ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸತ್ಪ್ರಜೆಗಳಾಗುವ ಮಾರ್ಗ ಕಂಡುಕೊಳ್ಳಿ

Srinivasa Murthy VN
Updated On : 11 Jun 2014, 11:49 am

ತುಮಕೂರು: ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳೆಯಲು ಇರುವ ಅವಕಾಶಗಳ ಬಗ್ಗೆ ಮಾರ್ಗ ಕಂಡುಕೊಳ್ಳಬೇಕಿದೆ ಎಂದು  ಚಾಮುಂಡೇಶ್ವರಿ ಚಾರಿಟಬಲ್ ಟ್ರಸ್ಟ್ ಧರ್ಮದರ್ಶಿ ಲೋಕೇಶ್ ತಿಳಿ ಹೇಳಿದರು.
ಶಿರಾಗೇಟ್ ಬಳಿ ಇರುವ ಶ್ರೀ ಚಾಮುಂಡೇಶ್ವರಿ ಶಕ್ತಿ ಪೀಠದಲ್ಲಿ ತುಮಕೂರು ತಾಲೂಕಿನ ಆಯ್ದ ಸರ್ಕಾರಿ ಶಾಲೆಗಳ 80 ಬಡ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಕಲಿಯುವ ದಿನಗಳಲ್ಲಿ ಮಕ್ಕಳು ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಗುರುಹಿರಿಯರಿಗೆ ಗೌರವ ಕೊಡಬೇಕು. ಹೆತ್ತ ತಂದೆ-ತಾಯಿಯರನ್ನು ಗೌರವಿಸಬೇಕು. ಗುರುಗಳನ್ನು ಪ್ರೀತಿಯಿಂದ ಕಾಣುತ್ತಾ ಅವರು ಹೇಳಿಕೊಳ್ಳುವ ಪಾಠಪ್ರವಚನಗಳನ್ನು ಆಲಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಕಂಡುಕೊಳ್ಳಬೇಕಿದೆ ಎಂದರು.
ಮಕ್ಕಳು ತಮ್ಮ ವಯಸ್ಸಿನಲ್ಲಿ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುವ ಅವಕಾಶಗಳು ಸಿಗುತ್ತವೆ. ಆದರೆ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಭಾವನೆ ಸದಾ ಇರಬೇಕು. ಪಾಠಪ್ರವಚನಗಳ ಕಡೆ ಗಮನ ಹರಿಸಿ ಮುಂದೆ ಈ ಸಮಾಜಕ್ಕೆ ಕೊಡುಗೆ ನೀಡಬೇಕು. ಏನಾದರೂ ಆಗಲಿ ಮನುಷ್ಯರಾಗಿ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಬಾಲ ನ್ಯಾಯ ಮಂಡಳಿ ಸದಸ್ಯೆ ಆರ್.ಎಚ್. ಸುಕನ್ಯ ಮಾತನಾಡಿ ಮಕ್ಕಳು ದೇವರಿಗೆ ಸಮಾನ ಎಂದು ಹೇಳುತ್ತಾರೆ. ಅವರ ಮೂಲಕ ಕೆಟ್ಟ ಕೆಲಸಗಳನ್ನು ಪೋಷಕರು ಮಾಡಿಸಬಾರದು. ಮಕ್ಕಳು ಉತ್ತಮ ಮಾರ್ಗದಲ್ಲಿಯೇ ಬೆಳೆಯುವಂತಹ ವಾತಾವರಣ ರೂಪಿಸಬೇಕು. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ ಎಂಬ ನಾಣ್ಣುಡಿಯಂತೆ ಚಿಕ್ಕವಯಸ್ಸಿನಲ್ಲಿಯೇ ಸರಿದಾರಿಯತ್ತ ಮನಸನ್ನು ಕೇಂದ್ರೀಕರಿಸಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ. ರಾಜಕುಮಾರ್ ಮಾತನಾಡಿ 18 ವರ್ಷದ ಒಳಗಿನ ಎಲ್ಲರೂ ಮಕ್ಕಳು ಎಂದು ವ್ಯಾಖ್ಯಾನಿಸಲಾಗಿದೆ. ಈ ಅವಧಿಯಲ್ಲಿ ಏನೇ ಮಾಡಿದರೂ ಅದನ್ನು ಮಕ್ಕಳ ಕೆಲಸ ಎನ್ನುತ್ತೇವೆ. ಆದ್ದರಿಂದ ಮಕ್ಕಳು ತಪ್ಪು ಮಾಡದಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಮನೆ ಹಾಗೂ ಶಾಲೆ ಎರಡರ ಪಾತ್ರವೂ ಮುಖ್ಯವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಬೇರೆ ಬೇರೆ ಅಡ್ಡದಾರಿಗಳಲ್ಲಿ ಹಿಡಿಯುವ ಸಂಭವ ಇರುವುದರಿಂದ ಹಾಗೂ ಮಕ್ಕಳನ್ನು ಸಾಗಣೆ ಮಾಡುವ ಜಾಲಗಳನ್ನು ತಪ್ಪಿಸುವತ್ತ ಚಿಂತನೆಗಳು ನಡೆಯಬೇಕಿದೆ ಎಂದರು.
ದಾನಿಗಳಾದ ಪಟೇಲ್, ಕಮಲೇಶ್ ಪಟೇಲ್, ಮುಖ್ಯ ಅತಿಥಿಗಳಾದ ನಳಿನಿ ರುಕ್ಮಾಂಗದ, ನೇತ್ರ, ಅರೆಗುಜ್ಜನಹಳ್ಳಿ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಸಿಹಿ ವಿತರಣೆ ಮಾಡಲಾಯಿತು. ವಿವಿಧ ಶಾಲೆಗಳ ಮುಖ್ಯಸ್ಥರು ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement