ಪ್ರೊಬೇಷನರಿ ಹುದ್ದೆಗೆ ಸಿಇಟಿ ತರಬೇತಿ
ಮೈಸೂರು: ಮೈಸೂರ್ ಸ್ಕೂಲ್ ಆಫ್ ಬ್ಯಾಂಕಿಂಗ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಆರ್ಆರ್ಬಿ, ಬ್ಯಾಂಕ್ ಆಫ್ ಬರೋಡ ಮತ್ತು ಐಡಿಬಿಐನಲ್ಲಿ ಖಾಲಿ ಇರುವ ಕ್ಲರಿಕಲ್, ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಇಟಿ ತರಬೇತಿ ನೀಡಲಿದ್ದು, ಮೊ. 99162 53406 ಸಂಪರ್ಕಿಸಬಹುದು. ವಿದ್ಯಾಭವನದಲ್ಲಿ ಬ್ಯಾಂಕಿಂಗ್ ಐಬಿಪಿಎಸ್ ಪರೀಕ್ಷೆಗಳಿಗೆ ತರಬೇತಿ ನೀಡಲಿದ್ದು, ಜು.15 ರಿಂದ ತರಗತಿ ಆರಂಭವಾಗಲಿದೆ. ಮೊ. 98453 41755 ಸಂಪರ್ಕಿಸಬಹುದು. ಎಸ್.ಆರ್.ಮಿಷನ್ ಅಕಾಡೆಮಿಯಿಂದ ಐಐಟಿ ಪರೀಕ್ಷೆಗೆ ತರಬೇತಿ ನೀಡಲಿದ್ದು, ಜು.15 ರಿಂದ ತರಗತಿ ಆರಂಭವಾಗಲಿದೆ. ಇತರೆ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಆರಂಭವಾಗಲಿದೆ. ಮೊ. 97435 27252 ಸಂಪರ್ಕಿಸಬಹುದು.
ರು. 2 ಲಕ್ಷ ಮೌಲ್ಯದ ನೋಟ್ ಪುಸ್ತಕಗಳ ವಿತರಣೆ
ಮೇಲುಕೋಟೆ: ಇಲ್ಲಿನ ಶಠಗೋಪರಾಮಾನುಜ ಕೂಠಂ ಟ್ರಸ್ಟ್ ಸುತ್ತಮುತ್ತಲ ಸರಕಾರಿ ಪ್ರಾಥಮಿಕ ಶಾಲೆಗಳ ಒಂದು ಸಾವಿರ ಮಕ್ಕಳಿಗೆ 2 ಲಕ್ಷ ರು. ಮೌಲ್ಯದ ನೋಟ್ ಪುಸ್ತಕಗಳು, ಲೇಖನಿಗಳನ್ನು ವಿತರಿಸಿತು. ಸಂಘದ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರತಿ ಶಾಲೆಗಳಿಗೆ ತೆರಳಿ ಶಾಲೆಯ ಪ್ರತಿಮಗುವಿಗೂ ಒಂದು ವರ್ಷಕ್ಕಾಗುವಷ್ಟು ನೋಟ್ ಪುಸ್ತಕಗಳು ಲೇಖನಸಾಮಗ್ರಿ ಮತ್ತು ಜಾಮೆಟ್ರಿ ಬಾಕ್ಸ್ಗಳನ್ನು ಉಚಿತವಾಗಿ ನೀಡಿದರು. ಖ್ಯಾತ ಕವಿ ಪು.ತಿ.ನ ವ್ಯಾಸಂಗ ಮಾಡಿದ ಮೇಲುಕೋಟೆಯ ಶತಮಾನದ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಪ್ರಥಮ ಕಾರ್ಯಕ್ರಮ ಆಯೋಜಿಸಿ ಉದ್ಘಾಟನೆ ಮಾಡಿದ ನಂತರ ವಿವಿಧ ಶಾಲೆಗಳಿಗೆ ತೆರಳಿ ಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ಸುದರ್ಶನ ರಾಮಾನುಜಂ ಮಾತನಾಡಿ ಕಳೆದ 20 ವರ್ಷಗಳಿಂದ ನಾವು ರಾಮಾನುಜಾಚಾರ್ಯರ ಕರ್ಮಭೂಮಿಯಾದ ಮೇಲುಕೋಟೆ ಸುತ್ತಮುತ್ತಲ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಎರಡೂ ಸೆಮಿಸ್ಟರ್ ಲಭ್ಯವಾಗುವ ನೋಟ್ ಪುಸ್ತಕ
ವಿತರಣೆ ಮಾಡುತ್ತಾ ಬಂದಿದ್ದೇವೆ ಎಂದರು. ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಶ್ರೀಧರ್, ಜಂಟಿ ಕಾರ್ಯದರ್ಶಿ ಕೋಕಿಲಮ್ಮ, ಅಡಿಟರ್ ಶ್ರೀನಿವಾಸರಾವ್, ಖಜಾಂಚಿ ಶ್ರೀನಿವಾಸರಾಮಾನುಜ ದಾಸರ್, ಪೋಷಕ ಸದಸ್ಯರಾದ ಡಿ.ರಾಮು, ಮೇಲುಕೋಟೆ ಶಾಖೆಯ ವ್ಯವಸ್ಥಾಪಕ ಪ್ರಭಾಕರ ರಾಮಾನುಜದಾಸನ್ ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಸಂತಾನರಾಮನ್, ಶಿಕ್ಷಕರಾದ ಮಹಾಲಕ್ಷ್ಮೀ, ಜಯಂತಿ, ವೀಣಾ, ರಶ್ಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದಾದ ನಂತರ ಟ್ರಸ್ಟ ವತಿಯಿಂದ ಮೇಲುಕೋಟೆ ಬಾಲಕರು, ಬಾಲಕಿಯರ ಶಾಲೆ, ಬಳಿಘಟ್ಟ, ನಾರಣಾಪುರ, ಕದಲಗೆರೆ, ಕಾಡೇನಹಳ್ಳಿ, ಶಂಬೂನಹಳ್ಳಿ, ನ್ಯಾಮನಹಳ್ಳಿ, ಕಜ್ಜಿಕೊಪ್ಪಲು ಮುಂತಾದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ನೋಟ್ ಪುಸ್ತಕ ಲೇಖನ ಸಾಮಗ್ರಿ ವಿತರಿಸಿದರು.
ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಬಂಧನ
ಮಳವಳ್ಳಿ: ಖಚಿತ ಮಾ ಹಿತಿ ಮೇರೆಗೆ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ದನಕರುಗಳನ್ನು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಕ್ಯಾಂಟರ್ ಅನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ತರುವ ಮಾರ್ಗಮಧ್ಯದಲ್ಲಿ ಸಾರ್ವಜನಿಕರೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಲೂಕಿನ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಮಿಕ್ಕೆರೆ ಗ್ರಾಮದ ಬಳಿ ಶನಿವಾರ ಸಂಜೆ ವಶಪಡಿಸಿಕೊಂಡ ಕ್ಯಾಂಟರ್ ಸಮೇತ ಠಾಣೆಗೆ ಹಿಂದಿರುಗುತ್ತಿದ್ದಾಗ ಕಿರುಗಾವಲು ಗ್ರಾಮದ ಬಳಿ ಏಕಾಏಕಿ ಎರಗಿದ ಸಾರ್ವಜನಿಕರು ವಶಪಡಿಸಿಕೊಂಡಿದ್ದ ಕ್ಯಾಂಟರ್ ಸಮೇತ ಪರಾರಿಯಾಗಿದ್ದರೆನ್ನಲಾಗಿದೆ. ದಾಳಿಯ ಸಮಯದಲ್ಲಿ ಕಿರುಗಾವಲು ಪಿಎಸ್ಐ ಮಂಜು ಹಾಗೂ ಸಿಬ್ಬಂದಿಗಳಾದ ನಾಗೇಂದ್ರ, ರಾಜೇಂದ್ರ ಪ್ರಸಾದ್, ಕೃಷ್ಣಮೂರ್ತಿ, ಮಲ್ಲಿಕಾರ್ಜುನ್, ಪ್ರದೀಪ್ ಕುಮಾರ್, ರಮೇಶ್ ಹಾಗೂ ಚಾಲಕ ಶ್ರೀನಿವಾಸ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಆರಕ್ಷಕ ಸಿಬ್ಬಂದಿಗೆ ದೊರತೆ ಖಚಿತ ಮಾಹಿತಿಯ ಮೇರೆಗೆ ಭಾನುವಾರ ಐವರು ಆರೋಪಿಗಳನ್ನು ಬಂಧಿಸಿ ದನಕರುಗಳ ಸಮೇತ ಪರಾರಿಯಾಗಿದ್ದ ವಾಹನವನ್ನು ಹಾಗೂ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 10 ಹಸುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಿರುಗಾವಲು ಗ್ರಾಮದ ಪಯಾಜ್, ಸಿದ್ದರಾಜು, ಎಜಾಷ್, ಅಜೀಜ್ ಹಾಗೂ ಪರ್ಮಾನ್ ಎನ್ನಲಾಗಿದ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮೇಲುಕೋಟೆ: ಹೋಬಳಿಯ ಸುಂಕಾತೊಣ್ಣೂರು ಕಾಳೇನಹಳ್ಳಿ ರಸ್ತೆಯ ತೋಟವೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಚೇತನ್ ಎಂಬುವವರಿಗೆ ಸೇರಿದ ತೆಂಗಿನ ತೋಟದಲ್ಲಿ ಸುಮಾರು 55 ವರ್ಷ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿ ಬಿಳಿಯ ತುಂಬುದೋಳಿನ ಶರ್ಟ್ ಧರಿಸಿದ್ದಾರೆ. ಕೂಲಿಗೆ ಬಂದಿರುವ ಈತ 5.5 ಅಡಿ ಎತ್ತರವಿದ್ದಾನೆ. ಈತ ಕುರುಚಲು ಗಡ್ಡ ಬಿಟ್ಟಿದ್ದಾನೆ. ಶವವನ್ನು ಪಂಚೆನಾಮೆ ನಡೆಸಿ ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿನ ಶವಾಗಾರದಲ್ಲಿ ಇಡಲಾಗಿದೆ. ವಾರಸುದಾರು ಯಾರಾದರೂ ಇದ್ದರೆ ಮೇಲುಕೋಟೆ ಪೊಲೀಸ್ ಠಾಣೆ ಸಂಪರ್ಕಿಸಬೇಕೆಂದು ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಗ್ರಾಮಗಳಲ್ಲೂ ಪ್ರತಿಭಾವಂತರಿದ್ದಾರೆ
ಹುಳಿಯಾರು: ಸರ್ಕಾರಿ ಶಾಲೆಗಳೆಂದು ಮೂಗು ಮುರಿಯವ ಜನರಿಗೆ ತಮ್ಮ ಸಾಧನೆಯ ಮೂಲಕ ಉತ್ತರ ನೀಡುವ ಪ್ರತಿಭಾವಂತ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿದ್ದಾರೆ ಎಂದು ನೀರಾವರಿ ಹೋರಾಟಗಾರ ಡಾ.ಪರಮೇಶ್ವರಪ್ಪ ಹೇಳಿದರು.ಸಮೀಪದ ಕಾಮಲಾಪುರದಲ್ಲಿ ಶಾರದಜಯರಾಮಪ್ಪ ಚಾರಿಟಬಲ್ ಟ್ರಸ್ಟ್ನಿಂದ ವಿವಿಧ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಪ್ರೌಢಶಾಲೆ ಮುಖ್ಯಶಿಕ್ಷಕ ವೀರಭದ್ರಪ್ಪ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಗಂಗಾಧರಯ್ಯ, ಗ್ರಾಮಸ್ಥರಾದ ರಂಗಯ್ಯ, ಸೀತಾರಾಮಯ್ಯ, ಶಿವಕುಮಾರ್, ರಾಮದಾಸ್, ಚಂದ್ರಪ್ಪ ಇದ್ದರು.
ಕ್ಷೇತ್ರದ ಅಭಿವೃದ್ಧಿಗೆ ಬದ್ಧ
ಗುಬ್ಬಿ: ಕ್ಷೇತ್ರದ ಅಗತ್ಯ ಮೂಲಭೂತ ಸೌಲಭ್ಯಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಶಿವರಾತ್ರಿ ಕಲ್ಯಾಣ ಮಂದಿರದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಮತ್ತು ಶಾಸಕರ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ 52 ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ತಾಲೂಕಿನ ನೂರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ವಿಶೇಷ ಅವಕಾಶ ಕಲ್ಪಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ, ವಿಧಾನ ಪರಿಷತ್ಗೆ ಆಯ್ಕೆಯಾಗಿರುವ ಆರ್.ಚೌಡರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕರ ಪತ್ನಿ ಭಾರತಿ ಶ್ರೀನಿವಾಸ್, ಪುತ್ರ ದುಶ್ಯಂತ್ ಸೇರಿ ತಾಪಂ ಅಧ್ಯಕ್ಷ ಕೆ.ಎನ್.ಬಾಲಕೃಷ್ಣ, ಪಪಂ ಅಧ್ಯಕ್ಷ ಜಿ.ಡಿ.ಸುರೇಶ್ಗೌಡ, ಉಪಾಧ್ಯಕ್ಷೆ ಪುಷ್ಪಾವತಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾದ್ಯ, ಶಶಿಧರ್, ಜಿ.ಸಿ.ನರಸಿಂಹಮೂರ್ತಿ, ಕುಮಾರ್, ತ್ರಿವೇಣಿ, ಕೃಷ್ಣವೇಣಿ ಸೇರಿದಂತೆ ಅನೇಕರು ಹಾಜರಿದ್ದರು.
ಸೊಳ್ಳೆಗಳ ತಾಣ ಹುಳಿಯಾರು
ಹುಳಿಯಾರು: ಪಟ್ಟಣದ ಬಸ್ ನಿಲ್ದಾಣ ಹಾಗೂ ಆಸ್ಪತ್ರೆಯ ಪಕ್ಕದ ರಸ್ತೆ ಬದಿ ಕಳೆದ ಕೆಲ ದಿನಗಳಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದರೂ ತೆರವುಗೊಳಿಸುವಲ್ಲಿ ಸ್ಥಳೀಯ ಗ್ರಾಪಂ ವಿಫಲವಾಗಿದೆ. ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಚರಂಡಿಗಳಲ್ಲಿ ಕಸ ತುಂಬಿ ನೀರಿ ಸರಿಯಾಗಿ ಹೋಗದೆ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ಈಗಾಗಲೇ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಚಿಕೂನ್ ಗುನ್ಯಾ ಹಾಗೂ ಜ್ವರ ಬಾಧಿಸುತ್ತಿದ್ದು, ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ರೋಗಗಳು ಆವರಿಸುವ ಮುಂಚೆ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.