2 ವರ್ಷದಿಂದ ಹಾಳಾದ ಶುದ್ಧ ಕುಡಿವ ನೀರಿನ ಘಟಕ ಸರಿಪಡಿಸಿ
ಪಾವಗಡ: ಶುದ್ಧ ನೀರಿನ ಘಟಕ ಸ್ಥಗಿತಗೊಂಡು ಎರಡು ತಿಂಗಳಾದರೂ ಘಟಕ ದುರಸ್ತಿಪಡಿಸಿ ಶುದ್ಧ ಕುಡಿಯುವ ನೀರು ಕಲ್ಪಿಸುವಲ್ಲಿ ರಂಗಸಮುದ್ರ ಗ್ರಾಪಂ ಕಾರ್ಯದರ್ಶಿ ನಿರ್ಲಕ್ಷ್ಯವಹಿಸಿದ್ದಾರೆಂದು ಓಬಳಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಕುಡಿಯುವ ನೀರಿನ ಹಾಹಾಕಾರದ ಹಿನ್ನಲೆಯಲ್ಲಿ ಜಿಪಂ ವತಿಯಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಘಟಕ ನಿರ್ಮಿಸಿದ ನಂತರ ದರ ನಿಗದಿಪಡಿಸಿ ಕೆಲವು ದಿನಗಳ ಮಟ್ಟಿಗೆ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಆದರೆ ಈಗ ಘಟಕ ಸ್ಥಗಿತವಾಗಿದೆ. ದುರಸ್ತಿ ಮಾಡಬೇಕೆಂದು ಆಗ್ರಹಿಸಿದರೂ 2 ತಿಂಗಳಿಂದ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಶುರುವಾಗಿದೆ. ಶೀಘ್ರವೇ ದುರಸ್ತಿ ಮಾಡಿ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಕೆ.ಜಗದೀಶ್, ಓಬಯ್ಯ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಪಂ ಅಧ್ಯಕ್ಷರ ಆಯ್ಕೆಗೆ ಹರ್ಷ
ಪಾವಗಡ: ವೈ.ಎಚ್. ಹುಚ್ಚಯ್ಯ ಜಿಪಂ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಜನಸಾಮಾನ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಾಲೂಕು ಜೆಡಿಎಸ್ ಮುಖಂಡ ನೇರಳೆಕುಂಟೆ ಜಯರಾಮಪ್ಪ ಮಾತನಾಡಿ, ಜಿಪಂ ಅಧ್ಯಕ್ಷರಾಗಿ ವೈ.ಎಸ್. ಹುಚ್ಚಯ್ಯ, ಉಪಾಧ್ಯಕ್ಷರಾಗಿ ಪಾವಗಡ ತಾಲೂಕಿನ ಆರ್.ಸಿ. ಅಂಜಿನಪ್ಪರನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದರು. ಪುರಸಭೆ ಸದಸ್ಯ ವಸಂತ್ ಕುಮಾರ್,ನೇರಳೇಕುಂಟೆ ಜಯರಾಮಪ್ಪ, ಪಾವಗಡ ಉಗ್ರಪ್ಪ, ಕಡಪಲಕೆರೆ ಹನುಮಂತರಾಯಪ್ಪ,ದಂಡೋರ ನಾಗೇಶ್ ಇದ್ದರು.
ಮಾಸಾಶನಕ್ಕೆ ಆಗ್ರಹ
ಪಾವಗಡ: ತಾಲೂಕು ಮಾದಿಗ ಹಕ್ಕುಗಳ ಹೋರಾಟ ಸಮಿತಿಯಿಂದ ತಮಟೆ ಕಲಾವಿದರಿಗೆ ಮಾಸಾಶನ ಮಂಜೂರಾತಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಗಸ್ಟ್ 11ರ ಬೆಳಿಗ್ಗೆ 11ಗಂಟೆಗೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಮಿತಿ ರಾಜ್ಯಾಧ್ಯಕ್ಷ ಬಿ.ಟಿ. ರಾಮಸುಬ್ಬಯ್ಯ ತಿಳಿಸಿದ್ದಾರೆ. ಈ ಕುರಿತು ಮಾತಾನಾಡಿ, ಜಗತ್ತಿನ ಎಲ್ಲಾ ಸಂಗೀತ ವಾದ್ಯಗಳಲ್ಲಿ ಮೊದಲನೆ ವಾದ್ಯ ತಮಟೆ, ಹಾಗಾಗಿ ಮಾಸಾಶನ ಸೌಲಭ್ಯ ಸೇರಿದಂತೆ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ತಮಟೆ ಮಾದಿಗರನ್ನು ಸರ್ಕಾರ ಕಡೆಗಣಿಸಿದ್ದು ತಮಟೆ ವಾದ್ಯದ ಮಾದಿಗ ಸಮುದಾಯಕ್ಕೆ ಪ್ರತಿ ತಿಂಗಳು 2,500 ಮಾಸಾಶನ ಸೌಲಭ್ಯ ಮತ್ತು ಈ ಸಮುದಾಯಕ್ಕೆ ವಿಶೇಷ ಅದ್ಯತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷ ಬಂಗಾರು ವೆಂಕಟೇಶಲು, ಕಾರ್ಯದರ್ಶಿ ವೆಂಕಟೇಶ್ ಕೆ. ನರಸಿಂಹಮೂರ್ತಿ, ಟಿ. ಹನುಮಂತರಾಯ ಇದ್ದರು.
ಬಸ್ ವ್ಯವಸ್ಥೆಗಾಗಿ ಪ್ರತಿಭಟನೆ
ಕುಣಿಗಲ್: ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಇಪ್ಪಾಡಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್ಗಳನ್ನು ಇಪ್ಪಾಡಿ ಗ್ರಾಮದ ಬಳಿ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಸುತ್ತಮುತ್ತ ಗ್ರಾಮದಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಶಾಲಾ, ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಸಕಾಲದಲ್ಲಿ ಬಸ್ ಸಂಚಾರ ವ್ಯವಸ್ಥೆ ಇಲ್ಲದ್ದರಿಂದ ಬೇಸತ್ತು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಹಲವು ಬಾರಿ ಘಟಕ ವ್ಯವಸ್ಥಾಪಕರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಹಿರಿಯರಾದ ಸಿದ್ದಪ್ಪ ಹಾಗೂ ರಮೇಶ್ ಅವರನ್ನು ಘಟಕ ವ್ಯವಸ್ಥಾಪಕ ರವಿಂದ್ರನಾಥ್ ದೂರವಾಣಿ ಮೂಲಕ ಸಂಕಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಿ ಸೂಕ್ತ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಹಿರಿಯ ನಾಗರಿಕರ ಕ್ರೀಡಾಕೂಟ
ಚಿಕ್ಕನಾಯಕನಹಳ್ಳಿ: ಸ್ವಾತಂತ್ರೋತ್ಸವದ ಅಂಗವಾಗಿ ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ಹಿರಿಯ ನಾಗರಿಕರಿಗಾಗಿ ಕ್ರೀಡಾ ಕೂಟ ಏರ್ಪಡಿಸಲಾಗಿದ ಎಂದು ನಾಗರಿಕ ೊಕ್ಕೂಟದ ಸಂಚಾಲಕ ಸಿ.ಎನ್. ಮಾಧವರಾವ್ ತಿಳಿಸಿದ್ದಾರೆ. ಹೇಳಿಕೆ ನೀಡಿ, ಆ.3ರ ಬೆಳಿಗ್ಗೆ 6.30ಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದೆ. 50ಮೀ ಓಟ, ವೇಗದ ನಡಿಗೆ, ತಟ್ಟೆಎಸೆತ, ಬಕೆಟಿಗೆ ರಿಂಗ್ ಹಾಕುವುದು, ಮಡಿಕೆ ಒಡೆಯುವುದು ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಿ.ಎನ್. ಪ್ರದೀಪ್ ಕುಮಾರ್ ನೆರವೇರಿಸಲಿದ್ದಾರೆ. ಡಾ. ಪ್ರಶಾಂತ್ ಕುಮಾರಶೆಟ್ಟಿ ಅಧ್ಯಕ್ಷತೆ ವಹಿಸುವರು. ಡಾ.ಸಿ.ಎಂ. ಸುರೇಶ್, ಡಾ.ಎಚ್.ಕೆ. ದಾಸ್, ಡಾ. ಭಾಸ್ಕರ ಹೆಗಡೆ, ಹಿರಿಯ ಸಾಹಿತಿ ಎಂ.ವಿ. ನಾಗರಾಜರಾವ್ ಭಾಗವಹಿಸುವರು.
ಪಿಂಚಣಿ ಅದಾಲತ್
ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟೀಕೆರೆ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಡಕಚೇರಿ ಪ್ರಭಾರ ಉಪತಹಸೀಲ್ದಾರ್ ರಾಮಮೂರ್ತಿ ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿ, ಜು.30ರ ಬೆಳಿಗ್ಗೆ 10.00 ಗಂಟಗೆ ಶೆಟ್ಟೀಕೆರೆ ಹೋಬಳಿ ವ್ಯಾಪ್ತಿಗೆ ಸಂಬಂದಿಸಿದ ಸಾಮಾಜಿಕ ಭದ್ರತೆ ಯೋಜನೆಯ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ತಿಪಟೂರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಅರ್ಹ ಫಲಾನುಭವಿಗಳು ದಾಖಲೆಗಳ ಸಮೇತ ಆಗಮಿಸಲು ಕೋರಿದೆ.
ಹಿಂದಿ ಭಾಷಾ ಶಿಕ್ಷಕರ ಸಂಘಕ್ಕೆ ಆಯ್ಕೆ
ಚಿಕ್ಕನಾಯಕನಹಳ್ಳಿ: ತಾಲೂಕು ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಅಸ್ಥಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಬೋರನಕಣಿವೆಯ ಮಂಜಮ್ಮ, ಅಧ್ಯಕ್ಷರಾಗಿ ಸಾಸಲು ಸರ್ಕಾರಿ ಪ್ರೌಢಶಾಲೆಯ ಹಿಂದಿಶಿಕ್ಷಕ ಸಿ.ಎ. ಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಬರಕನಾಳ್ ವಿಶ್ವಭಾರತಿ ಶಾಲೆಯ ಸುಧಾಕರ್, ಕಾರ್ಯದರ್ಶಿಯಾಗಿ ಚಿ.ನಾ.ಹಳ್ಳಿಯ ಡಿವಿಪಿ ಬಾಲಕರ ಶಾಲೆಯ ಗುರುಸ್ವಾಮಿ ನಾಯ್ಡು, ಸಹಕಾರ್ಯದರ್ಶಿಯಾಗಿ ದಬ್ಬಗುಂಟೆ ಗಿರೀಶ್, ಖಜಾಂಚಿಯಾಗಿ ಅಣೇಕಟ್ಟೆಯ ಆರ್.ಎಂ. ರಾಜ್ಕುಮಾರ್, ಸಂಚಾಲಕರಾಗಿ ಜೆ.ಸಿ. ಪುರದ ಅನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಗೋಪಾಲಯ್ಯ, ಕಾಂತರಾಜು, ಬಿ.ಆರ್. ಮಂಜುನಾಥ್, ಆರ್. ರಂಗನಾಯ್ಕ, ಅರುಣ್ಕುಮಾರ್, ಎಂ. ರಾಜಶೇಖರಪ್ಪ, ರೇಣುಕಾರಾಧ್ಯ, ರಮೇಶ್ ನಾಯ್ಕ್, ವಹಿದಾಭಾನು, ಸೌಭಾಗ್ಯಮ್ಮ, ಮಂಜುಳ, ಪುಟ್ಟಮ್ಮ ಕಮಲ ಆಯ್ಕೆಯಾಗಿದ್ದಾರೆ.
ಖಾತ್ರಿ ಕೂಲಿಗಾಗಿ ಒತ್ತಾಯ
ಚಿಕ್ಕನಾಯಕನಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಮಾಡಿದ ಬಡಕೂಲಿ ಕಾರ್ಮಿಕರಿಗೆ ಸರ್ಕಾರ ಕೂಲಿ ಕೊಡದೆ ಅನ್ಯಾಯವೆಸಗಿದೆ ಎಂದು ಶೆಟ್ಟೀಕೆರೆ ಸುತ್ತಮುತ್ತಲಿನ ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ. ಕಾಮಗಾರಿ ಮುಗಿಸಿ 6 ತಿಂಗಳಾದರು ಕೂಲಿ ಹಣ ಬಂದಿಲ್ಲ. ಸಲ್ಲದ ಕಾರಣ ಹೇಳಿ ದಿನ ತಳ್ಳುತ್ತಿರುವ ಸರ್ಕಾರಕ್ಕೆ ನಮ್ಮ ಗೋಳು ತಿಳಿಯುವುದಾದರೂ ಹೇಗೆ. ಈ ವಿಚಾರವಾಗಿ ಈಗಾಗಲೇ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯಜನವಿಲ್ಲವಾಗಿದೆ. ಆಗಸ್ಟ್ 15ರೊಳಗೆ ಅನುದಾನ ಬಿಡುಗಡೆಯಾಗದಿದ್ದರೆ 15ನ್ನು ಕರಾಳ ದಿನವನ್ನಾಗಿ ಆಚರಿಸಬೇಕಾಗುತ್ತದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಕುಪ್ಪೂರು ತಾಪಂ ಸದಸ್ಯೆ ಚಿಕ್ಕಮ್ಮರನ್ನು ಸ್ಥಾಯಿ ಸಮಿತಿ ಅಧ್ಯಕ್ಷೆರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಹಿಂದೆ ಸ್ಥಾಯಿಸಮಿತಿ ಅಧ್ಯಕ್ಷರಾಗಿದ್ದ ಆರ್. ವಸಂತ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಚಿಕ್ಕಮ್ಮರನ್ನು ಅಧ್ಯಕ್ಷ ಸ್ಥಾನಕ್ಕಾಗಿ ವಸಂತ್ ಸೂಚಿಸಿ ಬಿಜೆಪಿಯ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಇದಕ್ಕೆ ಜೆಡಿಎಸ್ ಸದಸ್ಯರು ಎಲ್ಲಾ ನೀವೇ ತೀರ್ಮಾನ ಮಾಡಿ ನೆಪಮಾತ್ರಕ್ಕೆ ಕೇಳುತ್ತಿದ್ದೀರಿ ಎಂದು ಟೀಕಿಸಿದರು. ಇದನ್ನು ಅಲ್ಲಗಳೆದ ವಸಂತ್ ಎಲ್ಲರ ಅಭಿಪ್ರಾಯ ಪಡೆದೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು. ನಂತರ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಅಧ್ಯಕ್ಷೆ ಲತಾ ಕೇಶವಮೂರ್ತಿ, ಕೆಂಕೆರೆ ನವೀನ್, ಎಚ್.ಆರ್. ಶಶಿಧರ್, ಎ.ಬಿ. ರಮೇಶ್ ಕುಮಾರ್ ಇದ್ದರು.