ತಿಪಟೂರು ನಗರಸಭೆ ಉಳಿತಾಯ ಬಜೆಟ್
ತಿಪಟೂರು: ಇಲ್ಲಿನ ನಗರಸಭೆ ಇದೇ ಮೊದಲ ಬಾರಿಗೆ 53.57 ಲಕ್ಷದ ಉಳಿತಾಯದೊಂದಿಗೆ ಒಟ್ಟು 107 ಕೋಟಿಗೂ ಮೀರಿದ ಭಾರಿ ಬಜೆಟ್ ಮಂಡಿಸಿದೆ.
2014-15ನೇ ಸಾಲಿನ ಬಜೆಟ್ ಮಂಡಿಸುವ ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ, ಅಧ್ಯಕ್ಷೆ ಗೀತಾ ಮತ್ತು ಉಪಾಧ್ಯಕ್ಷೆ ಶಶಿಕಲಾ ಹಾಜರಿದ್ದರು.
ಬ್ಯಾಂಕ್ಗಳಲ್ಲಿ ಉಳಿದಿರುವ 14.33 ಕೋಟಿ ಶಿಲ್ಕು ಸೇರಿ ನಾನಾ ಆದಾಯ, ಅನುದಾನ ಮೂಲಗಳಿಂದ ಒಟ್ಟು 107.79 ಕೋಟಿ ಜಮಾ ನಿರೀಕ್ಷೆ ಮಾಡಲಾಗಿದೆ. ಇದರಲ್ಲಿ ನಾನಾ ಸಾಂಪ್ರದಾಯಿಕ ಯೋಜನೆ, ನಿರ್ವಹಣೆ ಮತ್ತು ಕಾಮಗಾರಿಗಳು ಸೇರಿ ಒಟ್ಟು 107.25 ಕೋಟಿ ವೆಚ್ಚ ಅಂದಾಜಿಸಲಾಗಿದೆ. ರಾಜಸ್ವ ಸ್ವೀಕೃತಿ 26.79 ಕೋಟಿ, ರಾಜಸ್ವ ಪಾವತಿ 19.54 ಕೋಟಿ ಸೇರಿ ರಾಜಸ್ವ ಖಾತೆಯಲ್ಲಿ 7.24 ಕೋಟಿ ಹೆಚ್ಚುವರಿ ಲೆಕ್ಕ ಹಾಕಲಾಗಿದೆ. ಬಂಡವಾಳ ಸ್ವೀಕೃತಿ 30.55 ಕೋಟಿ, ಬಂಡವಾಳ ಪಾವತಿ 83.25 ಕೋಟಿ, ಅಸಾಧಾರಣ ಸ್ವೀಕೃತಿ 36.11 ಕೋಟಿ, ಅಸಾಧರಣ ಪಾವತಿ 4.46 ಕೋಟಿ ಅಂದಾಜಿಸಲಾಗಿದೆ.
ನಗರಸಭೆ ಸ್ವಂತ ಆದಾಯದಲ್ಲಿ ಕಟ್ಟಡಗಳ ಬಾಡಿಗೆಯಿಂದ 13.50 ಲಕ್ಷ, ನೆಲ ಬಾಡಿಗೆ 6 ಲಕ್ಷ ದಂಡ, ಜುಲ್ಮಾನೆಯಿಂದ 1 ಲಕ್ಷ, ಕಟ್ಟಡ ಕಾಯಿದೆಗಳಿಗೆ ಸಂಬಂಧಿ 4 ಲಕ್ಷ, ಅಭಿವೃದ್ಧಿ ಶುಲ್ಕ 50 ಲಕ್ಷ, ನಗರಾಭಿವೃದ್ಧಿ ಶುಲ್ಕ 4 ಲಕ್ಷ, ಉದ್ಯಮಿ ಪರವಾನಗಿ ಶುಲ್ಕ 15 ಲಕ್ಷ, ವಾಹನ ನಿಲುಗಡೆ ಶುಲ್ಕ 2.50 ಲಕ್ಷ, ಬಳಕೆದಾರರ ಶುಲ್ಕ, ನೀರು ಪೂರೈಕೆ ಸಂಪರ್ಕ 10 ಲಕ್ಷ ಸೇರಿದಂತೆ ನಾನಾ ಮೂಲಗಳನ್ನು ಒಳಗೊಂಡಿದೆ.
ನಗರಸಭಾ ಸದಸ್ಯ ಲಿಂಗರಾಜು ಮಾತನಾಡಿ, ಪಟ್ಟಣದಲ್ಲಿರುವ ಕಲ್ಯಾಣ ಮಂದಿಗಳ ವಾರ್ಷಿಕ ಕಂದಾಯ ಸರಿಯಾಗಿ ಕಟ್ಟುತ್ತಿಲ್ಲ. ನಗರ ರಸ್ತೆಗಳಲ್ಲಿ ಜಗಮಗಿಸುವ ಬೀದಿದೀಪಗಳ ಅಳವಡಿಸಲು ಕಲ್ಯಾಣ ಮಂದಿರಗಳು ನಗರಸಭೆಯಿಂದ ಅನುಮತಿ ಪಡೆಯದೆ ಹಗಲು ದರೋಡೆ ಮಾಡುತ್ತಿವೆ. ಬೀದಿದೀಪಗಳ ಸ್ವಿಚ್ ಆಫ್ ಮಾಡುವ ಸೆನ್ಸರ್ ಸ್ವಿಚ್ಗಳು ಹಾಳಾಗಿದ್ದು, ಹಗಲು ವೇಳೆಯಲ್ಲೂ ಬೀದಿದೀಪಗಳು ಉರಿಯುತ್ತಿವೆ ಎಂದು ದೂರಿದರು.
ನಗರಸಭಾ ಸದಸ್ಯರಾದ ತರಕಾರಿ ಪ್ರಕಾಶ್, ರೇಖಾ ಅನೂಪ್, ಸುಧಾಕರ್, ನಿಜಗುಣ, ಪ್ರಸನ್ನ ಕುಮಾರ, ಕೋಟೆ ಪ್ರಭು, ತರಕಾರಿ ಗಂಗಾಧರ, ರಾಜು ಮಾತನಾಡಿ, ನಗರಸಭೆಗೆ ಬರಬೇಕಾದ ಆದಾಯದಲ್ಲಿ ಕನಿಷ್ಠ ಅರ್ಧದಷ್ಟನ್ನೂ ಸಂಗ್ರಹಿಸುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅದಕ್ಷತೆ, ನಿರ್ಲಕ್ಷ್ಯವೇ ಮುಖ್ಯ ಕಾರಣ. ಆಸ್ತಿ ತೆರಿಗೆ ಬಗ್ಗೆ ಕಂದಾಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಕೆಂಡಕಾರಿದರು.
ಸಂಪನ್ಮೂಲ ಕೊರತೆಗೆ ಅಧಿಕಾರಿಗಳು ಕಾರಣ
ಬಜೆಟ್ ಚರ್ಚೆಯಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ನಗರಸಭೆ ಆದಾಯ ಇತರೆ ಮೂಲಗಳಿಂದ ಪ್ರತಿವರ್ಷ ಕಡಿಮೆ ಬರುತ್ತಿದೆ. ಕಂದಾಯ ಸೇರಿದಂತೆ ಇತರೆ ಮೂಲಗಳ ಆದಾಯ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಸಂಪನ್ಮೂಲ ಕೊರತೆಯಾಗಲು ಕಾರಣರಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕುಡಿಯುವ ನೀರು, ರಸ್ತೆ, ವಿದ್ಯುತ್, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ನಗರಸಭೆ ಅಭಿವೃದ್ದಿ ಕುಂಠಿತಗೊಳ್ಳುತ್ತಿದೆ ಎಂದು ದೂರಿದರು.