ಎತ್ತಿನಹೊಳೆ ಯೋಜನೆ ಸರಿಯಲ್ಲ
ಕನ್ನಡಪ್ರಭ ವಾರ್ತೆ ತುಮಕೂರು ಫೆ.16
ಎತ್ತಿನಹೊಳೆ ಯೋಜನೆಯಿಂದ ನಯಾಪೈಸೆ ಅನುಕೂಲ ಇಲ್ಲ. ಮಂಗಳೂರು, ದಕ್ಷಿಣ ಕನ್ನಡ ಲಾಬಿಗೆ ಸರ್ಕಾರ ಮಣಿದಿದ್ದು, ಮಧ್ಯಕರ್ನಾಟಕದ ಜನರ ಕಣ್ಣೊರೆಸುವ ತಂತ್ರವಾಗಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲು ಹೊರಟ್ಟಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಯಾವುದೇ ಪ್ರಯೋಜನವಿಲ್ಲವೆಂದು ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ತುಮಕೂರಿನಲ್ಲಿ ಕನ್ನಡ ಸೇನೆ ವತಿಯಿಂದ ಆಯೋಜಿಸಿದ್ದ ಎತ್ತಿನ ಹೊಳೆ ಯೋಜನೆ ಜಾರಿ ವಿರೋಧಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬರದಿಂದ ತತ್ತರಿಸಿರುವ ಮಧ್ಯ ಕರ್ನಾಟಕದ 9 ಜಿಲ್ಲೆಗಳ 43 ತಾಲೂಕುಗಳಿಗೆ ಬೇಕಾಗಿರುವುದು 443 ಟಿ.ಎಂ.ಸಿ ನೀರು. ಎತ್ತಿನ ಹೊಳೆ ಯೋಜನೆಯಿಂದ ಕೇವಲ 24 ಟಿ.ಎಂ.ಸಿ ನೀರು ತಂದು ಯಾವ ಜಿಲ್ಲೆಗೆ ಕೊಡಲು ಸಾಧ್ಯ. ಇದು ಕಣ್ಣೊರೆಸುವ ತಂತ್ರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಯ 43 ತಾಲೂಕುಗಳಿಗೆ ಕುಡಿಯಲು ಮತ್ತು ನೀರಾವರಿ ಆಗಬೇಕೆಂದರೆ 443 ಟಿ.ಎಂ.ಸಿ.ನೀರಿನ ಅಗತ್ಯವಿದೆ. ಕೃಷ್ಣಾ ಎ ಮತ್ತು ಬಿ. ಸ್ಕಿಂ, ಕಾವೇರಿ ಕೊಳ್ಳಗಳಿಂದ 500 ಟಿ.ಎಂ.ಸಿ.ವರೆಗೆ ನೀರು ಲಭ್ಯವಿದೆ. ಇದನ್ನು ಬಳಕೆ ಮಾಡಿಕೊಳ್ಳಲು ವಿವಿಧ ಏಳು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಸರಕಾರ ಮಾತ್ರ ಈ ಎಲ್ಲಾ ಯೋಜನೆಗಳನ್ನು ಹೊರತು ಪಡಿಸಿ ಕೇವಲ ಎತ್ತಿನ ಹೊಳೆ ಯೋಜನೆಯನ್ನು ಮಾತ್ರ ಜಾರಿಗೆ ತರಲು ಹೊರಟಿದೆ. ಇದರ ಜೊತೆ ಉಳಿದ ಯೋಜನೆಗಳು ಜಾರಿಯಾಗದಿದ್ದರೆ ಎತ್ತಿನಹೊಳೆ ಯೋಜನೆಯಿಂದ ಒಂದು ನಯಾಪೈಸೆ ಪ್ರಯೋಜನವಿಲ್ಲ. ಈ ಹಿಂದೆ ಯಡಿಯೂರಪ್ಪ, ಸದಾನಂದಗೌಡ, ಜಗದೀಶಶೆಟ್ಟರ್ ಅವರ ಸರಕಾರವಿದ್ದಾಗಲೂ ಈ ಯೋಜನೆಗೆ ನನ್ನ ವಿರೋಧವಿತ್ತು ಎಂದು ಜಿ.ಎಸ್.ಪರಮಶಿವಯ್ಯ ತಿಳಿಸಿದರು.
ರಾಜಿನಾಮೆಗೆ ಸಿದ್ಧ: ರಾಜ್ಯದ ನೀರಾವರಿ ಯೋಜನೆಗಳ ಕುರಿತಂತೆ ಸರಕಾರಕ್ಕೆ ವರದಿ ಸಲ್ಲಿಸುತ್ತಿದ್ದು, ವರದಿಗೆ ಸ್ಪಂದಿಸದಿದ್ದರೆ ರಾಜ್ಯದ ಡಿಪಿಆರ್ ಸಲಹಾ ಯೋಜನೆಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಜನರೊಂದಿಗೆ ಸೇರಿ ಈ ಭಾಗದ ಕುಡಿವ ನೀರು, ನೀರಾವರಿಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು.
ನೀರಾವರಿ ಯೋಜನೆಗಳು ಪ್ರಾದೇಶಿಕ ಮಟ್ಟದಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವುದರಿಂದ ಪಶ್ಚಿಮಘಟ್ಟದ ಹಳ್ಳಗಳ ನೀರು ಹರಿಸುವ ಯೋಜನೆ ವಿಳಂಬವಾಗಲು ಕಾರಣ. ಕೆಲವರು ಬೇಕಂತಲೇ ಯೋಜನೆಗೆ ಅಡ್ಡಗಾಲು ಹಾಕುವ ಮೂಲಕ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ. ಈ ಭಾಗದ ಜನತೆ ಈ ಬಗ್ಗೆ ಗಂಭೀರ ಹೋರಾಟ ರೂಪಿಸದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಇಂದಿನಿಂದ ಧರಣಿ: ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಮತ್ತು ಜಿ.ಎಸ್.ಪರಮಶಿವಯ್ಯ ಅವರ ವರದಿ ಅನ್ವಯ ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಸೋಮವಾರದಿಂದ ಕನ್ನಡ ಸೇನೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ನಗರದ ಟೌನ್‌ಹಾಲ್ ವೃತ್ತದಲ್ಲಿ ಧರಣಿ ಆರಂಭಿಸುತ್ತಿವೆ.
ಸರಕಾರ ಸರಿಯಾದ ಕ್ರಮ ಕೈಗೊಳ್ಳಲು ಮುಂದಾಗದಿದ್ದರೆ ಈ ಯೋಜನೆಗೆ ಒಳಪಡುವ 43 ತಾಲೂಕುಗಳಲ್ಲಿಯೂ ಬಂದ್‌ಗೆ ಕರೆ ನೀಡಲಾಗುವುದು ಎಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕುಮಾರ್ ಮತ್ತು ಜಿಲ್ಲಾಧ್ಯಕ್ಷ ಧನಿಯಾಕುಮಾರ್ ತಿಳಿಸಿದರು.
ಎತ್ತಿನಹೊಳೆ ಯೋಜನೆ ವಿರೋಧಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೋರಾಟ ಆರಂಭವಾಗಿದೆ. ಆದರೆ ಯೋಜನೆಯ ಸಂಪೂರ್ಣ ಲಾಭ ಪಡೆಯಲಿರುವ ತುಮಕೂರು ಜಿಲ್ಲೆಯಲ್ಲಿ ಈ ಬಗ್ಗೆ ಯಾವುದೇ ಹೋರಾಟ ಆರಂಭವಾಗಿಲ್ಲ. ಇದೊಂದು ನಿಜಕ್ಕೂ ವಿಷಾದದ ಸಂಗತಿ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಫೆ. 17 ರಿಂದ ಧರಣಿ ಆರಂಭಗೊಳ್ಳಲಿದೆ. ಧರಣಿ ನಿರಂತರವಾಗಿ ನಡೆಯಲಿದೆ ಎಂದು ಧನಿಯಕುಮಾರ್ ನುಡಿದರು.
ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ಸೋಮು ಭಾಸ್ಕರಾಚಾರ್,ಹಿರಿಯ ಸ್ವಾತಂತ್ರ ಹೋರಾಟಗಾರರಾದ ಟಿ.ಆರ್.ರೇವಣ್ಣ, ಬಸವಸೇನೆಯ ಅಧ್ಯಕ್ಷ ಡಿ.ಗಂಗರಾಜು, ಮುಖಂಡರಾದ ಟಿ.ಆರ್. ಸದಾಶಿವಯ್ಯ,ಕನ್ನಡ ರಕ್ಷಣಾವೇದಿಕೆಯ ಜೈಶಂಕರ್, ಕಾರ್ಮಿಕ ಮುಖಂಡರಾದ ಸಿಪಿಐ ನ ಚಿನ್ನಪ್ಪ, ರೈತರು ಭಾಗವಹಿಸಿ ಸಭೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.