ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಎಸ್‌ಎಸ್ ಸ್ಥಾನ ತುಂಬಲಸಾಧ್ಯ: ಪ್ರೊ. ಸುಮಂಗಳಮ್ಮ

Srinivasa Murthy VN
Updated On : 12 Feb 2014, 12:45 pm

ತುಮಕೂರು: ನಾಡಿನ ಹೆಮ್ಮೆಯ ರಾಷ್ಟ್ರ ಕವಿ ಕುವೆಂಪುರವರ ಅಭಿಮಾನದ ಶಿಷ್ಯರಾಗಿ ಜಿ.ಎಸ್.ಎಸ್. ಬಿಟ್ಟುಹೋದ ಸ್ಥಾನವನ್ನು ಯಾರೂ ತುಂಬಲಾರರು.  ಕನ್ನಡ ಕಾವ್ಯಕ್ಷೇತ್ರದಲ್ಲಿ ಎದೆ ತುಂಬಿ ಹಾಡಿದ ಕವಿಯಾಗಿ ಸ್ವಚ್ಛಂದ ಗಾನ ಕೋಗಿಲೆಯಾಗಿ ಉದಯಿಸಿ ಕನ್ನಡ ಕಾವ್ಯ ಮೀಮಾಂಸೆ, ವಿಮರ್ಶೆಗಳ ಪ್ರೌಢಚಿಂತಕರಾಗಿ ಬೆಳೆದು ಸಮಕಾಲೀನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದವರು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರು ಎಂದು ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಎಸ್. ಸುಮಂಗಳಮ್ಮ ನುಡಿದರು.
ಅವರು ಅಖಿಲ ಭಾರತ ವೀರಶೈವ ಮಹಾಸಭಾ ತುಮಕೂರು ಮತ್ತು ಜಿಲ್ಲಾ ಶರಣಸಾಹಿತ್ಯ ಪರಿಷತ್ತು ನಗರದ ರೇಣುಕಾವಿದ್ಯಾಪೀಠ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಜಿ.ಎಸ್. ಶಿವರುದ್ರಪ್ಪನವರ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಿ.ಎಸ್.ಎಸ್. ಕುರಿತು ಉಪನ್ಯಾಸ ನೀಡಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಉನ್ನತ ವೈಚಾರಿಕ ಅಲೆಯ ಕಿರಿಯ ಸಹೋದ್ಯೋಗಿಗಳನ್ನು ತಮ್ಮ ಜೊತೆ ಸೇರಿಸಿಕೊಂಡು ಕನ್ನಡ ವೈಚಾರಿಕ ಪ್ರಪಂಚ ಬೆಳೆಯುವಂತೆ ಮಾಡಿದ ಕತೃತ್ವ ಶಕ್ತಿ ಅವರ ಆಡಳಿತ ವೈಖರಿಯ ಕುರುಹಾಗಿತ್ತೆಂದು ಅಭಿಪ್ರಾಯಪಟ್ಟರು.
ಯಾವುದೇ ಬಗೆಯ ಅಬ್ಬರ ಉಬ್ಬರಗಳನ್ನು ತೋರದ ಸದಾ ಧ್ಯಾನಸ್ಥ ಮೌನಿಯಂತೆ ನೋವು ಹೋರಾಟಗಳ ನಡುವೆಯು ನಿಯತಗತಿಯನ್ನು ಕಾಯ್ದುಕೊಂಡವರು ಜಿ.ಎಸ್. ಶಿವರುದ್ರಪ್ಪನವರು. ಅವರ ಕಾವ್ಯವೂ ಅವರಂತೆಯೇ ನಿಯತಗತಿಯಲ್ಲಿ ಸಾಗಿ ಬಂದಿದೆ ಎಂದರು.
ಬುದ್ಧ-ಬಸವರೇ ಆದರ್ಶ: ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಂಶೋಧಕ ಡಾ.ಡಿ.ಎನ್. ಯೋಗೀಶ್ ಅವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಬುದ್ಧ-ಬಸವರೇ ಆದರ್ಶ ರಕ್ಷೆ. ಅವರದು ಸದಾ ಪ್ರಗತಿಶೀಲ ವಿಚಾರಧಾರೆ, ಹೊಸ ಬದುಕಿನ ಚಿಂತನೆ. ಅವರು ಹಾಡುವುದು ಎನಗೆ ಅನಿವಾರ್ಯ ಎಂದಿದ್ದರೂ ಸಮಷ್ಟಿ ಹಿತಕ್ಕೆ ಬೇಕಾದುದನ್ನೆ ಹಾಡಿದ್ದಾರೆ.  ಅವರ ಕಾವ್ಯ ಹೆಸರಿಗಾಗಿ ಕೊಸರಿ ಬಂದ ಉಸಿರಲ್ಲ ಅದು ಮಳೆ-ಮಣ್ಣಿನ ಸಂಯೋಗದಿಂದ ಮೊಳೆದೇಳುವ ಪ್ರಕೃತಿ ಸಹಜ ಹಸಿರು ಎಂದು ಬಣ್ಣಿಸಿದರು.
ತಮ್ಮೂರಿನ ಅನೇಕ ಬಡ ವಿದ್ಯಾರ್ಥಿಗಳಿಗೆ ಆಶ್ರಯನೀಡಿ ತಮ್ಮ ಮನೆಯನ್ನೇ ಪ್ರಸಾದನಿಲಯವನ್ನಾಗಿ ಮಾಡಿದ್ದ ಅವರು ಕೇವಲ ಭಾವುಕ ಕವಿಗಳಲ್ಲ. ಪ್ರಕೃತಿ ಪೂಜೆಯ ಕವಿ, ಪ್ರತಿಮೆಗಳ ಕವಿ. ನಮ್ಮ ಕಾಲದ ಪ್ರಾತಿನಿಧಿಕ ಕವಿ.  ಅವರು ಯಾವುದೇ ಪಂಥಕ್ಕೆ ಅಂಟಿಕೊಂಡವರಲ್ಲ. ಅವರದು ಸಹಜ ಸಂವೇದನಾಶೀಲ ಸಾಹಿತ್ಯ ಪಂಥ ಎಂದು ನುಡಿದರು.
ಬಹುಮಾನ ವಿತರಣೆ: ಇದೇ ಸಂದರ್ಭದಲ್ಲಿ ಈ ಜಿಲ್ಲೆಯ ಇಪ್ಪತ್ತೇಳು ವಿದ್ಯಾರ್ಥಿಗಳಿಗೆ ತಲಾ ಎರಡು ಸಾವಿರ ರು.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವೀರಶೈವ ಮಹಾಸಭಾದಿಂದ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ವಿತರಿಸಿದರು.  ಮಾಜಿ ಶಾಸಕ ಸಿ.ವೀರಭದ್ರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ. ಮಹದೇವಯ್ಯನವರು ಅಧ್ಯಕ್ಷತೆ ವಹಿಸಿದ್ದರು.  ಇದಕ್ಕೂ ಮೊದಲು ಡಾ.ಜಿ.ಎಸ್. ಶಿವರುದ್ರಪ್ಪನವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು.  ತುಮಕೂರು ಜಿಲ್ಲಾ ಮತ್ತು
ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ನಳಿನಾ ರಾಜಶೇಖರ್ ಪ್ರಾರ್ಥಿಸಿದರು.  ವೀರಶೈವ ಮಹಾಸಭಾದ ಕೋಶಾಧ್ಯಕ್ಷ ಮೋಹನ್ ಕುಮಾರ್ ಪಟೇಲ್ ಸ್ವಾಗತಿಸಿದರು.  ಜಿಲ್ಲಾ ಘಟಕದ ನಿರ್ದೇಶಕಿ ರೇಣುಕಪರಮೇಶ್ ವಂದಿಸಿದರು.   ಎಚ್.ಎನ್. ಶಿವಕುಮಾರ್  ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement