ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾನಪದ ಕಾವ್ಯ: ಅಕಾಡೆಮಿಕ್ ದೃಷ್ಟಿಕೋನ ಬದಲಾಗಲಿ

Srinivasa Murthy VN
Updated On : 1 Jun 2014, 11:54 am

ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ ಡಾ. ಶ್ರೀಪಾದಭಟ್ ಕರೆ
ಕ.ಪ್ರ.ವಾರ್ತೆ ತುಮಕೂರು ಜೂ 1
ಜಾನಪದ ಕಾವ್ಯಗಳ ಬಗೆಗಿನ ನಮ್ಮ ಅಕಾಡೆಮಿಕ್ ದೃಷ್ಟಿಕೋನ ಬದಲಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ ಡಾ. ಶ್ರೀಪಾದಭಟ್ ಹೇಳಿದರು.
ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ವಿದ್ಯಾವಾಹಿನಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 254 ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಷ್ಟ ಹಾಗೂ ದೇಸಿಗಳು ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಇವೆರಡರ ನಡುವೆಯೂ ಸಾಂಸ್ಕೃತಿಕ  ಅನನ್ಯತೆಯನ್ನು ಕಾಣಬಹುದು. ಸಮುದಾಯದ ಆಚರಣೆಗಳನ್ನು ಒಳದೃಷ್ಟಿಯಿಂದ ನೋಡಬೇಕು. ಜನಪದ ಕಾವ್ಯಗಳು ನಂಬಿಕೆಗಳ ಜೊತೆ ಉಳಿಯುತ್ತವೆ ಎಂದರು.
7 ಜನಪದ ಮಹಾಕಾವ್ಯ: ಕರ್ನಾಟಕದಲ್ಲಿ 7 ಜನಪದ ಮಹಾಕಾವ್ಯಗಳು ಇವೆ. ಅವುಗಳೇ ಸಿರಿ ಮಹಾಕಾವ್ಯ, ಮಂಟೇಸ್ವಾಮಿ ಕಾವ್ಯ, ಜುಂಜಪ್ಪನಕಾವ್ಯ, ಮಲೆಮಾದೇಶ್ವರ ಕಾವ್ಯ, ಮೈಲಾರಲಿಂಗನಕಾವ್ಯ, ರೇಣುಕಾದೇವಿ ಎಲ್ಲಮ್ಮನ ಕಾವ್ಯ ಹಾಗೂ ಹಾಲಮತಸ್ಥರ ಕಾವ್ಯ. ಈ ಮಹಾಕಾವ್ಯಗಳು ಅನೇಕ ರಾತ್ರಿಗಳ ಕಾಲ ಹಾಡುವಷ್ಟು ದೀರ್ಘವಾಗಿದ್ದು ಗಾತ್ರ ಹಾಗೂ ವಿಷಯದಲ್ಲಿ ಮಹತ್ವ ಹೊಂದಿವೆ. ಈ ಜನಪದ ಮಹಾಕಾವ್ಯಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈಭವದಿಂದ ಕೂಡಿವೆ. ಜನಪದ ಮಹಾಕಾವ್ಯಗಳು ಮೌಖಿಕ ಪರಂಪರೆಯಿಂದು ಮುಂದುವರೆಯುತ್ತಾ ಬಂದಿವೆ. ಈ ಕಾವ್ಯಗಳಲ್ಲಿ ಉಪಮೆಗಳು ಹಾಗೂ ಭಾಷಾ ರೂಪಕಗಳು ಬದಲಾಗುತ್ತವೆಯೇ ಹೊರತು ಕಾವ್ಯದ ಮೂಲ ಸ್ವರೂಪವು ಎಂದಿಗೂ ಬದಲಾಗುವುದಿಲ್ಲ ಎಂದರು.
ಅಗ್ರಮಾನ್ಯ ಸ್ಥಾನ: ಜುಂಜಪ್ಪನ ಕಾವ್ಯವು ಸಾಹಿತ್ಯಾತ್ಮಕ ಹಾಗೂ ಕಥನ ಮಹತ್ವವನ್ನು ಹೊಂದಿದ್ದು ಜನಪದ ಕಾವ್ಯಗಳಲ್ಲೇ ಅಗ್ರಮಾನ್ಯ ಸ್ಥಾನವುಳ್ಳದ್ದಾಗಿದೆ. ಜುಂಜಪ್ಪನ ಕಾವ್ಯವು ಗದ್ಯಪದ್ಯ ಮಿಶ್ರಣದ ವಿಶಿಷ್ಟ ರಚನೆಯಾಗಿದ್ದು ಆಡು ನುಡಿಯ ಪ್ರಕಾರದಲ್ಲಿದೆ. ಈ ಕಾವ್ಯದಲ್ಲಿ ಜುಂಜಪ್ಪ ಸಾಂಸ್ಕೃತಿಕ ನಾಯಕನಾಗಿ, ಪವಾಡ ಪುರುಷನಾಗಿ ಚಿತ್ರಿತನಾಗಿದ್ದಾನೆ. ಜುಂಜಪ್ಪನ ಕಾವ್ಯದಲ್ಲಿ ಆಚರಣೆ, ಮುಟ್ಟು, ಮಡಿ, ಮೈಲಿಗೆ ಹಾಗೂ ಸಂಪ್ರದಾಯಗಳು ಸಮೃದ್ಧವಾಗಿವೆ. ಗೊಲ್ಲ ಜನಾಂಗದಲ್ಲಿ ಈ ಆಚರಣೆಗಳನ್ನು ಹೆಚ್ಚಾಗಿ ಕಾಣಬಹುದು. ಹನ್ನೆರಡನೇ ಶತಮಾನದಲ್ಲಿದ್ದ ಶಿವಶರಣರ ವಚನಗಳಿಗಿಂತ ಮೊದಲೇ ಜನಪದ ಕಾವ್ಯಗಳಿದ್ದವು. ಇವು ವಚನಗಳಿಗೆ ಪ್ರೇರಣೆ ನೀಡಿವೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಮಾತನಾಡುತ್ತಾ ಜನಪದವು ಸಾಮೂಹಿಕ ಸೃಷ್ಟಿಯಾಗಿದ್ದು ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯುತ್ತಾ ಬಂದಿವೆ. ಜನಪದದ ಸೃಷ್ಟಿಕರ್ತರು ಹಾಗೂ ಮುಂದುವರೆಸುವವರು ಸಮಾಜದ ಬೇರೆ ಬೇರೆ ವೃತ್ತಿಯಲ್ಲಿರುವವರು. ಜನಪದ ಕಾವ್ಯವು ನೆಲಮೂಲ ಸಂಸ್ಕೃತಿಯಿಂದ ಹುಟ್ಟಿ ಬಂದು ಮುಂದುವರಿಯುತ್ತಿದೆ ಎಂದು ತಿಳಿಸಿದರು.
ಸಿರಿವರ ಶಿವರಾಮಯ್ಯ ಹಾಗೂ ಕೆ.ಟಿ. ಸುಶೀಲ ಪ್ರಾರ್ಥಿಸಿದರು.  ಸತ್ಸಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಡಾ. ಶ್ರೀಪಾದಭಟ್ಟರನ್ನು ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಸಭೆಗೆ ಪರಿಚಯಿಸಿದರು. ಹಿರಿಯಕವಿ ತು.ರಾ. ಸುಂದರರಾಜುರವರು ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement