ತಂಬಾಕು ಉತ್ಪನ್ನಗಳಿಗೆ ಗುಲಾಮರಾಗಲು ಬ್ರಿಟೀಷರೇ ಕಾರಣ
ತುಮಕೂರು: ಬ್ರಿಟೀಷರು ಭಾರತಕ್ಕೆ ವ್ಯಾಪಾರಕ್ಕಾಗಿ ಆಗಮಿಸಿದಾಗ ತಂಬಾಕು ಉತ್ಪನ್ನಗಳನ್ನು ಭಾರತೀಯರಿಗೆ ಪರಿಚಯಿಸಿ ಅವುಗಳ ಗುಲಾಮರನ್ನಾಗಿ ಮಾಡಿದ್ದಾರೆ ಎಂದು ಸಾಹಿತಿ ಜಿ.ಕೆ. ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಆಚರ್ಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವಕ, ಯುವತಿಯರು ತಂಬಾಕು ಉತ್ಪನ್ನಗಳನ್ನು ಒಂದು ಫ್ಯಾಷನ್ ಆಗಿ ಬಳಸುತ್ತಿದ್ದು ಅವರ ಅಮೂಲ್ಯ ಯೌವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೀಡಿ, ಸಿಗರೇಟು, ಗುಟ್ಕಾ ಇವುಗಳಲ್ಲಿ 4500 ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳಿದ್ದು ಈ ವಿಷಕಾರಿ ವಸ್ತುಗಳಿಂದ ಆರೋಗ್ಯದಲ್ಲಿ ಅನೇಕ ದುಷ್ಪರಿಣಾಮ ಆಗುತ್ತಿದೆ ಎಂದರು.
ಹೃದಯಾಘಾತ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಲೈಂಗಿಕ ಸಮಸ್ಯೆಗಳು, ಬೀಡಿ, ಸಿಗರೇಟು ಸೇವಿಸುವವರು ಬಿಟ್ಟ ಹೊಗೆಯಿಂದ ಇತರೆ ನಾಗರಿಕರಿಗೆ ಕ್ಯಾನ್ಸರ್ ಬರಬಹುದು. ಗರ್ಭಿಣಿಯರು ಈ ಹೊಗೆ ಸೇವಿಸಿದರೆ ಗರ್ಭಪಾತವಾಗುವುದು. ಅಂಗವಿಕಲ ಮಕ್ಕಳು ಹುಟ್ಟುವ ಸಂಭವ ಹೆಚ್ಚು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಚ್.ಜಿ. ಸದಾಶಿವಯ್ಯ ಇಂದಿನ ಯುವಪೀಳಿಗೆ ಸ್ನೇಹಿತರ ಒತ್ತಾಯದ ಮೇರೆಗೆ ಒಳಗಾಗದೆ ದಿಟ್ಟತನದಿಂದ ತಂಬಾಕು ಬಳಸುವುದಿಲ್ಲ ಎಂಬ ದೃಢವರ್ತನೆ ತೋರಬೇಕು ಎಂದರು.
ಕ್ಷಣಿಕ ಸುಖಕೋಸ್ಕರ ಇವುಗಳನ್ನು ಬಳಸು ಮುಂದಾಗಿ ನೀವು ಸಿಗರೇಟಿಗೆ ಬೆಂಕಿ ಹಚ್ಚಿದರೆ, ಸಿಗರೇಟು ನಿಮ್ಮ ಜೀವನಕ್ಕೆ ಬೆಂಕಿ ಹಚ್ಚುತ್ತದೆ ಎಂದರು.
ವಿ. ಮುತ್ತುರಾಯಪ್ಪ ಮಾತನಾಡಿ ತಂಬಾಕು ವ್ಯಸನದಿಂದ ಮುಕ್ತರಾಗಲು ನಿಕೋಟಿನ್ ರಿಪ್ಲೆಸ್ಮೆಂಟ್ ಥೆರಪಿ ಬಗ್ಗೆ ಮಾಹಿತಿ ನೀಡಿದರು. ಮಾಲ ಸದಾಶಿವಯ್ಯ ಸ್ವಾಗತಿಸಿದರು. ಶೈಲಜಾ ವಂದಿಸಿದರು.