ಜಲಚಕ್ರಗಳು ಸ್ಥಗಿತ: ಜಲಚರಗಳಿಗೆ ಕುತ್ತು
-ಉಗಮ ಶ್ರೀನಿವಾಸ್
ತುಮಕೂರು: ಚರಂಡಿ ನೀರು ಸಂಸ್ಕರಿಸುವ ಜಲ ಚಕ್ರಗಳು ಕೆಟ್ಟು ಹೋಗಿರುವುದರಿಂದ ತುಮಕೂರು ಬಳಿ ಭೀಮಸಂದ್ರ ಕೆರೆ ಮಾಲಿನ್ಯವಾಗಿದ್ದು ಅದರಲ್ಲಿನ ಜಲಚರಗಳಿಗೆ ಕುತ್ತು ಬಂದಿವೆ.
ತುಮಕೂರು ನಗರದಲ್ಲಿ ಉತ್ಪತ್ತಿಯಾಗುವ ಚರಂಡಿ ನೀರನ್ನೆಲ್ಲಾ ಭೀಮಸಂದ್ರದ ಕೆರೆಗೆ ಹಾಯಿಸಲಾಗುವುದು. ಕೆರೆಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಇದ್ದು ಚರಂಡಿ ನೀರನ್ನು ಜಲಚಕ್ರಗಳ ಮೂಲಕ ಗಾಳಿಯಾಡುವಂತೆ ಮಾಡಿ ಆಮ್ಲಜನಕ ಹೆಚ್ಚು ಪ್ರಮಾಣದಲ್ಲಿ ದೊರಕುವಂತೆ ಮಾಡುತ್ತಾರೆ. ಈ ನೀರನ್ನು ಭೀಮಸಂದ್ರದ ಸುತ್ತಮುತ್ತ ರೈತರ ತೋಟ ಮತ್ತು ಗದ್ದೆಗಳಿಗೆ ಹರಿಸಲಾಗುವುದು.
ಆದರೆ 14 ಜಲಚಕ್ರಗಳಲ್ಲಿ 6 ಜಲಚಕ್ರಗಳನ್ನು ಹೂಳೆತ್ತುವ ನೆಪದಲ್ಲಿ ಸ್ಥಗಿತಗೊಳಿಸಿದ್ದಾರೆ. ಉಳಿದ 8 ಜಲಚಕ್ರಗಳ ನೆರವಿನಿಂದ ಚರಂಡಿ ನೀರನ್ನು ಶುದ್ಧೀಕರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆರೆಯಲ್ಲಿನ ಜಲಚರಗಳು ಆಮ್ಲಜನಕ ಕೊರತೆಯಿಂದ ನಾಶವಾಗುತ್ತಿವೆ.
ಹೇಗೆ ಮಾಡುತ್ತಾರೆ ಸಂಸ್ಕರಣೆ: ಚರಂಡಿ ನೀರನ್ನು ಜಲಚಕ್ರಗಳನ್ನು ಉಪಯೋಗಿಸಿ ಅದರಲ್ಲಿ ಸಾಕಷ್ಟು ಗಾಳಿಯಾಡುವ ಹಾಗೆ ಮಾಡ್ತಾರೆ. ನೀರಿಗೆ ಆಮ್ಲ ಜನಕ ಹೆಚ್ಚೆಚ್ಚು ಪ್ರಮಾಣದಲ್ಲಿ ದೊರಕುವಂತೆ ಮುತ್ತಾರೆ. ಆ ನೀರನ್ನು ತೆರೆದ ತೊಟ್ಟಿಗಳಿಗೆ ಹಾಯಿಸಿ ಅಲ್ಲಿ ತಾತ್ಕಾಲಿಕವಾಗಿ ಸಂಗ್ರಹಿಸಿ ತಿಳಿಯಾದ ನೀರನ್ನು ಭೀಮಸಂದ್ರ ಕೆರೆಗೆ ಬೀಡುತ್ತಾರೆ. ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಟ್ಟು ಅಲ್ಲಿ ಶುದ್ಧ ನೀರನ್ನು ಸಂಗ್ರಹಿಸುತ್ತಾರೆ. ಆ ನೀರನ್ನು ಭೀಮಸಂದ್ರ ಕೆರೆಯ ಆಸು ಪಾಸಿನಲ್ಲಿರುವಂತಹ ರೈತರ ತೋಟ, ಗದ್ದೆಗಳಿಗೆ ಕೃಷಿ ಬಳಕೆಗೆ ಬಿಡುತ್ತಾರೆ.
ಸಮಸ್ಯೆ ಇರುವುದೇ ಇಲ್ಲಿ: ಆದರೆ ಚರಂಡಿ ನೀರಿನಲ್ಲಿ ಕಲ್ಮಶಗಳಾದ ಮಾನವ ಮೂತ್ರ, ಮಲ, ಬಟ್ಟೆ ತೊಳೆಯಲು ಉಪಯೋಗಿಸುವ ಸಾಬೂನು, ಮಾರ್ಜಕಗಳು, ಸ್ವಚ್:್ಗೊಳಿಸುವ ಪದಾರ್ಥಗಳು ಇರುವಂತಹ ನೀರನ್ನು ಸರಿಯಾದ ರೀತಿಯಲ್ಲಿ ಶುದ್ಧೀಕರಿಸದೆ ನೇರವಾಗಿ ಭೀಮಸಂದ್ರ ಕೆರೆಗೆ ಬಿಡಲಾಗುತ್ತಿದೆ. ಹೀಗಾಗಿ ನೀರು ಸಂಪೂರ್ಣವಾಗಿ ಶುದ್ಧೀಕರಣವಾಗುತ್ತಿಲ್ಲ.
ಇದರಿಂದ ಭೀಮಸಂದ್ರ ಕೆರೆ ಮತ್ತು ಮೆಳೆಕೋಟೆ ಕೆರೆಯ ನೀರು ಹೆಚ್ಚು ಮಾಲಿನ್ಯಭರಿತವಾಗಿದೆ. ಅದರಲ್ಲಿನ ಜಲಜೀವಿಗಳು ಜೀವಂತವಾಗಿ ಉಳಿಯಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ನೀರಿನಲ್ಲಿನ ರಂಜಕ ಯುಕ್ತ ಸಂಯುಕ್ತಗಳು (ಫಾಸ್ಪೇಟ್ ಅಂಶಗಳು) ನೀರಿನಲ್ಲಿ ಸೇರಿ ಅನಗತ್ಯವಾಗಿ ಅನಗತ್ಯ ಸಸ್ಯಗಳ ದಿಢೀರ್ ಉದ್ಭವಕ್ಕೆ ಕಾರಣವಾಗುತ್ತಿದೆ. ಇದರಿಂದ ಜಲಜರ ಜೀವಿಗಳು ಸಂಪೂರ್ಣವಾಗಿ ನಾಶಹೊಂದುತ್ತಿವೆ. ಇದಲ್ಲದೆ ಈ ನೀರಿನಲ್ಲಿ ಸೀಸ, ಕ್ಯಾಟ್ಮಮಿಯಂ, ಕ್ರೋಮಿಯಂ, ಕೋಬಾಲ್ಟ್ ಮುಂತಾದ ಲೋಹಗಳು ನೀರಿನಲ್ಲಿ ಯಥೇಚ್ಛವಾಗಿದ್ದು ಇಂತಹ ಪದಾರ್ಥಗಳು ಅಂತರ್ಜಲಕ್ಕೆ ಸೇರ್ಪಡೆಯಾದರೆ ಭೀಮಸಂದ್ರ ಸುತ್ತಮುತ್ತ ಉಪಯೋಗಿಸುವ ಮಾನವನ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತವೆ. ಇಂತಹ ನೀರನ್ನು ಕೃಷಿಗೆ ರೈತರು ಬಳಸಿದರೆ ನೀರಿನ ಮೂಲಕ ಆಹಾರ ಪದಾರ್ಥಗಳಿಗೂ ಸಹ ಸೇರ್ಪಡೆಯಾಗಿ ಜನ ಜಾನುವಾರುಗಳಿಗೂ ಸಹ ಆಹಾರದ ಮೂಲಕ ಪೂರೈಕೆಯಾಗುತ್ತದೆ. ಇದಲ್ಲದೆ ಈ ನೀರು ಮಳೆಗಾಲದಲ್ಲಿ ಮೆಳೆಕೋಟೆ ಕೆರೆ, ಗಂಗಸಂದ್ರ ಕೆರೆ, ಮಲ್ಲಸಂದ್ರ ಕೆರೆಗಳಿಗೂ ಸೇರ್ಪಡೆಯಾಗಿ ಅಲ್ಲಿನ ಜಲ ಆವಾಸಗಳನ್ನು ಮಾಲಿನ್ಯಗೊಳಿಸುತ್ತಿದೆ. ಆದ್ದರಿಂದ ನಗರ ಪಾಲಿಕೆ ಎಚ್ಚೆತ್ತುಕೊಂಡು ಒಳಚರಂಡಿ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಶುದ್ಧೀಕರಿಸುವುದು ಪರಿಸರದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಪರಿಸರ ವಾದಿ ಹಾಗೂ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ವಿ.ಗುಂಡಪ್ಪ.