ಏಕರೂಪ ಶಿಕ್ಷಣ ಜಾರಿಗೆ ತನ್ನಿ'
ಶಿರಾ: ಇಡೀ ರಾಷ್ಟ್ರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರ ಕಡೆಗಣಿಸಿದ್ದು, ಕೂಡಲೇ ಎಲ್ಲಾ ತಾರತಮ್ಯಗಳನ್ನು ಹೋಗಲಾಡಿಸಿ ಏಕರೂಪ ಶಿಕ್ಷಣ ಜಾರಿಗೆ ತರಬೇಕೆಂದು ರಾಷ್ಟ್ರೀಯ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಈಶ್ವರನ್ ಒತ್ತಾಯಿಸಿದರು.
ಅವರು ದೇಶದ ವಿವಿಧ ರಾಜ್ಯಗಳ ಮೂಲಕ ನಗರಕ್ಕೆ ಆಗಮಿಸಿದ ರಾಷ್ಟ್ರೀಯ ಶೈಕ್ಷಣಿಕ ರಥವನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಅಸ್ಸಾರ್ ಮೊಹಲ್ಲಾದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ಇಲಾಖೆಗಳಿಗಿಂತ ಇಂದು ಪ್ರಾಥಮಿಕ ಶಿಕ್ಷಣ ಇಲಾಖೆ ತೀವ್ರ ಸಂಕಷ್ಟಕ್ಕೀಡಾಗಿದೆ. ಇದು ಹೀಗೇ ಮುಂದುವರೆದರೆ, ಮುಂದೊಂದು ದಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳೇ ಇಲ್ಲದೆ ಎಲ್ಲಾ ಶಿಕ್ಷಕರೂ ಕೆಲಸ ಕಳೆದುಕೊಳ್ಳಲೂಬಹುದು. ಇದರಿಂದ ಅಧಿಕಾರಿಗಳೂ ಸೇರಿದಂತೆ ಇಲಾಖೆಯೇ ಇಲ್ಲದಂತಾದರೂ ಆಶ್ಚರ್ಯಪಡಬೇಕಿಲ್ಲ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇರೆ ರಾಜ್ಯದಲ್ಲಿ ಇರುವಂತ ಎಲ್ಲಾ ಸೌಭ್ಯಗಳನ್ನು ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಇದೇ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ನಡೆಯುವ ಶೈಕ್ಷಣಿಕ ಸಮ್ಮೇಳನಕ್ಕೆ ಹೆಚ್ಚಿನ ಶಿಕ್ಷಕರು ಹಾಜರಾಗಬೇಕೆಂದು ಮನವಿ ಮಾಡಿದರು.
ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜಕುಮಾರ್, ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಂ.ಮಹೇಶ್, ಪಾವಗಡ ಬಿಇಓ ನಾಗರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪಯ್ಯ, ಉಪಾಧ್ಯಕ್ಷ ನರಸಿಂಹರಾಜು ಇತರು ಹಾಜರಿದ್ದರು.