ಕರ್ತವ್ಯ ಪ್ರಜ್ಞೆ ಮೆರೆದವರಿಗೆ ಯಶಸ್ಸು
ತುಮಕೂರು: ಯಾರು ನಿರಂತರವಾಗಿ ತಮ್ಮ ಕೆಲಸಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಯಶಸ್ಸು ಖಂಡಿತ. ಅಂತಹ ಯಶಸ್ಸಿನ ಹಾದಿಯಲ್ಲಿ ಎನ್. ನಾಗಪ್ಪನವರು ನಡೆದವರು ಎಂದು ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ಹೇಳಿದರು. ಅವರು ಶಿರಾ ತಾಲೂಕು ಚಿಕ್ಕನಹಳ್ಳಿ ಪ.ಪೂ. ಕಾಲೇಜಿನಲ್ಲಿ ಪ್ರಾಂಶುಪಾಲ ನಾಗಪ್ಪ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಗಪ್ಪನವರ ಗುಣ ಮೆಚ್ಚುವಂತದ್ದು. ಪ್ರಾಂಶುಪಾಲರೆಂದ ತಕ್ಷಣ ಕೇವಲ ಕಾಲೇಜಿಗೆ ಬಂದು ಸಹಿ ಮಾಡಿ ಬರುವುದಷ್ಟೆ ಕೆಲಸವಲ್ಲ. ಆ ಕಾಲೇಜಿನ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಮುಖ್ಯ. ಅಂತಹ ಕೆಲಸವನ್ನು ನಾಗಪ್ಪನವರು ಮಾಡಿದರು ಎಂದರು. ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ಈಶ್ವರಿಪ್ರಸಾದ್, ಹನುಮಯ್ಯ, ಅನಿತಾ, ಶಿವಶಂಕರ್ ಇದ್ದರು.
ಸವಿತಾ ಸಮಾಜಕ್ಕೆ ಆದ್ಯತೆ: ಅಭಿನಂದನೆ
ತಿಪಟೂರು: ಸಿಎಂ ಸಿದ್ದರಾಮಯ್ಯನವರು ಮಂಡಿಸಿರುವ ನೂತನ ಮುಂಗಡ ಪತ್ರದಲ್ಲಿ ಅತಿ ಹಿಂದುಳಿದ ವರ್ಗಗಳಾದ ಸವಿತಾ, ಮಡಿವಾಳ, ತಿಗಳ ಇತ್ಯಾದಿ ಸಮಾಜಗಳ ಅಭಿವೃದ್ಧಿಗಾಗಿ ತಮ್ಮ ವೃತ್ತಿಗಳಿಗನುಗುಣವಾಗಿ 2ಲಕ್ಷ ರು. ಸಾಲ ಸೌಲಭ್ಯವನ್ನು ಒದಗಿಸಿರುವುದಕ್ಕೆ ತಾಲೂಕು ಸವಿತಾ ಸಮಾಜದ ಪ್ರತಿನಿಧಿ ಟಿ.ಸಿ.ಗೋವಿಂದರಾಜು, ಮುಖಂಡರಾದ ವಿಜಯಕುಮಾರ್, ವರದರಾಜು, ಮುತ್ತುರಾಜು, ಎಸ್.ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ನೀರಿಲ್ಲದೇ ಪರದಾಟ
ಗುಬ್ಬಿ: ತಾಲೂಕಿನ ನಿಟ್ಟೂರು ಗ್ರಾಮದ ಮಾರುತಿ ನಗರದಲ್ಲಿ ಕಳೆದ 20 ದಿನಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಸಹ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸದಿದ್ದರೆ ನೀರು ಕೊಡಿ ಇಲ್ಲ ವಿಷ ಕೊಡಿ ಎಂಬ ನಾಮಫಲಕದೊಂದಿಗೆ ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ನಿಟ್ಟೂರು ರಂಗಸ್ವಾಮಿ ತಿಳಿಸಿದ್ದಾರೆ.
6ನೇ ಹಂತದ ಲಸಿಕೆ
ಹೆಬ್ಬೂರು: ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಲುಬಾಯಿ ರೋಗದಿಂದ ಬಳಲುತ್ತಿರುವ ರಾಸುಗಳಿಗೆ ಆರನೆ ಹಂತದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಫೆ.22ರವರೆಗೆ ಹೆಬ್ಬೂರು, ಕಣಕುಪ್ಪೆ ಮತ್ತು ತೊಂಡಗೆರೆ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಿದ್ದು ಗ್ರಾಮಸ್ಥರು, ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪಶುವೈದ್ಯಾಧಿಕಾರಿ ರುದ್ರಪ್ರಸಾದ್ ಮನವಿ ಮಾಡಿದ್ದಾರೆ.
ಮಾಲೂರಿನಲ್ಲಿ ನರೇಂದ್ರ ಮೋದಿ ರಥ ಯಾತ್ರೆ
ಮಾಲೂರು: ನರೇಂದ್ರ ಮೋದಿ ಪ್ರಧಾನಿ ಮಂತ್ರಿಯಾಗಲು ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸೂ.ವೆಂಕಟೇಶ್ ಹೇಳಿದರು. ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪಟ್ಟಣಕ್ಕೆ ಆಗಮಿಸಿದ ಮೋದಿ ರಥಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಯುವ ಜನಾಂಗದ ಆಶಾ ಕಿರಣವಾಗಿರುವ ಮೋದಿ ನೇತೃತ್ವದಲ್ಲಿ ಈ ಬಾರಿಯ ಲೋಕ ಸಭೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರಲ್ಲಿ ಉತ್ತೇಜನ ತರಲು ಹಾಗೂ ನರೇಂದ್ರ ಮೋದಿಯ ಸಾಧನೆಗಳನ್ನು ಪ್ರಚಾರ ಪಡಿಸಲು ರಥ ಆಯೋಜಿಸಲಾಗಿದೆ ಎಂದು ಹೇಳಿದರು. ಯುವ ಮೋರ್ಚಾ ಅಧ್ಯಕ್ಷ ಅಪ್ಪಿರಾಜು ಮಾತನಾಡಿ ಮೋದಿ ನಾಯಕತ್ವ ಗುಣಗಳು ನಮ್ಮಂತಹ ಯುವಕರಿಗೆ ಮಾದರಿಯಾಗಿದ್ದು, ಅವರ ಸಾಧನೆಗಳು ದೇಶದ ಭವಿಷ್ಯವನ್ನು ಉಜ್ವಲಗೊಳಿಸಲಿದೆ. ಯುವಮೋರ್ಚಾ ಕಾರ್ಯಕರ್ತರು ಹಗಲು ರಾತ್ರಿ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದರು. ತಾಪಂ ಸದಸ್ಯ ಗೋಪಾಲ್ ರೆಡ್ಡಿ, ದೇವರಾಜ ರೆಡ್ಡಿ, ಗೋಪಾಲ್,ಬಾಲೂ,ಸಂದೀಪ್,ಭರತ್,ವೆಂಕಟೇಶ್ಗೌಡ,ತಿ.ನಾರಾಯಣಸ್ವಾಮಿ,ತಬಲ ನಾರಾಯಣಪ್ಪ,ವೇಮನ,ಶಂಕರ್,ಕುಟ್ಟಿ ಮುನಿರಾಜು,ಚಂದ್ರು ಇದ್ದರು.
ವಸತಿ ಶಾಲೆಗೆ ಅರ್ಜಿ ಆಹ್ವಾನ
ಗುಡಿಬಂಡೆ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 2014-15ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ. ಫೆ.3ರಿಂದ ಅರ್ಜಿ ವಿತರಿಸಲಾಗುತ್ತಿದ್ದು, ಫೆ.24 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ. ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕೂ ಇದೇ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಸಂಬಂದಿಸಿ ತಾಲೂಕು ಕೇಂದ್ರದಲ್ಲಿ ಮಾ.23 ರ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಮಾಹಿತಿಗಾಗಿ 8971007901, 7676868654, 9902039098 ಗೆ ಸಂಪರ್ಕಿಸಬಹುದಾಗಿದೆ.
ಜೆಡಿಎಸ್ಗೆ ವಾಲ್ಮೀಕಿ ನಾಯಕ ಸಮಾಜ ಬೆಂಬಲ
ಕೋಲಾರ: ಬರಲಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಘೋಷಿಸಿದ್ದಾರೆ. ಮಾಜಿ ಸಚಿವ ಕೆ. ಶ್ರೀನಿವಾಸಗೌಡರ ನಿವಾಸದಲ್ಲಿ ಮುಖಂಡರು ಸಭೆ ಸೇರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನಿಸಲಾಯಿತು.
ಜೆಡಿಎಸ್ ಎಸ್.ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಬಾಲಗೋವಿಂದ ಮಾತನಾಡಿ 5 ವರ್ಷಗಳ ಹಿಂದೆ ಕೆ.ಹೆಚ್.ಮುನಿಯಪ್ಪನವರನ್ನು ನಮ್ಮ ಸಮುದಾಯ ಬೆಂಬಲಿಸಿತ್ತು. ಆದರೆ, ಜನಾಂಗಕ್ಕೆ ಯಾವುದೇ ಉಪಕಾರವಾಗಿಲ್ಲವೆಂದು ದೂರಿದರು. ವಾಲ್ಮೀಕ ಜಯಂತಿಯಲ್ಲಿ ಭಾಗವಹಿಸಿ ಸುಳ್ಳು ಆಶ್ವಾಸನೆ ಕೊಟ್ಟು ಜನಾಂಗದವರಿಗೆ ತೀರ ಅನ್ಯಾಯ ಮಾಡುತ್ತಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದ ಮುಖಂಡರು ಜೆ.ಡಿ.ಎಸ್. ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು. ಮಾತನಾಡಿದ ಶ್ರೀನಿವಾಸಗೌಡ ಮಾತನಾಡಿ ಕೋಲಾರ ತಾಲೂಕಿನ ಎಸ್.ಟಿ. ಜನಾಂಗದ ಮುಖಂಡರು ತಮ್ಮನ್ನು ಭೇಟಿ ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಸುಬ್ಬರಾಯಪ್ಪ, ಶ್ರೀ ಕೃಷ್ಣ,ಅಂಬರೀಶ್, ತೊರನಹಳ್ಳಿ ಆಂಜನಪ್ಪ, ಬೆಳ್ಳೂರು ರಾಜಣ್ಣ, ಕೃಷ್ಣಪ್ಪ, ಮಂಜು, ಕೃಷ್ಣಾಪುರ ನರೇಶ್, ಮೇಡಿಹಾಳ ಮಂಜು, ವಕ್ಕಲೇರಿ ರಾಮಾಂಜಿ, ಜೆಡಿಎಸ್ನ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಉರಿಗಿಲಿ ರುದ್ರಸ್ವಾಮಿ, ರವೀಂದ್ರ ಇದ್ದರು.