ಹೃದಯಾಘಾತ: ಕರ್ತವ್ಯ ನಿರತ ಹೆಡ್ ಕಾನ್‌ಸ್ಟೇಬಲ್ ಸಾವು
ಪಾವಗಡ: ಕರ್ತವ್ಯ ನಿರತ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಹೊಟೇಲ್ ಒಂದರಲ್ಲಿ ಟೀ ಸೇವಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ 11ಗಂಟೆಗೆ ತಾ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟ ಪೊಲೀಸ್, ಅರಸೀಕೆರೆ ಠಾಣೆಯ ಸಿದ್ದರಾಮೇಶ ಎಂಬುವರು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಾಲೇನಹಳ್ಳಿ ವಾಸಿಯಾದ ಸಿದ್ದರಾಮೇಶ ತುಮಕೂರು ನಗರದ ಟೌನ್ ಪೊಲೀಸ್ ಠಾಣೆ ಹಾಗೂ ತಿಲಕ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಳೆದ 5, 6 ತಿಂಗಳ ಹಿಂದೆ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಗೆ ಹೆಡ್ ಕಾನ್‌ಸ್ಟೇಬಲ್ ಆಗಿ ನಿಯೋಜಿತರಾಗಿ ಕರ್ತವ್ಯದಲ್ಲಿ ನಿರತರಾಗಿದ್ದರು. ಎಂದಿನಂತೆ ಬೆಳಿಗ್ಗೆ ರಾಣೆಗೆ ಆಗಮಿಸಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಠಾಣೆ ಮುಂಭಾಗದಲ್ಲಿದ್ದ ಟೀ ಅಂಗಡಿಯೊಂದಕ್ಕೆ ತೆರಳಿ ಟೀ ಸೇವಿಸುತ್ತಿರುವಾಗ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಅವರ ಜೊತೆಯಲ್ಲಿ ಟೀ ಸೇವನೆಗೆ ತೆರಳಿದ್ದ ಸ್ನೇಹಿತರು ಗಾಬರಿಗೊಂಡು ಕೂಡಲೇ ಅವರನ್ನು ವಿಚಾರಿಸಿದ್ದಾರೆ. ಆದರೆ ಅವರು ಆಗಲೇ ಸಾವನ್ನಪ್ಪಿದ್ದರು. ಸ್ಥಳಕ್ಕೆ ಮಧುಗಿರಿ ವಿಭಾಗದ ಡಿವೈಎಸ್‌ಪಿ ಗುರುಸ್ವಾಮಿ, ಪಾವಗಡ ವೃತ್ತ ಸಿಪಿಐ ಭಾನುಪ್ರಕಾಶ್, ತಿರುಮಣಿ ವೃತ್ತ ಸಿಪಿಐ ಎಂ.ಎಂ. ಪಾಷ, ಪಾವಗಡ ಪಿಎಸ್‌ಐ ಆಶೋಕ್ ಕುಮಾರ್, ಅರಸೀಕೆರೆ ಪಿಎಸ್‌ಐ ಎಂ.ಸಿ. ಕೃಷ್ಣಮೂರ್ತಿ, ತಿರುಮಣಿ ಪಿಎಸ್‌ಐ ಸುರೇಶ್‌ಕುಮಾರ್, ಎಎಸ್‌ಐ ಎ.ಜಿ. ರಂಗನಾಥ್ ಗೌಡ, ಪೊಲೀಸ್ ಜಾವೇದ್, ನಾಗೇಶ್ ಇತರರು ಸ್ಥಳಕ್ಕೆ ಭೇಟಿ ನೀಡಿದರು.
ಜೀವನದಲ್ಲಿ ಜಿಗುಪ್ಸೆ: ಯುವಕ ಆತ್ಮಹತ್ಯೆ
ಮಧುಗಿರಿ: ಜೀವನದಲ್ಲಿ ಜಿಗುಪ್ಸೆ ಹೊಂದಿದ ಯುವಕನೋರ್ವ ತನ್ನ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯ ಮಾಡಿಕೊಂಡಿರುವ ದಾರುಣ ಘಟನೆ ಮಧುಗಿರಿ ಪುರಸಭೆ ವ್ಯಾಪ್ತಿಯ ಲಿಂಗೇನಹಳ್ಳಿಯಲ್ಲಿ ಸೋಮವಾರ ವರದಿಯಾಗಿದೆ. ಮಧು(25) ಎಂಬ ಯುವಕನೇ ಆತ್ಮಹತ್ಯ ಮಾಡಿಕೊಂಡಿರುವ ದುರ್ದೈವಿ ಎಂದು ಗುರುತಿಸಲಾಗಿದ್ದು, ಈತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತು ಆತ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.