'ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗು'
ತಿಪಟೂರು: ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿವಾರಿಸಲು ಸಮಾಜದಲ್ಲಿ ಅರಿವು ಬಹಳ ಮುಖ್ಯ. ಚಿಕ್ಕ ವಯಸ್ಸಿನ ಮಕ್ಕಳಿಗೆ ಇದರಿಂದಾಗುವ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಮೂಲಕ ಜಾಗೃತಗೊಳಿಸುವುದು ಅಗತ್ಯ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುಜಾತಾ ತಿಳಿಸಿದರು.
ಪಟ್ಟಣದ ಎಸ್.ವಿ.ಪಿ ಕಾಲೇಜು ಆವರಣದಲ್ಲಿ ಎಸ್.ವಿ.ಪಿ ಪದವಿ ಪೂರ್ವ ಕಾಲೇಜು, ಎನ್.ಎಸ್.ಎಂ ಬಾಲಿಕ ಪ್ರೌಢಶಾಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಜಾಗೃತಿ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಬೇಕಾದರೆ ಮೊದಲು ಸಮಾಜ ಜಾಗೃತವಾಗಬೇಕು. ಇಂತಹ ಪಿಡುಗನ್ನು ನಿವಾರಿಸದಿದ್ದರೆ ಸಮಾಜಲ್ಲಿ ಬಾಳಿ ಬದುಕಬೇಕಾದ ಮಕ್ಕಳು ಅನ್ಯ ದಾರಿಗಳಲ್ಲಿ ಸಾಗಿ ಅನಾಹುತಗಳನ್ನು ಅನುಭವಿಸಬೇಕಾಗುತ್ತದೆ ಎಂದರು. ಸಿಡಿಪಿಓ ಓಂಕಾರಪ್ಪ ಮಾತನಾಡಿ ಬಾಲ್ಯವಿವಾಹ ಪದ್ಧತಿಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಧಕ್ಕೆ ಉಂಟಾಗುತ್ತಿದ್ದು, ಎಳೆ ತಾಯಂದಿರ ಮರಣ, ಶಿಶುಮರಣ ಹಾಗೂ ಅಪೌಷ್ಟಿಕತೆಗೆ ದಾರಿಯಾಗುತ್ತಿದೆ. ಈ ಅನಿಷ್ಠ ಪದ್ಧತಿ ನಿವಾರಣೆಗೆ ಎಲ್ಲರೂ ಸಹಕರಿಸಬೇಕಾಗಿ ಮನವಿ ಮಾಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್, ಕ್ಷೇತ್ರ ಸಂಪನ್ಮೂಲ ಸಂಯೋಜನಾಧಿಕಾರಿ ಕಾಂತರಾಜು ಮೇಲ್ವಿಚಾರಕಿ ಪ್ರೇಮ, ಹಿರಿಯ ಶಿಕ್ಷಕ ಹಾಲಪ್ಪ, ಮುಖ್ಯ ಶಿಕ್ಷಕಿ ಎಚ್.ಕೆ. ಪದ್ಮಾಕ್ಷಮ್ಮ ಉಪಸ್ಥಿತರಿದ್ದರು. ಉಮಾಪತಿ ಸ್ವಾಗತಿಸಿ, ಉಪನ್ಯಾಸಕ ಕೆ.ಎನ್.ರೇಣುಕಯ್ಯ ನಿರೂಪಿಸಿ, ವಿ. ಬಸವರಾಜು ವಂದಿಸಿದರು.