4 ನಿಮಿಷಕ್ಕೆ ಸೀಮಿತಗೊಂಡ ಉದ್ಘಾಟನೆ
ಬಿಗಿ ಭದ್ರತೆಯಲ್ಲಿ ವೇದಿಕೆ ಸಮಾರಂಭಕ್ಕೆ ಸಜ್ಜಾಗಿದ್ದರೂ ಮಾತಿಗೆ ಅವಕಾಶವೇ ಇಲ್ಲದಂತೆ ಸಭೆ ಬರ್ಕಾಸ್ತು
ಕನ್ನಡಪ್ರಭ ವಾರ್ತೆ ತುಮಕೂರು ಫೆ.16
ಬಿಗಿ ಭದ್ರತೆಯಲ್ಲಿ ವೇದಿಕೆ ಸಮಾರಂಭಕ್ಕೆ ವ್ಯವಸ್ಥಿತವಾಗಿ ಸಜ್ಜಾಗಿದ್ದರೂ, ಮಾತಿಗೆ ಅವಕಾಶವೇ ಇಲ್ಲದಂತೆ
ತುಮಕೂರಿನ ಹೊರವಲಯದಲ್ಲಿರುವ ಷಟ್ಪತ ರಾಷ್ಟ್ರೀಯ ಹೆದ್ದಾರಿ ಉದ್ಘಾಟನಾ ಸಮಾರಂಭವನ್ನು ಕೇವಲ 4 ನಿಮಿಷಗಳಿಗೆ ಸೀಮಿತ ಮಾಡಿ ಬರ್ಕಾಸ್ತು ಗೊಳಿಸಲಾಯಿತು. ತುಮಕೂರು-ಚಿತ್ರದುರ್ಗ ವಿಭಾಗದ ಕಿಮೀ 75 ರಿಂದ 189 ರವರೆಗಿನ ರಾಷ್ಟ್ರೀಯ ಹೆದ್ದಾರಿ - 48 ( ಹಳೆ ರಾ.ಹೆ. 4 ) ರ ನೂತನ ಷಟ್ಪತ (6 ಲೈನ್) ರಸ್ತೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ, ಸಂಸದ ರಾಹುಲ್ ಗಾಂಧಿ ಉದ್ಘಾಟಿಸಿದರು. ಕೇಂದ್ರ ಭೂ ಸಾರಿಗೆ, ಹೆದ್ದಾರಿ, ಕಾರ್ಮಿಕ, ಉದ್ಯೋಗ ಇಲಾಖೆ ಸಚಿವ ಆಸ್ಕರ್ ಫರ್ನಾಂಡಿಸ್ ಜತೆಗೂಡಿ ಉದ್ಘಾಟಿಸುವುದಾಗಿ ಆಹ್ವಾನಪತ್ರಿಕೆಯಲ್ಲಿ ತಿಳಿಸಲಾಗಿತ್ತಾದರೂ, ಪರದೆ ಎಳೆದು ಉದ್ಘಾಟಿಸಿದ್ದು ರಾಹುಲ್ ಗಾಂಧಿ ಮಾತ್ರ. ಸಚಿವ ಆಸ್ಕರ್ ಫರ್ನಾಂಡಿಸ್ ಉದ್ಘಾಟನಾ ಸಮಾರಂಭದ ಪರದೆ ಎಳೆಯಲು ರಾಹುಲ್ ಗಾಂಧಿಯವರನ್ನು ಮುಂದಕ್ಕೆ ಕರೆದೊಯ್ದು ನೆಪಮಾತ್ರಕ್ಕೆ ಸಹಕರಿಸಿ, ಹಿಂದಕ್ಕೆ ಬಂದರು.
ತುಮಕೂರಿನ ಹೊರವಲಯದ ಊರುಕೆರೆಯಲ್ಲಿರುವ ಜೈನ್ ಪಬ್ಲಿಕ್ ಸ್ಕೂಲ್ನಲ್ಲಿ ಭೂ ಸಾರಿಗೆ ಇಲಾಖೆ ವ್ಯಾಪ್ತಿಗೆ ಒಳಪಡುವ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ವತಿಯಿಂದ ಏರ್ಪಾಟಾಗಿದ್ದ ಸಮಾರಂಭದಲ್ಲಿ ಈ ರಾಷ್ಟ್ರೀಯ 48 ರ ಹೆದ್ದಾರಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ರಾಹುಲ್ ಗಾಂಧಿ ನೇರವಾಗಿ ವೇದಿಕೆಗೆ ಬಂದರು. ರಾಹುಲ್ ಗಾಂಧಿಯವರಿಗೆ ಕೇಂದ್ರ ಸಚಿವ ಆಸ್ಕರ್ ಪರ್ನಾಂಡಿಸ್ ಹೂಗುಚ್ಚ ನೀಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಚಿವ ಆಸ್ಕರ್, ರಾಹುಲ್ಗಾಂಧಿಯವರಿಗೆ ಮೈಸೂರು ಪೇಟ ತೊಡಿಸಿ, ಚರಕ ಸೇರಿದಂತೆ ಇತರೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಮಹಿಳಾ ಸಮಾವೇಶಕ್ಕೆ ತೆರಳಿದರು: ಬೆಳಗ್ಗೆ 10-30 ಕ್ಕೆ ಏರ್ಪಾಟಾಗಿದ್ದ ಈ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ಸಿಕ್ಕಿದ್ದು 11.24 ಕ್ಕೆ. ಜೀನ್ಸ್ ಪ್ಯಾಂಟ್, ಜುಬ್ಬಾ ಧರಿಸಿದ್ದ ರಾಹುಲ್ ತಾತ್ಕಾಲಿಕವಾಗಿ ಏರ್ಪಾಟಾಗಿದ್ದ ಸಭಾಂಗಣಕ್ಕೆ ಬಂದು ಕೇವಲ 4 ನಿಮಿಷಗಳಲ್ಲೇ ಕಾರ್ಯಕ್ರಮ ಮುಗಿಸಿ, ತುಮಕೂರಿನ ಮಹಾತ್ಮಗಾಂಧಿ ಸ್ಟೇಡಿಯಂನಲ್ಲಿ ಏರ್ಪಾಟಾಗಿದ್ದ ಕಾಂಗ್ರೆಸ್ ಮಹಿಳಾ ಸಮಾವೇಶಕ್ಕೆ ತೆರಳಿದರು. ಹೆಲಿಕಾಪ್ಟರ್ನಲ್ಲಿ ತುಮಕೂರಿಗೆ ಆಗಮಿಸಿದ್ದ ರಾಹುಲ್, ಅಲ್ಲಿಂದ ಹೊರವಲಯದಲ್ಲಿರುವ ಊರುಕೆರೆಗೆ ರಸ್ತೆ ಮಾರ್ಗವಾಗಿ ಬಂದು ಕೆಲ ನಿಮಿಷಗಳಲ್ಲೇ ಕಾರ್ಯಕ್ರಮ ಮುಗಿಸಿ, ವೇದಿಕೆ ಏರಿದರೂ ಒಂದೂ ಮಾತನಾಡದೇ, ವಾಪಸಾಗಿದ್ದು ನೆರೆದಿದ್ದವರಲ್ಲಿ ಚರ್ಚೆಗೆ ಗ್ರಾಸವಾಯಿತು. ವೇದಿಕೆ ಕಾರ್ಯಕ್ರಮಕ್ಕೆ ತಾತ್ಕಾಲಿಕ ಭವ್ಯ ಸಭಾಂಗಣ ಸಜ್ಜಾಗಿದ್ದರೂ, ಸಾಂಪ್ರದಾಯಿಕವಾಗಿ ಜರುಗಬೇಕಿದ್ದ ಸ್ವಾಗತ, ವಂದನಾರ್ಪಣೆ ಯಾವುದೊಂದೂ ನಡೆಯದೇ, ಕಾರ್ಯಕ್ರಮ ಕೇವಲ 4 ನಿಮಿಷಗಳಲ್ಲೇ ಮುಕ್ತಾಯಗೊಂಡಿತು.
ಮಾತಿಗೆ ಮಹತ್ವ ನೀಡದ, ಬಿಗಿ ಭದ್ರತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕೇಂದ್ರ ಮಂತ್ರಿಗಳಾದ ಆಸ್ಕರ್ ಫರ್ನಾಂಡಿಸ್, ಎಂ. ವೀರಪ್ಪಮೊಯ್ಲಿ, ಕೆ. ರೆಹಮಾನ್ಖಾನ್, ಕೆ.ಎಚ್. ಮುನಿಯಪ್ಪ, ಮುಖ್ಯಮಂತ್ರಿ ಸಿದ್ಗರಾಮಯ್ಯ, ಸಿದ್ದು ಸಚಿವ ಸಂಪುಟದ ಡಾ.ಎಚ್.ಸಿ. ಮಹದೇವಪ್ಪ, ಟಿ.ಬಿ. ಜಯಚಂದ್ರ, ಎಚ್. ಆಂಜನೇಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಐಆರ್ಬಿಯ ವೀರೇಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಕುಣಿಗಲ್ನಲ್ಲಿ ರಾಹುಲ್ ರೋಡ್ ಶೋ
ಕ.ಪ್ರ.ವಾರ್ತೆ ಕುಣಿಗಲ್ ಫೆ.16
ಏಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಮಧ್ಯಾಹ್ನ ಪಟ್ಟಣದಲ್ಲಿ ರೋಡ್ ಶೋ ನಡೆಸಿ, ಅಭಿಮಾನಿಗಳತ್ತ ಕೈಬಿಸಿ ಹುಲಿಯೂರುದುರ್ಗ ಕಡೆ ತೆರಳಿದರು.
ಬೆಳಗಿನಿಂದಲೇ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಕರ್ತರು, ಮಹಿಳೆಯರೂ ಸೇರಿದಂತೆ ಉರಿಬಿಸಿಲನ್ನು ಲೆಕ್ಕಿಸದೆ ಯುವರಾಜನ ಅಗಮನಕ್ಕೆ ಕಾದು ನಿಂತರು. ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಬೈಕ್ ರ್ಯಾಲಿ ಮೂಲಕ ಕಾರ್ಯಕರ್ತರು ಪಟ್ಟಣಕ್ಕೆ ಆಗಮಿಸಿ ಜಮಾವಣೆಗೊಂಡರು. ಸಂಸದ ಡಿ.ಕೆ.ಸುರೇಶ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ ಸೇರಿದಂತೆ ಇತರೆ ಮುಖಂಡರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಕಾರ್ಯಕರ್ತರು, ಅಭಿಮಾನಿಗಳನ್ನು ಮುಖ್ಯರಸ್ತೆಗೆ ಬಾರದಂತೆ ತಡೆದರು.
ಮಧ್ಯಾಹ್ನ ನಾಲ್ಕುಗಂಟೆಗೆ ಆಗಮಿಸಿದ ರಾಹುಲ್ ಗಾಂಧಿ ಗ್ರಾಮದೇವತೆ ವೃತ್ತದ ಬಳಿ ಅಗಮಿಸಿ ಮೊದಲಿಗೆ ವಾಹನದಿಂದ ಕೈಬೀಸಿ, ನಂತರ ದಿಢೀರ್ ಇಳಿದು ನೇರವಾಗಿ ಅಭಿಮಾನಿಗಳು, ಕಾರ್ಯಕರ್ತರು, ಸಾಮಾನ್ಯಜನತೆಯತ್ತೆ ತೆರಳಿದರು. ಯುವರಾಜನ ಕೈ ಕುಲುಕಲು ಜನತೆ ಮುಗಿಬಿದ್ದ ಕಾರಣ ಬ್ಯಾರಿಕೇಡ್ ಮುರಿದವು. ಭದ್ರತಾ ಸಿಬ್ಬಂದಿ ಜನತೆಯನ್ನು ನಿಯಂತ್ರಿಸಲು ಪರದಾಡಬೇಕಾಯಿತು.
ಹುಚ್ಚಮಾಸ್ತಿಗೌಡ ವೃತ್ತದವರೆಗೂ ರಸ್ತೆಯ ಇಕ್ಕೆಲಗಳಲ್ಲಿನ ಜನತೆಯೊಂದಿಗೆ ಕೈಕುಲುಕಿದ ರಾಹುಲ್ ವಾಹನ ಏರಿ ಸಂತೇಮಾವತ್ತೂರು ಮೂಲಕ ಹುಲಿಯೂರುದುರ್ಗಕ್ಕೆ ತೆರಳಿ, ಹುಲಿಯೂರು ದುರ್ಗದಲ್ಲಿ ಡಿ.ಕೆ.ಶಿವಕುಮಾರ್ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಸದರ ನಿಧಿಯಿಂದ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಉದ್ಘಾಟಿಸಿದರು. ನಂತರ ಮದ್ದೂರು ಕಡೆಗೆ ತೆರಳಿದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಸಂಸದ ಸುರೇಶ್, ಸಚಿವ ಡಿ.ಕೆ.ಶಿವಕುಮಾರ, ಜಯಚಂದ್ರ, ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ಅನಸೂಯಮ್ಮ ಇತರರು ಇದ್ದರು.
ಗ್ರಾಪಂ ಅಧ್ಯಕ್ಷರ ಅಸಮಾಧಾನ: ಹುಲಿಯೂರುದುರ್ಗದಲ್ಲಿ ಜನತೆಗೆ ಶುದ್ಧಕುಡಿಯುವ ನೀರು ಘಟಕ ಪ್ರಾರಂಭಿಸಲು ಗ್ರಾಮಪಂಚಾಯಿತ ಸಕಲ ಸೌಲಭ್ಯವನ್ನು ಕಲ್ಪಿಸಿದೆ. ಸಂಸದರ ನಿಧಿಯಿಂದಲೂ ಅನುದಾನ ನೀಡಲಾಗಿದೆ. ಆದರೆ ಸಂಸದರು ಸದರಿ ಘಟಕ ಉದ್ಘಾಟನೆ ಸಮಾರಂಭಕ್ಕೆ ಸ್ಥಳೀಯ ಶಾಸಕರನ್ನು ಮತ್ತು ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ಕಡೆಗಣಿಸಿ ಕೇವಲ ಕಾಂಗ್ರೆಸ್ ಕಾರ್ಯಕ್ರಮದಂತೆ ಮಾಡಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಲಾಗುವುದೆಂದು ಗ್ರಾಪಂ ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಬಿಗಿ ಭದ್ರತೆ
ಕನ್ನಡಪ್ರಭ ವಾರ್ತೆ ತುಮಕೂರು ಫೆ.16
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ಆಗಮನದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಹೆಲಿಕಾಪ್ಟರ್ನಲ್ಲಿ ಆಗಮಿಸಿದ ರಾಹುಲ್ಗಾಂಧಿ ಮೊದಲಿಗೆ ಷಟ್ಪಥ ರಾಷ್ಟ್ರೀಯ ಹೆದ್ದಾರಿ 48 ನ್ನು ತುಮಕೂರು ಗ್ರಾಮಾಂತರದ ಊರುಕೆರೆ ಬಳಿ ಟೇಪ್ ಕತ್ತರಿಸುವುದರ ಮೂಲಕ ಸಮರ್ಪಿಸಿದರು.
ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಜಿಲ್ಲೆ ಹಾಗೂ ಇತರೆ ಕೆಲ ಜಿಲ್ಲೆಗಳಿಂದ ಮಹಿಳಾ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಬಸ್ಗಳಿಗೆ ನಿಲ್ದಾಣವಾಗಿ ಮಾರ್ಪಟ್ಟಿತ್ತು. ನಗರದ ಬಿ.ಎಚ್ ರಸ್ತೆ , ಕುಣಿಗಲ್ ರಸ್ತೆ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್ಸಿಗರ ಪ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ತುಮಕೂರು ಕಾರ್ಯಕ್ರಮದ ನಂತರ ರಾಹುಲ್ಗಾಂಧಿ, ಗೂಳೂರು, ಹೆಬ್ಬೂರು, ನಾಗವಲ್ಲಿ ಮಾರ್ಗವಾಗಿ ರೋಡ್ ಶೋ ನಡೆಸಿದರು.