ನಶಿಸಿ ಹೋಗುತ್ತಿವೆ ಗೂಬೆಗಳ ಸಂತತಿ
-ಉಗಮ ಶ್ರೀನಿವಾಸ್
ತುಮಕೂರು: ಮರ ಕಡಿತ, ವಿದ್ಯುತ್ ಆಘಾತದಿಂದ ತುಮಕೂರು ಜಿಲ್ಲೆಯ ನಗರ, ಗ್ರಾಮೀಣ ಪ್ರದೇಶ ಹಾಗೂ ಅರಣ್ಯದಲ್ಲಿರುವ ಗೂಬೆಗಳ ಸಂತತಿ ನಶಿಸಿ ಹೋಗುತ್ತಿವೆ.
ತುಮಕೂರು ಜಿಲ್ಲೆಯಲ್ಲಿರುವ 6 ಪ್ರಬೇಧದ ಚುಕ್ಕೆ ಗೂಬೆ, ಬಿಳಿ ಗೂಬೆ, ಕೊಂಬಿನ ಗೂಬೆ, ಕಾಡಿನ ಗೂಬೆಗಳ ಸಂತತಿ ಈಗ ನಾಶವಾಗುತ್ತಿದೆ. ಗೂಬೆ ಪ್ರತ್ಯಕ್ಷವಾದರೆ ಅಪಶುಕನವೆಂದೋ, ಗೂಬೆ ಕೂಗಿದರೆ ದುರಂತ ಸಂಭವಿಸುತ್ತದೆ ಎಂಬ ನಂಬಿಕೆ ಹೊಂದಿರುವ ಈ ಗೂಬೆಗಳು ಈಗ ರಸ್ತೆ ಅಗಲೀಕರಣದ ನೆಪದಲ್ಲಿ ತನ್ನ ವಾಸಸ್ಥಾನವನ್ನು ಕಳೆದುಕೊಳ್ಳುತ್ತಿದೆ.
ರೈತನ ಮಿತ್ರನೂ ಆಗಿರುವ ಗೂಬೆಗಳು ರಾತ್ರಿ ವೇಳೆ ಇಲಿಗಳನ್ನು ತಿಂದು ಬೆಳೆ ಹಾನಿ ತಪ್ಪಿಸಿ ರೈತನ ಮಿತ್ರನೂ ಆಗಿರುವ ಗೂಬೆಗಳು ಆಹಾರ ಸರಪಳಿಯಿಂದಲೂ ಸಾವನ್ನಪ್ಪುತ್ತಿವೆ. ರೈತರು ಕೃಷಿ ಭೂಮಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೀಟನಾಶಕಗಳು ಆಹಾರ ಸರಪಳಿ ಮೂಲಕ ಗೂಬೆಗಳ ದೇಹ ಸೇರಿ ಸಾವನ್ನಪ್ಪುತ್ತಿವೆ.
ವಾಸಕ್ಕೆ ಜಾಗವಿಲ್ಲ: ದೊಡ್ಡ ದೊಡ್ಡ ಮರಗಳು ಪೊಟರೆಗಳಲ್ಲಿ, ಕಲ್ಲು ಬಂಡೆಗಳ ಸಂದುಗಳಲ್ಲಿ ಗೂಬೆಗಳು ವಾಸ ಸ್ಥಾನ ಮಾಡಿಕೊಂಡಿರುತ್ತವೆ. ಆದರೆ ರಸ್ತೆ ಬದಿಯಲ್ಲಿನ ದೊಡ್ಡ ದೊಡ್ಡ ಆಲದ ಮರ, ಅರಳಿಮರ, ನೇರಳೆ, ಮರಗಳು ರಸ್ತೆಯ ಅಗಲೀಕರಣದ ನೆಪದಿಂದಾಗಿ ಧರೆಗೆ ಉರುಳುತ್ತಿರುವುದರಿಂದ ವಾಸಸ್ಥಾನವಿಲ್ಲದೆ ಕಂಗಾಲಾಗಿವೆ. ಕೊರಟಗೆರೆ, ತುಮಕೂರು, ಕೊರಟಗೆರೆ ಊರ್ಡಿಗೆರೆ ಮಾರ್ಗದ ಇಕ್ಕೆಲಗಳಲ್ಲಿ ಇದ್ದ ಅನೇಕ ಮರಗಳ ಪೊಟರೆಯಲ್ಲಿದ್ದ ನೂರಾರು ಗೂಬೆಗಳು ಮರ ಕಡಿತ ಮಾಡಿದ್ದರಿಂದ ಕಣ್ಮರೆಯಾಗಿವೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನೆಪದಲ್ಲೂ ಕೂಡ ಗೂಬೆಗಳು ಅಳವಿನಂಚಿಗೆ ಸರಿದಿವೆ.
ಹಾಗೆಯೇ ರಾತ್ರಿ ವೇಳೆ ಇಲಿ ಬೇಟೆಗೆ ವಿದ್ಯುತ್ ತಂತಿ ಮೇಲೆ ಕೂರುವಾಗಲೂ ಸಹ ಗೂಬೆಗಳು ಸಾವನ್ನಪ್ಪುತ್ತಿವೆ. ತುಮಕೂರು ನಗರ, ಗ್ರಾಮೀಣ ಭಾಗ, ದೇವರಾಯನ ದುರ್ಗ, ಸಿದ್ದರ ಬೆಟ್ಟ ಮುಂತಾದ ಅರಣ್ಯದಲ್ಲಿ ಈ ಗೂಬೆಗಳು ವ್ಯಾಪಕವಾಗಿದೆ. ಬೇರೆ ಪಕ್ಷಿಗಳ ಹಾಗೆ ಸುಲಭವಾಗಿ ಕಾಣಲು ಸಿಗದ ಈ ಗೂಬೆಗಳು ರಸ್ತೆ ಪಕ್ಕದ ಮರಗಳ ಪೊಟರೆಯಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿತ್ತು. ಆದರೆ ಈಗ ರಸ್ತೆ ಅಗಲೀಕರಣ ನೆಪದಲ್ಲಿ ಮರಗಳು ಧರೆಗೆ ಉರುಳುತ್ತಿರುವುದರಿಂದ ಅಪರೂಪದ ಗೂಬೆಗಳು ಕಣ್ಮರೆಯಾಗುತ್ತಿವೆ.
ರಸ್ತೆ ಅಗಲೀಕರಣ ಮಾಡುವ ಸಂದರ್ಭ ಬಂದರೆ ಆದಷ್ಟು ಹಳೆಯ ಮರಗಳನ್ನು ಉಳಿಸಿಕೊಳ್ಳಬೇಕು. ಕಾರಣ ಮರದ ಪೊಟರೆಗಳಲ್ಲಿ ತನ್ನ ವಾಸಸ್ಥಾನ ಮಾಡಿಕೊಂಡಿರುವ ಗೂಬೆಗಳು ಮರವಿಲ್ಲದೆ ತನ್ನ ಜಾಡನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಹಳೆಯ ಮರಗಳನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಬೇಕು ಎನ್ನುತ್ತಾರೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ವಿ. ಗುಂಡಪ್ಪ.