ಕೋಲಾರದಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ
ಕೋಲಾರ: ನಗರದ ಮಹಿಳಾ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್, ರೆಡ್‌ಕ್ರಾಸ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 40 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಉಪನ್ಯಾಸಕ ಗೋವಿಂದಪ್ಪ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಆನಂತರ ವಿದ್ಯಾರ್ಥಿನಿಯರೂ ರಕ್ತದಾನ ಮಾಡಿದರು. ಅನೇಕರು ತಮ್ಮ ರಕ್ತಪರೀಕ್ಷಿಸಿಕೊಂಡು ಅದರ ಗುಂಪಿನ ದಾಖಲೆ ಪಡೆದುಕೊಂಡರು. ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದವರು ರಕ್ತ ಸಂಗ್ರಹಿಸಿಕೊಂಡರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ರಕ್ತದಾನಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಪ್ರಭಾರಿ ಪ್ರಾಂಶುಪಾಲ ಆಂಜನಪ್ಪ, ಎನ್‌ಎಸ್‌ಎಸ್ ಅಧಿಕಾರಿ ಎನ್.ಸೌಮ್ಯ, ಎನ್‌ಸಿಸಿ ಅಧಿಕಾರಿ ಕೆ.ಎಸ್.ಶೈಲಜ, ಸ್ಕೌಟ್ಸ್ ಅಧಿಕಾರಿ ಕೆ.ಆರ್.ಮಂಜುಳ, ಪ್ರಾಧ್ಯಾಪಕರಾದ ಇಂದಿರಮ್ಮ, ಜಿ.ಶಿವಪ್ಪ, ಸೀನಾ ನಾಯಕ್ ಮುಂತಾದವರು ನೇತೃತ್ವ ವಹಿಸಿದ್ದರು. ವಿದ್ಯಾರ್ಥಿನಿಯರಾದ ಎ.ಪ್ರಭಾವತಿ, ಎಂ.ಎನ್.ಸೌಮ್ಯ, ಗಾಯಿತ್ರಿ, ಎನ್.ಜೆ.ಮಂಜುಳ, ಮನುಜ ಇತರರು ಇದ್ದರು.
ಕೋಲಾರ ಜಿಲ್ಲಾ ಆಸ್ಪತ್ರೆ ಫಾರ್ಮಸಿಸ್ಟ್ ಅಮಾನತು
ಕೋಲಾರ: ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಸುರೇಶ್‌ಬಾಬು ಅವರನ್ನು ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಸಾರ್ವಜನಿಕರಿಗೆ ವಿತರಣೆ ಮಾಡಬೇಕಾಗಿದ್ದ 1.97 ಲಕ್ಷ ರು.ಬೆಲೆಯ ವಿವಿಧ ಔಷಧಿಗಳನ್ನು ನಿಗದಿತ ಅವಧಿಯಲ್ಲಿ ವಿತರಣೆ ಮಾಡದೆ ವ್ಯರ್ಥಮಾಡಿರುವುದು ಹಾಗೂ ಗೋದಾಮಿನಲ್ಲಿ ಶೇಖರಣೆಯಾಗಿದ್ದ ಔಷಧಿಗಳ ವಿತರಣೆ ಮಾಡದೆ ನಿರ್ಲಕ್ಷ್ಯ ತೋರಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಈ ಕ್ರಮ ಜರುಗಿಸಿದ್ದಾರೆ. ಜಿಲ್ಲಾಧಿಕಾರಿಗಳು ಇತ್ತೀಚೆಗೆ ಜಿಲ್ಲಾ ಆಸ್ಪತ್ರೆಗೆ ಸಂಬಂಧಿಸಿದ ಸಭೆ ನಡೆಸಿದ ಸಂದರ್ಭದಲ್ಲಿ ಸುರೇಶಬಾಬು ವಿರುದ್ಧ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಅಮಾನತಿಗೆ ಶಿಫಾರಸು ಮಾಡಲಾಗಿತ್ತು. ಇದೇ ರೀತಿ ಮುಳಬಾಗಿಲು ಪುರಸಭೆ ಮುಖ್ಯಾಧಿಕಾರಿ ಅಶೋಕ್‌ಕುಮಾರ್ ವಿರುದ್ಧವೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಸರ್ಕಾರ ಕಳೆದ ವಾರ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉತ್ತಮ ರೀತಿಯಲ್ಲಿ ಆಡಳಿತ ನಡೆಸಲು ಕಷ್ಟವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದ ಬೆನ್ನ ಹಿಂದೆಯೇ ಮುಖ್ಯಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಈಗ ಜಿಲ್ಲಾ ಆಸ್ಪತ್ರೆಯ ಫಾರ್ಮಸಿಸ್ಟ್ ಅಮಾನತು ಮೂಲಕ ವಿವಿಧ ಇಲಾಖೆಗಳಲ್ಲಿ ಶಿಸ್ತು ಮೂಡಿಸಲು ದಿಟ್ಟ ಕ್ರಮಕ್ಕೆ ಮುಂದಾಗಿರುವುದು ಅಪ್ರಮಾಣಿಕರಿಗೆ ದಿಗಿಲುಂಟು ಮಾಡಿದೆ.