ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಿಂದೂ ಮನೆಯಲ್ಲಿ ಅಲ್ಲಾರಾಧನೆ

Srinivasa Murthy VN
Updated On : 30 Jul 2014, 1:14 am

ತುಮಕೂರು: ನಗರದ ಅರಳೇಪೇಟೆ ಮುಖ್ಯರಸ್ತೆಯ ಶ್ರೀ ರೇಣುಕಾ ಬಸವೇಶ್ವರ ದೇವಾಲಯದ ಮುಂಭಾಗದ ಹಿಂದೂಗಳ ಮನೆಯೊಂದರಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಅನ್ನು ಸಂಭ್ರಮದಿಂದ ಆಚರಿಸಲಾಯಿತು. ಸುಮಾರು 35 ವರ್ಷಗಳಿಂದ ಇಲ್ಲಿನ ಗಾಯತ್ರಿ ರಾಮರಾವ್ ಮನೆಯಲ್ಲಿ ರಂಜಾನ್ ದಿನ ಮುಸಲ್ಮಾನರ ಪವಿತ್ರ ದೇವರಾದ ಅಮ್ಮಾಜಾನ್, ಬಾಬಾಜಾನ್ ಅವರ ಬೆಳ್ಳಿಯ ವಿಗ್ರಹಕ್ಕೆ ಮುಸಲ್ಮಾನರ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಲಾಯಿತು. ಬಡಾವಣೆಯ ಸುತ್ತಮುತ್ತಲ ಹಿಂದೂ ಹಾಗೂ ಮುಸಲ್ಮಾನ ಬಂಧುಗಳು ಎಂದಿನಂತೆ ಈ ಬಾರಿಯೂ ಆಗಮಿಸಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಮನದಲ್ಲಿನ ಗೊಂದಲ, ಸಮಸ್ಯೆಗಳಿಗೆ ಪರಿಹಾರ ಬೇಡಿಕೊಂಡರು. ರಂಜಾನ್ ಹಬ್ಬದಂದು ಬಡವರಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುವುದು ಮುಸಲ್ಮಾನರ ಸಂಪ್ರದಾಯ ಹಾಗೂ ಆಚರಣೆಯೂ ಹೌದು. ಅಂತೆಯೇ ಈ ಕುಟುಂಬದವರೂ ನಗರದ ಟೌನ್‌ಹಾಲ್ ವೃತ್ತದಲ್ಲಿರುವ ಜೋಡಿಮಜಾರ್, ಜಾಲ್‌ಕ ಮಕಾನ್, ಅಲ್ಲಾಲಸೈನ್, ಶಿವಕುಮಾರ ಸ್ವಾಮೀಜಿ ವೃತ್ತದ ದರ್ಗಾಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಭಿಕ್ಷುಕರಿಗೆ, ನಿರ್ಗತಿಕರಿಗೆ ಬಟ್ಟೆ, ಹಣ ದಾನ ಮಾಡುವುದನ್ನು ಆಚರಿಸಿಕೊಂಡು ಬಂದಿದ್ದಾರೆ.

ತಿಪಟೂರಿನಲ್ಲಿ ಸಾಮೂಹಿಕ ನಮಾಜ್
ತಿಪಟೂರು: ತಿಪಟೂರಿನಲ್ಲಿ ಮಂಗಳವಾರ ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಕೆ. ಷಡಕ್ಷರಿ, ಬಿಜೆಪಿ ಮುಖಂಡ ಲೋಕೇಶ್ವರ, ತಹಸೀಲ್ದಾರ್ ಮಂಜುನಾಥ್, ಎಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭ ಕೋರಿದರು.

ಹುಳಿಯಾರು: ಸಂಭ್ರಮದ ರಂಜಾನ್
ಹುಳಿಯಾರು: ಪಟ್ಟಣ ಸೇರಿದಂತೆ ಬಳ್ಳೆಕಟ್ಟೆ, ಕಂಪನಹಳ್ಳಿ, ಯಾಕೂಬ್ ಸಾಬ್ ಪಾಳ್ಯ ಮುಂತಾದೆಡೆ ಮುಸ್ಲಿಮರು ರಂಜಾನ್ ಹಬ್ಬವನ್ನು ಮಂಗಳವಾರ ಆಚರಿಸಿದರು. ಪಟ್ಟಣದಲ್ಲಿ ಕುತಬ್-ಎ-ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  ಮುಂಜಾನೆಯೇ ಜಾಮಿಯಾ, ನೂರಾನಿ, ಮದೀನಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಬೆಳಿಗ್ಗೆ ಹತ್ತರ ವೇಳೆಗೆ ಈದ್ಗಾಮೈದಾನದಲ್ಲಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥಿಸಿದರು. ಧರ್ಮಗುರುಗಳಾದ ಮೌಲಾನಾ ಹಜರತ್ ಆಸೀಫ್‌ರ ಧಾರ್ಮಿಕ ಬೋಧನೆಯಲ್ಲಿ ಹಬ್ಬದ ಸಂದೇಶ ನೀಡಿದರು. ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು, ಮಹಿಳೆಯರು ಮೆಹಂದಿ ಹಾಕಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ವಿಶೇಷ ಹಬ್ಬದೂಟ ಸವಿಯುವ ಮೂಲಕ ಕಳೆದ ಇಪ್ಪತ್ತೆಂಟು ದಿನಗಳ ಉಪವಾಸ ವ್ರತ ಕೊನೆಗೊಳಿಸಿದರು.

ಶುಭಾಶಯ ವಿನಿಮಯ
ಮಧುಗಿರಿ: ರಂಜಾನ್ ಹಬ್ಬದ ಕೊನೆ  ದಿನವಾದ ಮಂಗಳವಾರ ಮಧುಗಿರಿಯಲ್ಲಿ ಮುಸ್ಲಿಮರು ಪಟ್ಟಣದ ಶಿರಾ ಗೆಟ್‌ನಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಕೆ.ಎನ್. ರಾಜಣ್ಣ, ಉಪವಿಭಾಗಾಧಿಕಾರಿ ಅನಿತಾಲಕ್ಷ್ಮೀ, ತಹಸೀಲ್ದಾರ್ ಕೆ. ರಮೇಶ್, ಡಿವೈಎಸ್ಪಿ ಗುರುಸ್ವಾಮಿ, ಸಿಪಿಐ ಗಿರೀಶ್ ಗಾಯ್ ಕೆಪಿಎಸೈ ಅಂಬರೀಶ್ ಸೇರಿದಂತೆ ಅನೇಕ ಗಣ್ಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲೀಂ ಬಂಧುಗಳಿಗೆ ಶುಭಾಶಯ ಕೋರಿದರು.

ಈದ್ಗಾ ಮೈದಾನದಲ್ಲಿ ನಮಾಜ್
ತುಮಕೂರು: ತುಮಕೂರಿನಲ್ಲಿ ಮಂಗಳವಾರ ಮುಸ್ಲಿಮರು ಸಂಭ್ರಮದ ರಂಜಾನ್ ಹಬ್ಬ ಆಚರಿಸಿಕೊಂಡರು. ತುಮಕೂರಿನ ಕುಣಿಗಲ್ ರಸ್ತೆಯ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಸೇರಿದಂತೆ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಷಫಿ ಅಹಮದ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಎಸ್ಪಿ ರಮಣಗುಪ್ತ, ಕೆಂಚಮಾರಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಕುಣಿಗಲ್‌ನಲ್ಲಿ ಸಂಭ್ರಮ
ಕುಣಿಗಲ್: ರಂಜಾನ್ ಅಂಗವಾಗಿ ಪಟ್ಟಣದ ಮದ್ದೂರು ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ತಾಪಂ ಪ್ರಬಾರ ಅಧ್ಯಕ್ಷ ಜಗದೀಶ್, ಪುರಸಭೆ ಅಧ್ಯಕ್ಷ ಕೆ.ಎಲ್.ಹರೀಶ್, ತಹಸೀಲ್ದಾರ್ ಶಂಭುಲಿಂಗಯ್ಯ, ಡಿವೈಎಸ್ಪಿ ಗಣೇಶ್ ಶುಭ ಕೋರಿದರು. ಪುರಸಭೆ ಸದಸ್ಯ ಅನ್ಸರ್ ಪಾಷ, ದಸ್ತಗೀರ ಶೂರಾ ಸಮಿತಿ ಮಾಜಿ ಅಧ್ಯಕ್ಷ ರೆಹಮಾನ್ ಷರೀಫ್, ಪ್ರಮುಖರಾದ ನಾಸೀರ್ ಪಾಷಾ, ಸನಾವುಲ್ಲಾ, ತನ್ವಿರ್ ಅಹಮದ್, ಏಜಾಸ್ ಪಾಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮುಸಲ್ಮಾನರ ಪವಿತ್ರ ಹಬ್ಬ
ಕೊರಟಗೆರೆ: ಒಂದು ತಿಂಗಳು ಉಪಾವಾಸ ಆಚರಣೆ ಮಾಡಿ ನಂತರ ಆಚರಿಸುವ ರಂಜಾನ್ ಮುಸಲ್ಮಾನರ ಪವಿತ್ರ ಹಬ್ಬವಾಗಿದೆ ಎಂದು ಶಾಸಕ ಪಿ.ಆರ್. ಸುಧಾಕರ್ ಲಾಲ್ ತಿಳಿಸಿದರು. ಅವರು ಪಟ್ಟಣದ ಈದ್ಗಾ ಮೈದಾದಲ್ಲಿ ಮುಸ್ಲಿಂ ಮುಖಂಡರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಮ್ಮ ದೇಶ ವಿವಿಧ ಸಂಸ್ಕೃತಿಯಲ್ಲಿ ಏಕತೆ ಕಾಣುವ ದೇಶವಾಗಿದೆ ಎಂದರು. ಮುಸ್ಲಿಂ ಅಧ್ಯಕ್ಷ ಗೌಸ್‌ಪೀರ್, ಮುಖಂಡರಾದ ಲಕ್ಷ್ಮಿನಾರಾಯಣ್, ನರಸಿಂಹರಾಜು, ಕಲೀಂ ಹುಲ್ಲಾ, ಸೈಪುಲ್ಲಾ, ಇಸ್ಮಾಯಿಲ್, ಸಾಧಿಕ್ ಮತ್ತಿತರ ಮುಸ್ಲಿಂ ಮುಖಂಡರು ಇದ್ದರು.

ಪಾವಗಡದಲ್ಲಿ ಪ್ರಾರ್ಥನೆ
ಪಾವಗಡ: ಸಾವಿರಾರು ಮುಸ್ಲಿಂ ಬಾಂಧವರು ಮಂಗಳವಾರ ಪಟ್ಟಣದಲ್ಲಿ ರಂಜಾನ್ ಹಬ್ಬ ಆಚರಿಸಿದರು. ಬೆಳಗ್ಗೆ 11.30ಕ್ಕೆ ಪಟ್ಟಣದ ಶಿರಾ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಈದ್ಗಾ ಮೈದಾನಕ್ಕೆ ತೆರಳಿದ ಶಾಸಕ ಕೆ.ಎಂ.ತಿಮ್ಮರಾಯಪ್ಪ, ತಹಸೀಲ್ದಾರ್ ತಿಮ್ಮಪ್ಪ ಬೋವಿ, ಸಿಪಿಐ ಭಾನುಪ್ರಕಾಶ್, ಕ್ರೈಂ ಬ್ರಾಂಚಿನ ಸಿಪಿಐ ಮುನಿರಾಜ್ ಹಾಗೂ ಪಾವಗಡ ಠಾಣಾ ಪಿಎಸ್‌ಐ ಮಂಜುನಾಥ್ ಪಾಂಡೆ ಇತರರು ಮುತ್ತುವಲ್ಲಿಗಳಿಗೆ ರಂಜಾನ್ ಹಬ್ಬದ ಶುಭಾಶ ಕೋರಿದರು. ಆಗಮಿಸಿದ ಜನಪ್ರತಿನಿಧಿಗಳು, ಮುಖಂಡರು ಮತ್ತು ಅಧಿಕಾರಿಗಳಿಗೆ ಮುಖಂಡ ರಿಜವಾನ್‌ವುಲ್ಲಾ ಹಾಗೂ ಇತರರು ಸಿಹಿ ಹಂಚಿಕೆ ಮಾಡಿದರು. ಜಾಮೀಯಾ ಮಸೀದಿ ಮುತ್ತುವಲ್ಲಿ ಫಜುಲುಲ್ಲಾ ಸಾಬ್, ಅನ್ವರ್‌ಸಾಬ್ ಸಮ್ಮಿವುಲ್ಲ, ಜಾಹುರ್ ಆಹಮ್ಮದ್, ನವಾಜ್‌ಸಾಬ್, ಸಯ್ಯಾದ್ ರಖೀಬ್, ಇಮ್ರಾನ್, ರಫೀಕ್ ಸಾಧಿಕ್, ಅಲ್ತಪ್ ಪಾಷ, ಎಂ.ಡಿ.ಅಜಂಸಾಬ್, ಹುಸೇನ್‌ಸಾಬ್ ಸೇರಿದಂತೆ ಆನೇಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement