ಧರ್ಮ ಪರಿಪಾಲನೆಯಾಗಲಿ
ಕ.ಪ್ರ.ವಾರ್ತೆ, ಕುಣಿಗಲ್, ಜೂ. 2
ಗ್ರಾಮಾಂತರ ಪ್ರದೇಶದಲ್ಲಿನ ಜನತೆ ಗ್ರಾಮಗಳಲ್ಲಿ ಕೇವಲ ದೇವಾಲಯಗಳನ್ನು ನಿರ್ಮಿಸಿದರೆ ಸಾಲದು. ಆಯಾ ದೇವಾಲಯಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳು ಅವಿರತವಾಗಿ ನಡೆದುಕೊಂಡು ಬರುವಂತೆ, ಗ್ರಾಮದ ಸರ್ವರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಧರ್ಮಪರಿಪಾಲಕರಾಗುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದು ಆದಿಚುಂಚನಗಿರಿ ಬೆಂಗಳೂರು ವಿಜಯನಗರದ ಶಾಖಾಮಠಾಧೀಶರಾದ ಸೌಮ್ಯನಾಥಸ್ವಾಮೀಜಿ ತಿಳಿಸಿದರು.
ಸೋಮವಾರ, ತಾಲೂಕಿನ ಕಸಬಾ ಹೋಬಳಿಯ ಬೇಗೂರು ಗ್ರಾಮದಲ್ಲಿನ ಗ್ರಾಮದೇವತೆ ಹುಚ್ಚಮ್ಮ ಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ, ವಿಮಾನಗೋಪುರ ಕುಂಭಾಭಿಷೇಕ,ನೂತನ ಬಿಂಬಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಮಹೋತ್ಸವದ ಸಾನಿಧ್ಯವಹಿಸಿ ಅಶೀರ್ವಚನ ನೀಡಿದರು.
ಮಕ್ಕಳಿಗೆ ತೊಂದರೆಯಾದರೆ ಹೇಗೆ ತಾಯಿ ರಕ್ಷಣೆಗೆ ನಿಲ್ಲುವಳೋ ಹಾಗೆ, ಗ್ರಾಮವು ಸಂಕಷ್ಟಕ್ಕೆ ಸಿಲುಕಿದಾಗ ಗ್ರಾಮದೇವತೆ ಗ್ರಾಮದ ರಕ್ಷಣೆಗೆ ನಿಂತು, ರಕ್ಷಿಸುತ್ತಾಳೆಂಬ ಪ್ರತೀತಿ ಇದೆ. ಪ್ರತಿಯೊಂದು ಗ್ರಾಮಗಳಲ್ಲೂ ಗ್ರಾಮದೇವತೆ ದೇವಾಲಯಗಳಿವೆ.
ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ನಗರೀಕರಣ ಪ್ರಭಾವದಿಂದ ಹಿರಿಯರು ಹಾಕಿಕೊಟ್ಟ ಹಲವು ಧಾರ್ಮಿಕ ಸಂಪ್ರದಾಯಗಳು ಮರೆಯಾಗುತ್ತಾ, ಗ್ರಾಮದಲ್ಲಿನ ಜನತೆ ದೇವಾಲಯಗಳತ್ತ ಮುಖಮಾಡದಂತ ಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಖೇದಕರ ಎಂದು ವಿಷಾದಿಸಿದರು.
ದೈನಂದಿನ ಜೀವನದಲ್ಲಿ ಕೆಲಕಾಲವಾದರೂ ದೇವಾಲಯಗಳಿಗೆ ಹೋಗಿ, ಉತ್ತಮ ವಿಷಯವಗಳನ್ನು ಗುರು, ಹಿರಿಯರಿಂದ ಅರಿತು, ದೇವಾಲಯದ ಪಾವಿತ್ರತೆಯ ಹಿರಿಮೆ, ಗರಿಮೆಯನ್ನು ಮುಂದಿನ ಪೀಳಿಗೆಯವರೂ ಅಚರಿಸುವಂತೆ ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಪಾಲಿಸಬೇಕೆಂದರು.
ಶ್ಲಾಘನೀಯ: ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಗ್ರಾಮಾಂತರ ಪ್ರದೇಶದಲ್ಲೂ ಜನತೆ ತಮ್ಮ ಹಲವು ಬವಣೆಯ ಹೊರತಾಗಿ, ಮನಸಿಗೆ ಶಾಂತಿ, ನೆಮ್ಮದಿ ಕಲ್ಪಿಸಿ, ಸ್ಥೈರ್ಯ ಕಳೆದುಕೊಂಡವರಿಗೆ ಪುನಃಶ್ಚೇತನ ಕಲ್ಪಿಸುವಂತ ತಾಣವಾದ ದೇವಾಲಯದ ಮಹಿಮೆಯನ್ನು ಅರಿತು, ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರಮಿಸಿರುವುದು ಶ್ಲಾಘನೀಯ, ಇಂತಹ ಕಾರ್ಯಗಳಲ್ಲಿ ಗ್ರಾಮದ ಎಲ್ಲರೂ ಸಂಘಟಿತರಾಗಿ ಶ್ರಮಿಸುವುದರಿಂದ ಗ್ರಾಮದಲ್ಲಿ ಧಾರ್ಮಿಕ ಭಾವನೆಯ ಜೊತೆ, ಒಗ್ಗಟಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.
ಧರ್ಮಸ್ಥಳ ಧರ್ಮಾಧಿಕಾರಿಯವರ ಪರವಾಗಿ ಪಾಲ್ಗೊಂಡು ಮಾತನಾಡಿದ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಂಗಾಧರ ರೈ, ಪ್ರಕೃತಿಯಲ್ಲಿ ಪರಮಾತ್ಮನನ್ನು ಕಾಣು ಎಂಬಂತೆ ನಾವು ಪ್ರಕೃತಿಯಲ್ಲೂ ದೈವಿಕ ಭಾವನೆ ಕಾಣುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಯ ಫಲವಾಗಿ ಪ್ರಕೃತಿಯ ಅಂಶವಾದ ನೆಲ, ಜಲ, ಕಾಡುಗಳ ಮೇಲೆ ಮಿತಿ ಮೀರಿ ದೌರ್ಜನ್ಯ ನಡೆಸುತ್ತಾ ಅವುಗಳ ನಾಶಕ್ಕೆ ಮುಂದಾಗುತ್ತಿದ್ದು, ಪರಮಾತ್ಮನ ಮೇಲೂ ದೌರ್ಜನ್ಯ ನಡೆಸುತ್ತಿದ್ದೇವೆ ಎಂಬ ಭಾವನೆಯನ್ನು ಮರೆತಿದ್ದಾನೆ, ಇನ್ನಾದರೂ ಎಚ್ಚೆತ್ತು ಈ ಕೃತ್ಯಗಳಿಗೆ ಕಡಿವಾಣ ಹಾಕಿ, ಪ್ರೃಕೃತಿಯ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಮಾಜಿ ಶಾಸಕ ಕೆ.ಲಕ್ಕಣ್ಣ ಅಧ್ಯಕ್ಷತೆ ವಹಿಸಿದ್ದು, ಸಂಸದ ಎಸ್.ಪಿ. ಮುದ್ದಹನುಮೇಗೌಡ ರಾಜಗೋಪುರ ಉದ್ಘಾಟಿಸಿ ಕಾರ್ಯನಿಮಿತ್ತ ತುರ್ತಾಗಿ ತೆರಳಿದರು. ಪ್ರಮುಖರಾದ ಬಿ.ಎಂ. ಹುಚ್ಚೇಗೌಡ, ಗಂಗಶಾನಯ್ಯ, ವೈ.ಎನ್.ಹೊನ್ನೇಗೌಡ, ಬಿ.ಕೆ.ರಾಮಣ್ಣ, ನಾಗರತ್ನಮ್ಮ, ಅರುಣಕುಮಾರ, ಕುಮಾರ, ಗ್ರಾಪಂ ಸದಸ್ಯರಾದ ಮೂರ್ತಿ,ನಾಗಾನಂದ ಸೇರಿದಂತೆ ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.