ಅಕ್ರಮ ಮರಳು ಎತ್ತುವಳಿಯಿಂದ ಸಮಸ್ಯೆ
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ನಿಡಸಾಲೆಕೆರೆಯಲ್ಲಿ ವ್ಯಾಪಕವಾಗಿ ಅಕ್ರಮ ಮರಳನ್ನು ಎತ್ತುವಳಿ ಮಾಡುತ್ತಿರುವ ಪರಿಣಾಮ ಹಲವು ಸಮಸ್ಯೆಗಳು ಎದುರಾಗಿದ್ದು, ಗ್ರಾಮಸ್ಥರು ಅಕ್ರಮ ಮರಳು ಎತ್ತುವಳಿ ಮತ್ತು ಸಾಗಾಟ ನಿಯಂತ್ರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರಾದ ಸತೀಶ, ರಾಜು, ಕೃಷ್ಣಪ್ಪ ಇತರರ ಆರೋಪ. ನಿಡಸಾಲೆ ಕೆರೆ ಸುಮಾರು ನಾಲ್ಕುನೂರು ಎಕರೆ ವಿಸ್ತೀರ್ಣಹೊಂದಿದ್ದು ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಕುಡಿಯುವ ಮತ್ತು ಕೃಷಿಗೆ ನೀರು ಪೂರೈಸುವ ತಾಣವಾಗಿದೆ.
ಕೆರೆ ಹಾಗೂ ಕೆರೆಗೆ ಅಕ್ಕಪಕ್ಕದ ಸಾವಿರಾರು ಎಕರೆ ಪ್ರದೇಶದ ಅರಣ್ಯಪ್ರದೇಶದಿಂದ ಮಳೆ ನೀರು ಹರಿದು ಬರುವ ದೊಡ್ಡತೊರೆಯಲ್ಲೂ ಅಕ್ರಮವಾಗಿ ಮರಳನ್ನು ಎತ್ತುವಳಿ ಮಾಡುತ್ತಿರುವ ಕಾರಣ, ಕೆರೆ ಮತ್ತು ಕೆರೆಯ ಅಕ್ಕಪಕ್ಕದಲ್ಲಿ ಕೃಷಿ ಮತ್ತು ಕುಡಿಯುವ ನೀರು ಪೂರೈಸಲು ಕೊರೆಸಲಾದ ಕೊಳವೆಬಾವಿಗಳಲ್ಲಿ ನೀರು ಕೆಳಕ್ಕೆ ಇಳಿದು, ಕೆಲವೆಡೆ ಕೊಳವೆ ಬಾವಿ ಬತ್ತಿವೆ. ಕೆರೆಯಲ್ಲಿ ಅಕ್ರಮ ಮರಳು ಎತ್ತುವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಪೊಲೀಸರು ಮತ್ತು ಕಂದಾಯ ಇಲಾಖೆಗೆ ಮನವಿ ನೀಡಿದಾಗ, ಸಿಬ್ಬಂದಿಗಳು ನೆಪಮಾತ್ರಕ್ಕೆ ತಾಕೀತು ಮಾಡಿಹೋಗುತ್ತಿರುವ ಕಾರಣ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತು ಕೆರೆಯಲ್ಲಿ ಮತ್ತು ಕೆರೆಗೆ ನೀರು ಪೂರೈಸುವ ದೊಡ್ಡತೊರೆ ಪ್ರದೇಶದಲ್ಲಿ ಮರಳು ಎತ್ತುವಳಿ ಮತ್ತು ಸಾಗಾಟ ನಿಯಂತ್ರಿಸಬೇಕಿದೆ.
ಮೂತ್ರ ವಿಸರ್ಜನೆಯಿಂದ ದುರ್ನಾತ
ಕುಣಿಗಲ್ ಪುರಸಭೆ ಬಸ್ ನಿಲ್ದಾಣದಲ್ಲಿನ ತುಮಕೂರು ಕಡೆಗೆ ತೆರಳುವ ಬಸ್ಸುಗಳ ತಂಗುದಾಣದ ಸಮೀಪದಲ್ಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಕಾರಣ ದುರ್ನಾತ ಬೀರುತ್ತಿದೆ. ಬಸ್ಸಿಗೆ ಬರುವ ಪ್ರಯಾಣಿಕರು ಸೇರಿದಂತೆ ಈ ಪ್ರದೇಶದಲ್ಲಿನ ವ್ಯಾಪಾರ ಮಾಡುವ ಫುಟ್ಪಾತ್ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿದೆ. ಈ ಪ್ರದೇಶದಲ್ಲೆ ದೊಡ್ಡಚರಂಡಿ ಇದ್ದು, ಸದರಿ ಚರಂಡಿಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಚರಂಡಿ ಮೇಲೆ ಪುಟ್ಟ ಅಂಗಡಿ ನಡೆಸುವ ಉದ್ದೇಶದಿಂದ ಚರಂಡಿ ಮುಚ್ಚಿದ ಪರಿಣಾಮ, ಈ ಪ್ರದೇಶವು ನಿರ್ಲಕ್ಷ್ಯಕ್ಕೊಳಗಾಗಿ ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಬಳಸುತ್ತಾ ಇಡೀ ಪ್ರದೇಶವೇ ದುರ್ನಾತ ಬೀರುವಂತಾಗಿರುವುದರ ಜೊತೆಯಲ್ಲಿ ಸಮೀಪದಲ್ಲೆ ಆಂಜನೇಯ ಸ್ವಾಮಿ ದೇವಾಲಯವಿದ್ದು, ದೇವಾಲಯ ಪಾವಿತ್ರತೆಗೂ ಧಕ್ಕೆ ಬರುವಂತಾಗಿದೆ.ಕೊಳಚೆ ನೀರು ಹರಿಯಲು ಇರುವ ಚರಂಡಿ ಮುಚ್ಚಿದ ಕಾರಣ ನೀರು ಬಸ್ ನಿಲ್ದಾಣದ ಪ್ರದೇಶದಲ್ಲೆ ಹರಿಯುವ ಕಾರಣ ಬಸ್ಸಿಗೆ ತೆರಳುವವರು, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಇದರ ಮೇಲೆ ಸಂಚರಿಸುವ ಅನಿವಾರ್ಯತೆ ಇದೆ. ಈ ಬಗ್ಗೆ ಸ್ಥಳೀಯ ವ್ಯಾಪಾರಿಗಳು, ಸಾರ್ವಜನಿಕರು ಪುರಸಭೆಗೆ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ನೀಡಿ ದೂರಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಪ್ರಯಾಣಿಕರು, ಸಾರ್ವಜನಿಕರು, ವ್ಯಾಪಾರಿಗಳು ಪರದಾಡುವಂತಾಗಿದ್ದು ಇನ್ನಾದರೂ ಸಂಬಂಧಪಟ್ಟ ಸಿಬ್ಬಂದಿ ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡು ಬಸಸ್ನಿಲ್ದಾಣ ಪ್ರದೇಶ ಸ್ವಚ್ಛತೆ ಕಾಪಾಡುವಂತೆ ಆಗ್ಗಹಿಸಿದ್ದಾರೆ.