ಗುಬ್ಬಿ ಕೆರೆಯಲ್ಲಿ ಕಾಡಾನೆ ಹಿಂಡು
ಗುಬ್ಬಿ: ಕೆಲವು ದಿನಗಳಿಂದ ತುಮಕೂರು ತಾಲೂಕಿನ ಮಲ್ಲಸಂದ್ರ ಕೆರೆ ಸೇರಿದಂತೆ ವಿವಿಧೆಡೆ ಸಂಚರಿಸುತ್ತಿದ್ದ ಐದು ಕಾಡಾನೆಗಳು ಬುಧವಾರ ಬೆಳಗಿನ ವೇಳೆಯಲ್ಲಿ ಗುಬ್ಬಿ ಕೆರೆಗೆ ಬಂದು ತಂಗಿವೆ.
2 ಗಂಡಾನೆ, 2 ಹೆಣ್ಣಾನೆ ಹಾಗೂ ಒಂದು ಮರಿಯಾನೆ ಗುಂಪಿನಲ್ಲಿದ್ದು, ಕೆರೆಯ ಗಣೇಶಕಡ್ಡಿಯಲ್ಲಿ ಅಡಗಿಕೊಂಡಿವೆ. ಕಾಡಾನೆಗಳು ಮಲ್ಲಸಂದ್ರ ಕೆರೆಯಿಂದ ಬರುವ ಮಾರ್ಗದಲ್ಲಿ ರೈತರ ಬಾಳೆ, ತೆಂಗು. ಅಡಿಕೆ ತೋಟ ಸೇರಿದಂತೆ ಹಲವು ಬೆಳೆಗಳನ್ನು ಸಂಪೂರ್ಣವಾಗಿ ಹಾಳುಮಾಡಿವೆ.
ಅರಣ್ಯಾಧಿಕಾರಿಗಳು ಕಾಡಾನೆಗಳಿಂದ ರೈತರ ಬೆಳೆಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಸ್ಥಳದಲ್ಲೇ ಮೊಕ್ಕಾಂ ಮಾಡಿ ಆನೆಗಳ ಚಲನವಲನಗಳ ಬಗ್ಗೆ ತೀವ್ರ ನಿಗಾವಹಿಸಿದ್ದಾರೆ. ಪ್ರತಿ ಭಾರಿ ತಾಲೂಕಿಗೆ ಬಂದಾಗ ಗುಬ್ಬಿ ಕೆರೆ, ಎಂ.ಎಚ್.ಪಟ್ಟಣ ಕೆರೆಗಳಲ್ಲಿ ತಂಗುವುದು ಸಾಮಾನ್ಯವಾಗಿದೆ. ಇದೀಗ ಗುಂಪಿನಲ್ಲಿ ಬಂದಿರುವ ಕಾಡಾನೆಗಳು ರೈತರ ಬೆಳೆಗಳನ್ನು ಹಾಳುಮಾಡುತ್ತಿವೆ. ಕಾಡಾನೆಗಳಿಂದ ಯಾವುದೇ ಬೆಳೆ ಹಾನಿ ಸಂಭವಿಸದಂತೆ ವಲಯ ಅರಣ್ಯಾಧಿಕಾರಿ ಹರೀಶ್ ನೇತೃತ್ವದ ತಂಡ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಆನೆಗಳು ಸಂಚರಿಸುವ ಮಾರ್ಗದಲ್ಲಿನ ರೈತರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಆನೆಗಳನ್ನು ಸುರಕ್ಷಿತವಾಗಿ ಅರಣ್ಯದತ್ತ ಓಡಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.