ಸಿದ್ಧಗಂಗಾ ಮಠದಿಂದ ಎಡೆಯೂರಿಗೆ ಬಿಎಸ್ವೈ ಅಭಿಮಾನಿಗಳಿಂದ ಪಾದಯಾತ್ರೆ
ಕ.ಪ್ರ.ವಾರ್ತೆ ತುಮಕೂರು ಜೂ.1
ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದರೆ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಜಯಶೀಲರಾದರೆ ತುಮಕೂರಿನ ಸಿದ್ಧಗಂಗಾ ಮಠದಿಂದ ಎಡೆಯೂರುವರೆಗೆ ಪಾದಯಾತ್ರೆ ನಡೆಸುವುದಾಗಿ ಹರಕೆ ಹೊತ್ತಿದ್ದ ಕೆಲ ಬೆಂಬಲಿಗರು ಹಾಗೂ ಭಕ್ತರು ಭಾನುವಾರ ತಮ್ಮ ಹರಕೆ ತೀರಿಸಲು ಎಡೆಯೂರಿಗೆ ಹೊರಟರು.
ಭಾನುವಾರ ಬೆಳಗ್ಗೆ ನಗರದ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವಮುಖಂಡ ಜ್ಯೋತಿ ಗಣೇಶ್, ಮುಂದಿನ ದಿನಗಳಲ್ಲಿ ಜನತೆ ನಿರೀಕ್ಷಿಸುವಂತಹ ಉತ್ತಮ ಹಾಗೂ ಸುಭದ್ರ ಆಡಳಿತವನ್ನು ಪ್ರಧಾನಿಯಾದ ನರೇಂದ್ರ ಮೋದಿಯವರು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟುವ ಮೂಲಕ ಆಡಳಿತಕ್ಕೆ ತಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಮುಖಂಡರಾದ ರವಿ ಹೆಬ್ಬಾಕ ಅವರು ಮಾತನಾಡಿ, ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದಂತಹ ಬಿ.ಎಸ್. ಯಡಿಯೂರಪ್ಪ ಅವರಿಗೆ ಉತ್ತಮ ಸ್ಥಾನಮಾನ ಸಿಗಬೇಕು. ಈಗ ಸಿಗದಿದ್ದರೂ ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು ಅವರಿಗೆ ಉತ್ತಮ ಸ್ಥಾನ ಕಲ್ಪಿಸಿಕೊಡಲಿದ್ದಾರೆ ಎಂಬ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.
ಪಾದಯಾತ್ರೆಯಲ್ಲಿ ಬಿಎಸ್ವೈ ಹಾಗೂ ನರೇಂದ್ರ ಮೋದಿ ಬೆಂಬಲಿಗರಾದ ಆಟೋ ಯಡಿಯೂರಪ್ಪ, ಶಿವಕುಮಾರ್, ವಿಷ್ಣು, ಫೋಟೋ ಮಂಜುನಾಥ್, ಬಿಜೆಪಿ ನಗರಾಧ್ಯಕ್ಷ ಕೆ.ಪಿ.ಮಹೇಶ್, ಸಿದ್ದರಾಜುಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜ್ಯೋತಿಗಣೇಶ್, ರವಿ ಹೆಬ್ಬಾಕ, ಕೆ.ಪಿ.ಮಹೇಶ್ ಸೇರಿದಂತೆ ಕೆಲ ಬಿಜೆಪಿ ಮುಖಂಡರು ಸಿದ್ಧಗಂಗಾ ಮಠದಿಂದ ಬಿ.ಹೆಚ್.ರಸ್ತೆ ಮಾರ್ಗವಾಗಿ, ಟೌನ್ಹಾಲ್, ಕೆ. ಲಕ್ಕಪ್ಪವೃತ್ತ, ಕುಣಿಗಲ್ ಗೇಟ್ವರೆಗೆ ತೆರಳಿ ಆ ನಂತರ ಪಾದಯಾತ್ರೆಗೆ ಬೀಳ್ಕೊಟ್ಟರು.
ಭಾನುವಾರ ಬೆಳಗ್ಗೆ ಸಿದ್ಧಗಂಗಾ ಮಠದಿಂದ ಹೊರಟ ಪಾದಯಾತ್ರೆಯು ಗೂಳೂರು ಮಾರ್ಗವಾಗಿ ಹೆಬ್ಬೂರಿಗೆ ತೆರಳಿ ಅಲ್ಲಿ ಮಧ್ಯಾಹ್ನದ ಊಟ ಸೇವಿಸಿ ಬಳಿಕ ಅಲ್ಲಿಂದ ಕುಣಿಗಲ್ಗೆ ತೆರಳಿ ಅಲ್ಲಿ ರಾತ್ರಿ ವಾಸ್ತವ್ಯ ಹೂಡಿ ಬೆಳಗ್ಗೆ ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಲಾಗುವುದು.