'ಜಲಾನಯನ ಕಾಮಗಾರಿಗಳಿಂದ ಅಂತರ್ಜಲ ಹೆಚ್ಚಳ'
ತುಮಕೂರು: ಜಲಾನಯನ ಕಾಮಗಾರಿಗಳಿಂದಾಗಿ ಅಂತರ್ಜಲ ಮಟ್ಟ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಇಲಾಖೆಯ ಎಲ್ಲಾ ಅಧಿಕಾರಿಗಳು ರೈತ ಸಮುದಾಯದೊಂದಿಗೆ ಕೈಜೋಡಿಸಿ ಕಾಮಗಾರಿಗಳನ್ನು ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳಿಸುವಂತೆ ಜಲಾನಯನ ಇಲಾಖೆ ಆಯುಕ್ತ ಡಾ.ಶಿವಾನಂದ ಮೂರ್ತಿ ಅಭಿಪ್ರಾಯಪಟ್ಟರು.
ಅವರು ಕೊರಟಗೆರೆ ತಾಲೂಕಿನ ಮಾವತ್ತೂರು ಗ್ರಾಮದ ಬಳಿ ಅನುಷ್ಠಾನಗೊಳ್ಳುತ್ತಿರುವ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಕಾಮಗಾರಿ ಪರಿಶೀಲಿಸಿ ರೈತಸಮೂಹದೊಂದಿಗೆ ಚರ್ಚಿಸಿದರು. ಯೋಜನೆಯ ವತಿಯಿಂದ ನಿರ್ಮಿಸಲಾಗಿರುವ ಬದುಗಳು, ನಾಲಾಬದು, ಚೆಕ್ ಡ್ಯಾಮ್ ಮತ್ತಿತರ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳ ಮೌಲ್ಯಮಾಪನ ಮಾಡಿದ ಅವರು ಸ್ಥಳದಲ್ಲಿಯೇ ಹತ್ತು ಹಲವು ಕ್ರಿಯಾತ್ಮಕ ಸಲಹೆಗಳನ್ನು ಇಲಾಖಾ ಸಿಬ್ಬಂದಿಗಳಿಗೆ ನೀಡಿದರು. ಜಲಾನಯನ ಇಲಾಖೆಯ ನಿರ್ದೇಶಕ ಡಾ.ಶೇಷಗಿರಿ, ಜಂಟಿ ನಿರ್ದೇಶಕರಾದ ಡಾ.ಶ್ರೀನಿವಾಸ್, ಡಾ.ಗಂಗಪ್ಪ, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳಾದ ಡಾ. ಆರ್.ಪಿ. ರಾಮಯ್ಯನವರ ಜೊತೆಯಲ್ಲಿ ಪ್ರತಿ ಕಿರುಜಲಾನಯನದ ನಕ್ಷೆಗಳು ಹಾಗೂ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯುಕ್ತರು ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದರು.
ಮನವರಿಕೆ: ಇತ್ತೀಚೆಗೆ ಬಿದ್ದಿರುವ ಮಳೆಯಿಂದಾಗಿ ಕಂದಕ ಸಹಿತ ಬದುಗಳಲ್ಲಿ ಮಳೆ ನೀರು ಶೇಖರಣೆಯಾಗಿರುವುದರಿಂದ ಭೂಮಿಯ ಒಳಪದರಗಳಿಗೆ ನೀರು ಇಂಗುವ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆಗಳನ್ನು ಅಧಿಕಾರಿಗಳು ಕೃಷಿಕರಿಗೆ ಮನವರಿಕೆ ಮಾಡಿಕೊಟ್ಟು ಜಲಾನಯನ ಕಾಮಗಾರಿಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿ ಯೋಜನೆಯ ಯಶಸ್ಸಿಗೆ ಕಾರಣರಾಗಲು ತಿಳಿಸಿದರು. ನಂತರ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಭೌತಿಕ ಕಾಮಗಾರಿಗಳು, ಸಮುದಾಯದ ಭಾಗವಹಿಸುವಿಕೆ, ಪಾಲುದಾರಿಕೆ ಹಾಗೂ ಜವಾಬ್ದಾರಿಗಳ ಬಗ್ಗೆ ರೈತಸಮೂಹದೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರದ ನೆರವಿನೊಂದಿಗೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಮಹಿಳಾ ಸಬಲೀಕರಣದ ಹಾದಿಯಲ್ಲಿ ಹಮ್ಮಿಕೊಳ್ಳಲಾಗಿರುವ ಆದಾಯೋತ್ಪನ್ನ ಚಟುವಟಿಕೆಗಳಡಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ, ಮಹಿಳೆಯರಿಗೆ ಹಲವಾರು ಇಲಾಖೆಗಳ ಸೌಲತ್ತುಗಳ ಬಗ್ಗೆ ತಿಳಿಸಿದರು.
ಸಮಾಜದಲ್ಲಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸದರಿ ಯೋಜನೆಯಲ್ಲಿರುವ ಅವಕಾಶಗಳ ಬಗ್ಗೆ ಹಾಗೂ ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿರುವ ಭೌತಿಕ ಕಾಮಗಾರಿಗಳ ಬಗ್ಗೆ ಗಮನ ಹರಿಸಬೇಕೆಂದು ಕರೆ ನೀಡಿದರು.
ನಿರ್ದೇಶಕರಾದ ಡಾ. ಶೇಷಗಿರಿ, ಜಂಟಿ ನಿರ್ದೇದೇಶಕ ಡಾ. ಶ್ರೀನಿವಾಸ್, ಡಾ. ಗಂಗಪ್ಪ, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳಾದ ಡಾ. ಆರ್.ಪಿ. ರಾಮಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಜಲಾನಯನ ಇಲಾಖೆಯ ಅರಣ್ಯ ಘಟಕದ ಮುಖ್ಯಸ್ಥ ಡಾ. ಹೆಗಡೆ, ತೋಟಗಾರಿಕಾ ವಿಭಾಗದ ಡಾ. ರಾಜಪ್ಪ, ಸಹಾಯಕ ಕೃಷಿ ನಿರ್ದೇಶಕ ಡಾ. ಎಸ್. ಲಕ್ಷ್ಮಣ್, ಕೃಷಿ ಅಧಿಕಾರಿಗಳಾದ ಟಿ.ಕೆ. ಸೋಮಶೇಖರ್, ರಘುನಾಥ್ ಹಾಗೂ ರೀಡ್ಸ್ ಸಂಸ್ಥೆಯ ಈಶ್ವರ್, ಮೂರ್ತಿ, ಶಂಕರ್, ಪರಿಣತ ತರಬೇತುದಾರರಾದ ಜಯಲಕ್ಷ್ಮಿ, ಜಿಲ್ಲಾ ತರಬೇತಿ ಸಂಯೋಜಕ ಭೂಷಣ್ ಉಪಸ್ಥಿತರಿದ್ದರು.