ಕಾನೂನು ಹೆಚ್ಚಳದಿಂದ ಅರಾಜಕತೆ
ತುಮಕೂರು: ಕಾನೂನುಗಳು ಹೆಚ್ಚಾದಂತೆ ಅರಾಜಕತೆ ಹೆಚ್ಚಾಗುತ್ತದೆ ಎಂದು ಹೈಕೋರ್ಟ್ ನ್ಯಾಯಾಧೀಶ ಕೆ.ಎನ್. ಫಣೀಂದ್ರ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರು ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.
ಎಲ್ಲವನ್ನೂ ಕಾನೂನಿಂದಲೇ ಹತೋಟಿಗೆ ತರಬೇಕು ಎಂಬ ಭಾವನೆ ಸರಿಯಲ್ಲ. ಎಲ್ಲಕ್ಕೂ ಕಾನೂನೇ ಮದ್ದಲ್ಲ. ನೈತಿಕತೆ ಕಡಿಮೆಯಾದಂತೆ ಕಾನೂನುಗಳು ಹೆಚ್ಚುತ್ತವೆ. ಸಮಾಜವೂ ಈ ಬಗ್ಗೆ ಯೋಚಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ಇಂದಿನ ತುರ್ತು. ಅಷ್ಟೇ ಅಲ್ಲ ನೈತಿಕ ಶಿಕ್ಷಣದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಬೇಕಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಶಿಕ್ಷಣದ ಅಗತ್ಯತೆ ಇಂದು ಹೆಚ್ಚಾಗಿದೆ. ಮಕ್ಕಳಲ್ಲಿ ಜೀವನ ಮೌಲ್ಯ, ಸ್ವಾಭಿಮಾನ, ದೇಶಭಕ್ತಿ,ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವಂತಹ ಶಿಕ್ಷಣವನ್ನು ಕೊಡುವಂತಹ ಹೊಣೆಗಾರಿಕೆ ಸಮಾಜ ಮತ್ತು ತಂದೆ-ತಾಯಿ, ಪೋಷಕರ ಮೇಲಿದೆ ಎಂದರು.
ಮನೆಯೆ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರುವು ಎಂಬ ಸಂಸ್ಕೃತಿ ನಮ್ಮದು. ಅದರಂತೆ ಮನೆಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಜೀವನಮೌಲ್ಯಗಳ ಬಗೆಗಿನ ಶಿಕ್ಷಣ ಹಾಗೂ ತಂದೆಯಾದವರು ನಡವಳಿಕೆ,ನೀತಿ ನ್ಯಾಯ -ಧರ್ಮ ಬಗೆಗಿನ ಶಿಕ್ಷಣವನ್ನು ಮಕ್ಕಳಿಗೆ ನೀಡುವಂತಾಗಬೇಕು ಎಂದರು.
ಮಾತೃಭಾಷಾ ಮಾಧ್ಯಮ: ಮಾತೃಭಾಷಾ ಮಾಧ್ಯಮದ ಬಗೆಗೆ ಎದ್ದಿರುವ ಗೊಂದಲ-ಗಲಾಟೆಗಳ ಕುರಿತು ಮಾತನಾಡಿದ ಅವರು ಮಾತೃಭಾಷೆ ಮನೆಯ ಭಾಷೆಯಾಗಬೇಕು. ಮನೆಗಳಲ್ಲಿನ ಕುಟುಂಬಗಳ ನಡುವಿನ ವ್ಯವಹಾರಗಳು ಮಾತೃಭಾಷೆಯಲ್ಲಿಯೇ ನಡೆಯಬೇಕು ಎಂದರು.
ಸಂಬಂಧವಿಲ್ಲ: ಮಾತೃಭಾಷಾ ನೀತಿಯ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಉತ್ತಮವಾಗಿದ್ದು, ಅದನ್ನು ಅನುಸರಿಸುವುದು ಒಳ್ಳೆಯದು. ಇತರೆ ಭಾಷೆಗಳಿಗಿಂತ ಹೆಚ್ಚಿನ ಗೌರವ ಮತ್ತು ಪ್ರಾಧಾನ್ಯತೆ ಮಾತೃಭಾಷೆಗೆ ನೀಡಬೇಕು ಎಂದರು.
ಶಿಕ್ಷಣದಿಂದ ಸರ್ವೋದಯ ಆಗುತ್ತಿಲ್ಲ: ವಿದ್ಯಾವಂತರಾದವರಿಗೆ ವಿನಯ ಮತ್ತು ಸಮಾಜಸೇವೆ ಮುಖ್ಯವಾಗಬೇಕು.ಶಿಕ್ಷಣ ಎಂದಿಗೂ ಅಹಂಕಾರವನ್ನು ಸಹಿಸುವುದಿಲ್ಲ. ಇಂದಿನ ಯುವಪೀಳಿಗೆ ಸಾಗುತ್ತಿರುವ ದಾರಿಯ ಬಗ್ಗೆ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದ ಅವರು, ಶಿಕ್ಷಣ ಸಮಾಜದ ಪ್ರಗತಿಗೆ ಪೂರಕವಾಗಿರಬೇಕೇ ವಿನಃ, ಎಂದೂ ಸಹ ವಿದ್ವಂಸಕ ಕೃತ್ಯಗಳಿಗೆ ಬಳಕೆಯಾಗಬಾರದು ಎಂದರು. ಶಿಕ್ಷಣದಿಂದ ಸರ್ವೋದಯ ಆಗಬೇಕು. ಆದರೆ ಅದಾಗುತ್ತಿಲ್ಲ ಎಂದು ವಿಷಾದಿಸಿದರು. ವಿಪ್ರ ನೌಕರರ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆ.ಎಸ್. ವೆಂಕಟೇಶಯ್ಯ, ಸಂಘದ ಉಪಾಧ್ಯಕ್ಷ ಅನಂತರಾಮಯ್ಯ ಉಪಸ್ಥಿರಿದ್ದರು. ಕೃಷ್ಣಮೂರ್ತಿ ಹಾಗೂ ನಾಗರಾಜ್ ವೇದಘೋಷ ಮಾಡಿದರು. ಗಣೇಶ್ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಸ್ವಾಗತಿಸಿದರು. ರಮ್ಯಾ ವಿ. ಕಲ್ಲೂರು ನಿರೂಪಿಸಿದರು.