ಸಮಸ್ಯೆ ನೀಗಿಸಲು ನನ್ನನ್ನು ಗೆಲ್ಲಿಸಿ: ಚೌಡರೆಡ್ಡಿ ಮನವಿ
ಮಧುಗಿರಿ: ಶಿಕ್ಷಕರ ಮತ್ತು ಪದವೀಧರರ ಜ್ವಲಂತ ಸಮಸ್ಯೆ ಬಗೆಹರಿಸಲು ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಮುಖಂಡರು, ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಇದೇ ಕ್ಷೇತ್ರದಿಂದ 2 ಸಲ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದೇನೆ. ಶಿಕ್ಷಕರು ಮತ್ತು ಪದವೀಧರರ ಸೇವೆಗೆ ಸದಾ ಬದ್ಧ. ಮನಸ್ಸು ಮಾಡಿ ಈ ಬಾರಿ ನನ್ನ ಗೆಲವಿಗೆ ಪ್ರಾಮಾಣಿಕವಾಗಿ ಶ್ರಮಿಸಿ. ಬಳಿಕ ನಾನು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಮತಯಾಚಿಸಿದರು.
ಹಿರಿಯ ವಕೀಲ ಎಚ್.ಕೆ.ವಿ.ರೆಡ್ಡಿ ಮಾತನಾಡಿ, ಸರಳ, ಸಜ್ಜನ ಚೌಡರೆಡ್ಡಿ ಅವರ ಗೆಲವಿಗೆ ಎಲ್ಲ ಪದವೀಧರರು ಶ್ರಮಿಸಬೇಕು ಎಂದರು. ಕೆಲವು ಶಿಕ್ಷಕರು ಚೌಡರೆಡ್ಡಿ ಅವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿ ಮತಯಾಚಿಸಿದರು. ಕಾರ್ಯಾಕ್ರಮದಲ್ಲಿ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಪ್ರಾಂಶುಪಾಲ ಟಿ.ಗೋವಿಂದರಾಜು, ಉಪನ್ಯಾಸಕ ಎಚ್.ಸಿ.ನಾಗಭೂಷಣ್, ವಕೀಲ ಬಾಬುರಾಜ್ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ರಾಮಚಂದ್ರ ಸ್ವಾಗತಿಸಿ ವಂದಿಸಿದರು.