ರಿಯಾಯಿತಿ ದರದಲ್ಲಿ ಪಠ್ಯ ಪುಸ್ತಕ ನೀಡಲು ಒಪ್ಪಿಗೆ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಿಗಾಗಿ ಪರದಾಡುವುದನ್ನು ತಪ್ಪಿಸಲು ಪುಸ್ತಕದ ಅಂಗಡಿಗಳಿಗೆ ಮತ್ತು ಕಾಲೇಜು ಪ್ರಾಂಶುಪಾಲರು ಪತ್ರ ಬರೆದುಕೊಟ್ಟರೆ ರಿಯಾಯಿತಿ ದರದಲ್ಲಿ ಪಠ್ಯ ಪುಸ್ತಕ ನೀಡಲು ವಿವಿ ಒಪ್ಪಿದೆ.
ಈ ಸಂಬಂಧ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ತುಮಕೂರು ವಿ.ವಿಯ ಕುಲಪತಿ ಡಾ. ಎ.ಎಚ್. ರಾಜ್ಸಾಬ್ ಅವರು ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಯ ನಿಯೋಗಕ್ಕೆ ಭರವಸೆ ನೀಡಿದರು.
ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಗಳು ತುಮಕೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಕಟಿಸಿರುವ ಪದವಿಯ ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲೂ ಇಲ್ಲದ ಪುಸ್ತಕ ನೀತಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಇರುವುದು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ದೊರೆಯದೇ ಇರಲು ಕಾರಣವಾಗಿದೆ ಎನ್ನಲಾಗಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹುಟ್ಟಿದ ತುಮಕೂರು ವಿಶ್ವವಿದ್ಯಾನಿಲಯ ಇದನ್ನು ಮನಗಂಡು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಎಲ್ಲೆಡೆ ದೊರೆಯುವಂತೆ ಮಾಡಬೇಕು. ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಮೂಲಕವಾದರೂ ರಿಯಾಯಿತಿ ದರದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ವಾಹನದ ಮೂಲಕ ಪುಸ್ತಕಗಳನ್ನು ಸರಬರಾಜು ಮಾಡಿ, ನಂತರ ಒಂದೇ ಚಲನ್ನಲ್ಲಿ ಹಣವನ್ನು ಬ್ಯಾಂಕ್ಗೆ ಸಂದಾಯ ಮಾಡುವ ರೀತಿಯಲ್ಲಿಯಾದರೂ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ದೊರೆಯಬೇಕು. ಈ ಬಗ್ಗೆ ಒತ್ತಾಯಿಸಿದ ಎಸ್ಎಫ್ಐ ಮತ್ತು ಡಿವೈಎಫ್ಐನ ಸಂಘಟನೆ ಮುಖಂಡರಿಗೆ ಭರವಸೆ ನೀಡಲಾಗಿದೆ. ನಿಯೋಗದಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಇ.ಶಿವಣ್ಣ, ಡಿವೈಎಫ್ಐ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ ಇದ್ದರು.