾತಂತ್ರ ಹೋರಾಟಗಾರರ ಭವನ (ವೀರಸೌಧ)ದ ಅವರಣದಲ್ಲಿ ಭಾರತೀಯ ಅಂಗವಿಕಲರ ಸೌಹಾರ್ದ ಸಹಕಾರಿ ಸಂಘದ ಅಡಿಯಲ್ಲಿ ನಡೆದ ಸಂಘದ ಕಚೇರಿ ಸ್ಥಳಾಂತರ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಜೀವಮಾನ ಎಲ್ಲ ಸೇವೆಗಳಿಂದಲೂ ವಿಕಲಚೇತನರ ಸೇವೆ ಹೆಚ್ಚು ಸಾರ್ಥಕ. ಇದು ಯಾವ ಪೂಜೆ, ಪುನಸ್ಕಾರ, ಹೋಮ ಹವನಗಳಿಂದಲೂ ದೊರೆಯುವುದಿಲ್ಲ ಎಂದರು.
ಅಂಗವಿಕಲರು ಮೊದಲು ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ತಂದು ಕೊಳ್ಳಬೇಕು ಅ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಹ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದ ಅವರು, ಪ್ರಪಂಚ ವಿಶಾಲವಾಗಿದೆ. ನಾವು ಮಾಡುವ ಕೆಲಸ ಕೀಳು ಎಂಬ ಭಾವನೆಯನ್ನು ತೊರೆದು ಬದುಕಿಗೆ ಒಂದು ವೃತ್ತಿಯನ್ನು ಅಳವಡಿಸಿಕೊಂಡು ತಮ್ಮ ಕಾಲಮೇಲೆ ತಾವು ನಿಲ್ಲುವ ಅಗತ್ಯತೆಯನ್ನು ಅಂಗವಿಕಲರು ಕಂಡುಕೊಳ್ಳಬೇಕಾಗಿದೆ ಎಂದು ಮೋಟಮ್ಮ ನುಡಿದರು.
ಸದುಪಯೋಗ ಪಡಿಸಿಕೊಳ್ಳಿ: ಒಳ್ಳೆಯ ಉದ್ದೇಶದಿಂದ ದೇಶದಲ್ಲಿಯೇ ಪ್ರಥಮ ಎಂಬಂತೆ ಈ ಅಂಗವಿಕಲರ ಸೌಹಾರ್ದ ಸಹಕಾರಿ ಸೊಸೈಟಿಯನ್ನು ತೆರೆಯಲಾಗಿದೆ. ಇದುವರೆಗೂ ಹಲವಾರು ಜನ ಸಾಲ ಸೌಲಭ್ಯ ಪಡೆದಿದ್ದಾರೆ. ಸಾಲಪಡೆದವರು ಸಾಲದ ಸುದುಪಯೋಗ ಪಡಿಸಿಕೊಳ್ಳಬೇಕು ಹಾಗೆಯೇ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿ ತಮ್ಮಂತೆ ಇರುವ ಇತರರ ಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಬೇಕು. ಒಬ್ಬರಿಗೆ ಇನ್ನೊಬ್ಬರು ಹೆಗಲು ಕೊಟ್ಟು ದುಡಿದಾಗ ಮಾತ್ರ ಅಂಗವಿಕಲರು ಅಭಿವೃದ್ಧಿ ಹೊಂದಲು, ಸಮಾಜದಲ್ಲಿ ಮುಂದೆ ಬರಲು ಸಾಧ್ಯವೆಂದರು.
ಸರಕಾರದ ಈ ಸಾಲಿನ ಬಜೆಟ್ನಲ್ಲಿ ಅಂಗವಿಕಲರ ಸೌಹಾರ್ದ ಸಹಕಾರಿ ಸೊಸೈಟಿಗೆ ಇತರೆ ಸೊಸೈಟಿಗಳಿಗೆ ದೊರೆಯಬಹುದಾದ ಎಲ್ಲಾ ರೀತಿ ಸವಲತ್ತುಗಳನ್ನು ದೊರಕಿಸಿಕೊಡಲು ನಾನು ಸಂಬಂಧಪಟ್ಟ ಇಲಾಖೆಯ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆಗೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಅಲ್ಲದೆ ವಿ.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂಗಳ ಸಮಸ್ಯೆಗಳ ಕುರಿತು ಈ ಸಾಲಿನ ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಸಿ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಮೊಟಮ್ಮ ನುಡಿದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ: ರಾಜ್ಯದ ಇತಿಹಾಸದಲ್ಲಿಯೇ ಅಂಗವಿಕಲರಿಗೆ ಅವರಿಗೆ ಸಲ್ಲಬೇಕಾದ ಪಾಲನ್ನು ನೀಡಲು ಪ್ರಯತ್ನ ನಡೆಸಿದ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಸ್ತ್ರೀಯರು, ಅಂಗವಿಕಲರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಒಂದೇ ಬಾರಿಗೆ 20 ಸಾವಿರ ಅಂಗವಿಕಲರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಲಾಗಿತ್ತು. ಮುಂದಿನ ದಿನಗಳಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮೋಟಮ್ಮ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಅಂಗವಿಕಲರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಿ.ಗಂಗರಾಜು, 2002 ರಲ್ಲಿ ಪ್ರಾರಂಭವಾದ ಈ ಸೌಹಾರ್ಧ ಸಹಕಾರಿ ಸಂಘ, ಇಂದು 2 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, 272 ಜನರಿಗೆ 34 ಲಕ್ಷ ರು.ಗಳಿಗೂ ಹೆಚ್ಚಿನ ಸಾಲ ನೀಡಿದೆ.
ಆಡಳಿತ ಮಂಡಳಿಯ ಕೆಲ ದೋಷಗಳಿಂದ ವಸೂಲಾತಿ ಕಡಿಮೆಯಿದೆ. ಕೆಲವರು ಹಿಂದುಳಿದ ವರ್ಗ, ಎಸ್.ಸಿ, ಎಸ್ಟಿ ನಿಗಮದ ರೀತಿ ನಮ್ಮದು ಸಾಲ ಮನ್ನಾ ಆಗಬಹುದು ಎಂಬ ಕಾರಣ ಸಾಲ ಮರುಪಾವತಿ ಮಾಡುತ್ತಿಲ್ಲ. ಇದರಿಂದ ಸಹಕಾರಿ ಸಂಘ ನಡೆಸುವುದು ಕಷ್ಟವಾಗಿದೆ. ಎಲ್ಲರೂ ಸಾಲ ಮರುಪಾವತಿ ಮಾಡಬೇಕು. ಮುಂದಿನ ಮೂರ್ನಾಕು ವರ್ಷಗಳಲ್ಲಿ ಸೊಸೈಟಿಯನ್ನು ಬ್ಯಾಂಕಾಗಿ ಪರಿವರ್ತಿಸಲು ಸಿದ್ಧತೆ ನಡೆದಿದೆ. ಆದ್ದರಿಂದ ಎಲ್ಲರೂ ಕೈಜೋಡಿಸಬೇಕೆಂದರು.
ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಸಂಪತ್, ಉಪಾಧ್ಯಕ್ಷ ಟಿ.ಆರ್. ರೇವಣ್ಣ, ಯತಿರಾಜು ನಾಯ್ಡು, ಹೊನ್ನಪ್ಪ, ಸೊಸೈಟಿಯ ಉಪಾಧ್ಯಕ್ಷ ಗಂಗಾಧರಯ್ಯ, ವಿ.ಆರ್. ಡಬ್ಲ್ಯೂ ಮತ್ತು ಎಂ.ಆರ್.ಡಬ್ಯು ಅಧ್ಯಕ್ಷ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.