ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಂತ್ರಿಮಹನೀಯರ ದಂಡೇ ತಿಪಟೂರಿಗೆ

Srinivasa Murthy VN
Updated On : 1 Jun 2014, 11:54 am

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗುರುವಂದನೆ
ತಿಪಟೂರು: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ  ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಗುರುವಂದನೆ ಮತ್ತು ನೂತನವಾಗಿ ಕಟ್ಟಿರುವ ಸಮುದಾಯ ಭವನದ ಭೋಜನಾಲಯ ಉದ್ಘಾಟನಾ ಸಮಾರಂಭವನ್ನು ಸಂಘದ ಅವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎನ್. ಚಿದಾನಂದ್ ತಿಳಿಸಿದ್ದಾರೆ.
ಬೆಳಗ್ಗೆ ಶ್ರೀಗಳು ತುರುವೇಕೆರೆ ಮಾರ್ಗವಾಗಿ 9ಗಂಟೆಗೆ ತಾಲೂಕಿನ ಆಲ್ಬೂರು ಗೇಟ್‌ಗೆ ಆಗಮಿಸಲಿದ್ದು ಅಲ್ಲಿಂದ  ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ನೂರಾರು ದ್ವಿಚಕ್ರ ಹಾಗೂ ಇತರೆ ವಾಹನಗಳ ರ್ಯಾಲಿಯೊಂದಿಗೆ ತಿಪಟೂರಿನವರೆಗೆ ಭವ್ಯ ಸ್ವಾಗತ ನೀಡಲಾಗುವುದು. ನಂತರ ಪಟ್ಟಣದ ಕೋಡಿಸರ್ಕಲ್‌ನಿಂದ ಸಮುದಾಯ ಭವನದವರೆಗೆ ಶ್ರೀಗಳವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮದೇವತೆಗಳ ಹಾಗೂ ಜಾನಪದ ಕಲಾಮೇಳಗಳೊಂದಿಗೆ ಭವ್ಯ ಮೆರವಣಿಗೆ ಏರ್ಪಡಿಸಲಾಗಿದೆ.  ಬೆಳಿಗ್ಗೆ 11.30 ಗಂಟೆಗೆ ಭೋಜನಾಲಯದ ಉದ್ಘಾಟನೆ, ಗುರುವಂದನಾ ಕಾರ್ಯಕ್ರಮ ಹಾಗೂ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಕಟ್ಟಡದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಆದಿಚುಂಚನಗಿರಿ ಸಂಸ್ಥಾನದ ಎಲ್ಲಾ ಶಾಖಾ ಮಠಗಳ ಯತೀವರೇಣ್ಯರ ಸಮ್ಮುಖದಲ್ಲಿ ನೆರವೇರಿಸಲಿದ್ದಾರೆ. ದಾನಿಗಳ ಸನ್ಮಾನವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ಡಿ.ಕೆ.ಶಿವಕುಮಾರ್, ಅಂಬರೀಷ್, ಟಿ.ಬಿ.ಜಯಚಂದ್ರ, ಹಾಗೂ ಲೋಕಸಭಾ ಸದಸ್ಯರಾದ ಎಸ್.ಪಿ. ಮುದ್ದಹನುಮೇಗೌಡರು, ಶೋಭಾಕರಂದ್ಲಾಜೆ, ಶಾಸಕ ಕೆ.ಷಡಕ್ಷರಿ ಮತ್ತಿತರರು ಭಾಗವಹಿಸಲಿದ್ದಾರೆ.
ಸಂಜೆ 5ಗಂಟೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಎಸ್.ಎಸ್.ಎಲ್.ಸಿಯಿಂದ ಸ್ನಾತಕೋತ್ತರ ಪದವಿವರೆಗಿನ ಅತಿಹೆಚ್ಚು ಅಂಕಪಡೆದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದು, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ನಾರಾಯಣಗೌಡ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement