ಗ್ರಾಮೀಣ ಪ್ರತಿಭೆ ಮುಖ್ಯವಾಹಿನಿಗೆ ಬರಲಿ
ತುಮಕೂರು: ಗ್ರಾಮಾಂತರ ಪ್ರತಿಭೆಗಳು ಮುಖ್ಯವಾಹಿನಿಗೆ ಬರುವಂತೆ ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಕರೆ ನೀಡಿದರು.
ತುಮಕೂರಿನ ಎಸ್‌ಎಸ್‌ಐಟಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟ್ಯಾಲೆಂಟ್ಸ್ ಆಫ್ ತುಮಕೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಬಹಳಷ್ಟು ಮಂದಿ ಪ್ರತಿಭಾವಂತರಿದ್ದು, ಅವರ ಪ್ರತಿಭೆ ಗುರುತಿಸಿ ವೇದಿಕೆಗೆ ಕರೆತರುವ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಅದನ್ನು ನೀರೆರೆದು, ಪೋಷಿಸಿ, ಮುಂದುವರೆಸುವ ವಾತಾವರಣ ನಿರ್ಮಾಣವಾಗಬೇಕು. ಎಲ್ಲಾ ಮಕ್ಕಳಲ್ಲೂ ತನ್ನದೇ ಆದ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಅನಾವರಣಗೊಳಿಸುವ ಮಾರ್ಗದರ್ಶಕರು ಬೇಕು ಎಂದರು.
ಟ್ಯಾಲೆಂಟ್ಸ್ ಆಫ್ ತುಮಕೂರು ಕಾರ್ಯಕ್ರಮ ತುಮಕೂರು ನಗರಕ್ಕೆ ಮಾತ್ರ ಸೀಮಿತವಾಗದೆ, ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ವಿಸ್ತಾರಗೊಳ್ಳಬೇಕು. ಇತರೆ ಜಿಲ್ಲೆಗಳ ವಿದ್ಯಾರ್ಥಿಗಳು ಹುಬ್ಬೇರಿಸುವಂತೆ ಟ್ಯಾಲೆಂಟ್ಸ್ ಆಫ್ ತುಮಕೂರು ಕಾರ್ಯಕ್ರಮ ಯಶಸ್ವಿಯಾಗಲೆಂದು ಅವರು ಹಾರೈಸಿದರು. ಕಾಲೇಜಿನ ಉಪಪ್ರಾಂಶುಪಾಲ ವೀರಯ್ಯ, ಡೀನ್ ಡಾ. ರಾಜೇಶ್ ಕಾಮತ್, ಲೀಡ್ ಬ್ಯಾಂಕ್ ಮ್ಯಾನೇಜರ್ ಜಯರಾಮಯ್ಯ, ಕ್ಯಾ. ಸಂಜೀವ್ ಕುಮಾರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.