ಅಡಕೆಗೆ ಹೆಚ್ಚು ಬೆಲೆ ನೀಡಲು ಮನವಿ
ಪಾವಗಡ: ಈಗಿನ ಮಾರುಕಟ್ಟೆ ದರದಂತೆ ಅಡಕೆಗೆ ಹೆಚ್ಚು ಬೆಲೆ ನೀಡಿ ರೈತರ ಅಭಿವೃದ್ಧಿಗೆ ಸಹಕರಿಸಿ ಎಂದು ತಾಲೂಕು ಅಡಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.
ತಾಲೂಕಿನ ಅಡಕೆ ಬೆಳೆಗಾರರು ಕಡೆಮೆ ದರಕ್ಕೆ ವ್ಯಾಪಾರಸ್ಥರಿಗೆ ಅಡಕೆ ತೋಟ ಮಾರಾಟ ಮಾಡಿ ನಷ್ಟಕಿಡಾದ ಹಿನ್ನಲೆಯಲ್ಲಿ ತಾಲೂಕಿನ ಅಡಕೆ ಬೆಳೆಗಾರರು ಸೋಮವಾರ ತಾಲೂಕಿನ ಓಬಳಾಪುರದ ಅಂಜನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಸಭೆ ನಡೆಸಿ ರೈತರಿಗೆ ಅದ ಅನ್ಯಾಯ ಸರಿಪಡಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಸಭೆಯಲ್ಲಿ ಸಂಘದ ನಿರ್ದೇಶಕ ಕೆ. ರಾಜಣ್ಣ ಮಾತನಾಡಿ, ಬಡತನದ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಅಡಕೆ ಬೆಳೆ ಫಸಲಿಗೆ ಬರುವ ಮುನ್ನವೆ ತೋಟಗಳನ್ನು ಕಡಿಮೆ ದರಕ್ಕೆ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದು, ಇದರಿಂದ ರೈತರಿಗೆ ನಷ್ಟವಾಗಿದೆ ಎಂದು ಆರೋಪಿಸಿದರು.
ರೈತರು ತೋಟಗಳು ಮಾರಾಟ ಮಾಡುವ ಸಂದರ್ಭದಲ್ಲಿ ಪ್ರತಿ ಕ್ವಿಂಟಲ್ ಅಡಕೆಗೆ 30ರಿಂದ 35ಸಾವಿರ ಮಾರುಕಟ್ಟೆ ಧರ ನಿಗಧಿಯಾಗಿದ್ದು, ಈಗ ಕ್ವಿಂಟಲ್ ಅಡಕೆಗೆ 90 ಸಾವಿರ ದರ ನಿಗದಿಯಾಗಿದೆ. ಈಗಿನ ಮಾರುಕಟ್ಟೆ ದರದಂತೆ ಲೆಕ್ಕ ಹಾಕಿ ಬೆಲೆ ನೀಡಿ ಎಂದು ವ್ಯಾಪಾರಸ್ಥರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಈ ಬಗ್ಗೆ ಅಡಕೆ ತೋಟಗಳು ಖರೀದಿಸಿದ್ದ ವ್ಯಾಪಾರಸ್ಥರಲ್ಲಿ ಚರ್ಚಿಸಿದ್ದು ಕೆಲ ವ್ಯಾಪಾರಸ್ಥರು ಸಕಾರತ್ಮಕವಾಗಿ ಸ್ವಂಧಿಸಿದರೆ ಮತ್ತೆ ಕೆಲವರು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮದ್ಯೆ ಪ್ರವೇಶ ಮಾಡಿ ಈಗಿನ ಮಾರುಕಟ್ಟೆ ಧರದಂತೆ ಪ್ರತಿ ಕ್ವಿಂಟಲ್ ಅಡಕೆಗೆ ಶೇ.10ರಷ್ಟು ಹಣ ನೀಡಿ ಬಡ ರೈತರನ್ನು ಉಳಿಸಿ ಎಂದು ಅವರು ಮನವಿ ಮಾಡಿದರು. ಸಂಘದ ರಂಗಸಮುದ್ರ ರುದ್ರಮುನಿ, ನಾಗೇಂದ್ರಗೌಡ, ಜಗಣ್ಣ, ಎಚ್.ಆರ್. ರಾಮದಾಸ್, ಲಿಂಗಮೂರ್ತಿ, ಸತ್ಯನಾರಾಯಣರೆಡ್ಡಿ, ರಘುನಾಥರೆಡ್ಡಿ, ಸದಾಶಿವರೆಡ್ಡಿ, ಶಂ. ರಾಮಾಂಜಿನಪ್ಪ, ಚನ್ನಪ್ಪ ಇದ್ದರು.