ಎಲ್ಲಾ ವರ್ಗದವರಿಗೂ 100 ದಿನ ಕೆಲಸ ಖಾತ್ರಿ
ಚೇಳೂರು: ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅರ್ಜಿಗಳನ್ನು ನೀಡಿ ಕಾಮಗಾರಿಯ ವಿವರವನ್ನು ನೀಡಿದರೆ ಅಂತಹ ಫಲಾನುಭವಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡಲಾಗುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೆಚ್.ಎಸ್. ನಂಜುಂಡಾರಾಧ್ಯ ತಿಳಿಸಿದರು.
ಚೇಳೂರು ಗ್ರಾಮ ಪಂಚಾಯ್ತಿಯಲ್ಲಿ 14-15ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೊದಲನೆ ಹಂತದ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಲ್ಲಾ ಕಡುಬಡವ ಕುಟುಂಬ ವರ್ಗದವರಿಗೂ 100 ದಿನ ಕೆಲಸವನ್ನು ಕೊಡಲಾಗುತ್ತದೆ ಎಂದರು.
ಪ್ರತಿಯೊಬ್ಬರು ಇದರ ಅನುಕೂಲ ಪಡದುಕೊಳ್ಳಬೇಕು. ರೈತರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ತಮ್ಮ ಭೂಮಿ ಅಭಿವೃದ್ಧಿಪಡಿಸಲು ಇಲಾಖೆ ವತಿಯಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ಪ್ರತಿ ಗ್ರಾಮಗಳಲ್ಲೂ ವಾರ್ಡ್ ಸಭೆಗಳ ಮೂಲಕ ವೈಯುಕ್ತಿಕ ಕೆಲಸಗಳನ್ನು ಪಟ್ಟಿ ಮಾಡಿಸಬೇಕು ನಂತರ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ತಾಲೂಕು ನೋಡಲ್ ಅಧಿಕಾರಿ ಹೊನ್ನಪ್ಪ, ಚೇಳೂರು ಕೃಷಿ ಅಧಿಕಾರಿ ಎನ್, ನರಸಿಂಹಯ್ಯ, ಗ್ರಾ.ಪಂ. ಅಧ್ಯಕ್ಷೆ ದೊಡ್ಡಮ್ಮ, ತಾ.ಪಂ. ಸದಸ್ಯೆ ಜಯಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಿದ್ದೇಶ್, ಲೆಕ್ಕ ಸಹಾಯಕ ರಂಗರಾಜ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.