10 ಸಾವಿರ ಕೆರೆಗಳಿಗೆ ನದಿ ನೀರು
ಕನ್ನಡಪ್ರಭ ವಾರ್ತೆ, ತುಮಕೂರು, ಜೂ.1
ಮಧ್ಯ ಕರ್ನಾಟಕದ 10 ಸಾವಿರ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗಳ ಅನುಷ್ಠಾನದ ಬಗ್ಗೆ, ಯೋಜನೆ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು ಪ್ರವಾಸ ಕೈಗೊಂಡು ಜನಾಂದೋಲನ ರೂಪಿಸಲಾಗಿದ್ದಾರೆ.
ಜಿ.ಎಸ್. ಪರಮಶಿವಯ್ಯನವರು ರೂಪಿಸಿದ್ದ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ನೀರಿನ ಯೋಜನೆಯಲ್ಲಿ ಒಂದು ಭಾಗವಾದ ಎತ್ತಿನ ಹೊಳೆ ಯೋಜನೆಯಲ್ಲಿರುವ ತಪ್ಪುಗಳ ಬಗ್ಗೆಯೂ ಜನಜಾಗೃತಿ ಮೂಡಿಸಲಾಗುವುದು. ಈಗಾಗಲೆ ಯೋಜನೆಯ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ರಾಜ್ಯ ಸರ್ಕಾರ ಜೂನ್ 20 ರೊಳಗೆ ಸಭೆ ಕರೆದು ಯೋಜನೆಯ ತಪ್ಪುಗಳನ್ನು ತಿದ್ದಿಕೊಳ್ಳುವ ಸಾಧಕ-ಭಾದಕಗಳ ಬಗ್ಗೆ ಸಮಾಲೋಚನೆ ನಡೆಸಲು ಗಡುವು ನೀಡಲಾಗಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದೆ ಇದ್ದಲ್ಲಿ ಮುಂಬರುವ ವಿಧಾನ ಸಭೆ ಅದಿವೇಶನದ ಅವಧಿಯಲ್ಲಿ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಾಗುವುದು.
ಯೋಜನೆಯ ವ್ಯಾಪ್ತಿಗೆ ಸಂಬಂಧಿಸಿದ ಚುನಾಯಿತ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳನ್ನು ಭೇಟಿಯಾಗಿ ಯೋಜನೆಯ ತಪ್ಪುಗಳ ಬಗ್ಗೆ ಮನವರಿಕೆ ಮಾಡುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ವ್ಯಾಪ್ತಿಯಲ್ಲಿರುವ ಎಲ್ಲಾ ಜನಾಂಗದ ಶ್ರೀಗಳ ಸಭೆಯನ್ನು ಸಿದ್ಧಗಂಗಾ ಶ್ರೀ ಗಳ ಅಧ್ಯಕ್ಷತೆಯಲ್ಲಿ ಕರೆದು ಸಮಾಲೋಚನೆ ನಡೆಸಲು ಸಹ- ಶ್ರೀ ಗಳವರಲ್ಲಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಪ್ರವೃತ್ತ: ಡಾ. ಬಿ.ಆರ್. ಶ್ರೀನಿವಾಸ ಮೂರ್ತಿರವರ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ಪರಿಸ್ಕೃತ ಡಿ.ಪಿ.ಆರ್ ಅನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಬದಲಾವಣೆಗೆ ತಂತ್ರಜ್ಞರ ತಂಡ ಕಾರ್ಯ ಪ್ರವೃತವಾಗಿದೆ. ನಂತರ ಒಂದು ವರದಿ ಸಿದ್ಧಪಡಿಸಿ ರಾಜ್ಯದ ಕಾನೂನು ತಜ್ಞರು, ತಂತ್ರಜ್ಞರು, ಪರಿಸರವಾದಿಗಳು, ವಿಜ್ಞಾನಿಗಳು, ಆರ್ಥಿಕ ತಜ್ಞರು ಹೀಗೆ ಎಲ್ಲಾ ವರ್ಗದ ವಿಶೇಷ ಪರಿಣಿತರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಬಸವರಾಜು ತಿಳಿಸಿದರು.
ರಾಜ್ಯದ ಎಲ್ಲಾ ಸಿವಿಲ್ ಎಂಜಿನಿಯರಿಂಗ್ ಕಾಲೇಜುಗಳಿಗೆ ಮತ್ತು ಎಲ್ಲಾ ಇಲಾಖೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗಕ್ಕೆ ವರದಿ ಸಲ್ಲಿಸಿ ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು. 9 ಜಿಲ್ಲೆಗಳಲ್ಲಿನ ಪ್ರವಾಸದ ವೇಳೆ ಆಯಾ ಜಿಲ್ಲೆಯ ಹೋರಾಟ ಸಮಿತಿಗಳೊಂದಿಗೆ ವಿಚಾರ ವಿನಿಮಯ ಮಾಡಲಾಗುವುದು.
ಪ್ರಧಾನಿ ಬಳಿ ನಿಯೋಗ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಬಳಿ ನಿಯೋಗ ಹೋಗಿ ಮಧ್ಯ ಕರ್ನಾಟಕಕ್ಕೆ ವರದಾನವಾಗುವ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಯೋಜನೆಯನ್ನು ಕೇಂದ್ರ ಸರ್ಕಾರ ನದಿ ಜೋಡಣೆಯ ಪೈಲೆಟ್ ಯೋಜನೆಯಾಗಿ ಕೈಗೊಳ್ಳಲು ಮನವಿ ಮಾಡಲಾಗುವುದು. ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ನ ಕಾಲುವೆಯನ್ನೆ ಎತ್ತಿನಹೊಳೆ ಯೋಜನೆಗೆ ಅಳವಡಿಸಿಕೊಂಡಿದ್ದಾರೆ.
ಆದರೆ ಆರಂಭದಲ್ಲಿನ ಸುಮಾರು 150 ಕಿ.ಮೀ. ಕಾಲುವೆಯ ಮಟ್ಟ ವಿವಾದದಲ್ಲಿದೆ ಹಾಗೂ ಕಾಲುವೆಯ ಸಾಮರ್ಥ್ಯವನ್ನು ಪ್ರವಾಹ ಕಾಲುವೆಯಾಗಿ ಮೊದಲ ಹಂತದಲ್ಲಿ ಸುಮಾರು 128 ಟಿ.ಎಂ.ಸಿ. ನೀರಿಗೆ ನಿರ್ಮಿಸಬೇಕಿದೆ (ಜಗದೀಶ್ ಶೆಟ್ಟರ್ ಅವರ ನೇತೃತ್ವದ ಸಚಿವ ಸಂಪುಟದ ನಿರ್ಣಯದಂತೆ). ಎರಡನೇ ಹಂತದಲ್ಲಿ ಸುಮಾರು 300 ಟಿ.ಎಂ.ಸಿ. ನೀರಿನ ಸಾಮರ್ಥ್ಯಕ್ಕೆ ಕಾಲುವೆ ನಿರ್ಮಿಸಬೇಕಿದೆ. ಒಂದೇ ಹಂತದಲ್ಲಿ ಈ ಪ್ರವಾಹ ಕಾಲುವೆಗೆ ಅಗತ್ಯವಿರುವಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಮೊದಲನೇ ಹಂತದಲ್ಲಿ ಎತ್ತಿನ ಹೊಳೆ ಯೋಜನೆಯ 24 ಟಿಎಂಸಿ ನೀರು, ವೇದಾನಂದ ಮೂರ್ತಿ ವರದಿ ಪ್ರಕಾರ 50 ಟಿ.ಎಂ.ಸಿ ಮತ್ತು ಲಿಂಗನಮಕ್ಕಿ ಜಲಾಶಯದಿಂದ ಇದೇ ವಾಟರ್ ಗ್ರಿಡ್ ಕೆನಾಲ್ಗೆ ನೀರು ಹರಿಸುವ ಡಾ. ಸುಧೀರ್ ಸಜ್ಜನ್ ಅವರ ವರದಿ ಪ್ರಕಾರ 60 ಟಿ.ಎಂ.ಸಿ. ನೀರು ಮತ್ತು ಹೇಮಾವತಿ ಪ್ರವಾಹ ಯೋಜನೆಯ 15 ಟಿ.ಎಂ.ಸಿ ನೀರು ಸೇರಿದಂತೆ ಒಟ್ಟು 149 ಟಿ.ಎಂ.ಸಿ. ನೀರು ದೊರೆಯಲಿದೆ. ಈ ಎಲ್ಲಾ ಪ್ರಸ್ಥಾವನೆಗಳು ಪರಮಶಿವಯ್ಯ ನವರ ವರದಿಯ ಅಂಶಗಳಾಗಿವೆ. ಸರ್ಕಾರ ಈ ಎಲ್ಲಾ ಪ್ರಸ್ಥಾವನೆಗಳ ಬಗ್ಗೆ ಜೂನ್ 20 ರೊಳಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲು ಮನವಿ ಮಾಡಲಾಗಿದೆ.