ಸಾವಯವ ಭಾಗ್ಯ ಯೋಜನೆ ಜಾರಿ
ತಿಪಟೂರು: ಸಾವಯವ ಕೃಷಿ ಪದ್ಧತಿಯ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ, ಸಾವಯವ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ತಾಲೂಕಿನ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಜಯಪ್ಪ ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಕಿಬ್ಬನಹಳ್ಳಿ, ನೊಣವಿನಕೆರೆ ಮತ್ತು ಕಸಬಾ ಹೋಬಳಿಗಳಲ್ಲಿ ಅನುಕ್ರಮವಾಗಿ ನ್ಯಾಕೇನಹಳ್ಳಿ, ಕನ್ನೂಘಟ್ಟ ಮತ್ತು ಹೊನ್ನೇನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆಯ ವತಿಯಿಂದ ಮೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಈ ಯೋಜನೆಯು ಮೂರು ವರ್ಷಗಳ ಕಾಲ ಸದರಿ ಗ್ರಾಮಗಳಲ್ಲಿ ಚಾಲನೆಯಲ್ಲಿರುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಆರ್ಡರ್ ಸರ್ಕಾರೇತರ ಸಂಸ್ಥೆಯ ಮೂಲಕ ಜಾರಿಗೊಳಿಸಲಾಗುತ್ತಿದೆ. ಪ್ರತಿ ಗ್ರಾಮಕ್ಕೆ ಒಬ್ಬ ಕ್ಷೇತ್ರ ಸಹಾಯಕ ಹಾಗೂ ಉಸ್ತುವಾರಿಗೆ ಒಬ್ಬ ಕ್ಷೇತ್ರಾಧಿಕಾರಿಯನ್ನು ನೇಮಿಸಲಾಗಿದೆ. ಇವರ ಕಾರ್ಯವನ್ನು ಸಂಬಂಧಪಟ್ಟ ಹೋಬಳಿ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಯೋಜನೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸೋಮೇಕಟ್ಟೆ ಚೆನ್ನವೀರಸ್ವಾಮಿ ಮಹತ್ವದ ಕವಿ
ತುಮಕೂರು: ತುಮಕೂರಿನ ಸೋಮೇಕಟ್ಟೆಯಲ್ಲಿ ಸುಮಾರು 17ನೇ ಶತಮಾನದಲ್ಲಿ ನೆಲೆಸಿದ್ದ ಚೆನ್ನವೀರಸ್ವಾಮಿ 25ಕ್ಕೂ ಹೆಚ್ಚು ಶರಣ ಸಾಹಿತ್ಯ ಕೃತಿಗಳನ್ನು ರಚಿಸಿದ ಮಹತ್ವಪೂರ್ಣ ಶರಣ ಕವಿ ಎಂದು ಆಯುರ್ವೇದಿಕ್ ವೈದ್ಯ ಹಾಗೂ ಸಂಶೋಧಕ ಡಾ. ಬಿ. ನಂಜುಂಡಸ್ವಾಮಿ ಹೇಳಿದರು.
ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ವಿದ್ಯಾವಾಹಿನಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ನಡೆದ 256 ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ತುಮಕೂರು ಸೋಮೇಕಟ್ಟೆ ಚೆನ್ನವೀರಸ್ವಾಮಿಗಳ ಸಾಹಿತ್ಯ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.
1981 ರಲ್ಲಿ ಸೋಮೇಕಟ್ಟೆ ಚೆನ್ನವೀರಸ್ವಾಮಿ ಅವರ ಹೆಸರು ಹಾಗೂ ಅವರ ಕೃತಿಗಳು ಲಿಂ. ಎಸ್. ಶಿವಣ್ಣ ಹಾಗೂ ಡಾ. ಸಾ.ಶಿ. ಮರುಳಯ್ಯರವರ ಪರಿಶ್ರಮದಿಂದ ತಿಪಟೂರು ತಾಲೂಕಿನ ಹೊನ್ನವಳ್ಳಿ ಮಠದಲ್ಲಿ ಬೆಳಕಿಗೆ ಬಂದವು. ಚೆನ್ನವೀರ ಸ್ವಾಮಿಯವರು ಗುರುಕರುಣಾಮೃತ, ಅಷ್ಟಾವರಣ ತ್ರಿವಿಧಿ, ಅಷ್ಟೋತ್ತರ ಶತಕಂಡ, ಬೈರವೇಶ್ವರನ ಪವಾಡ, ಆಚರಣೆ ತ್ರಿವಿಧಿ, ಶಿವಯೋಗಾನಂದ ತ್ರಿವಿಧಿ, ಚೆನ್ನಬಸವೇಶ್ವರನ ತ್ರಿವಿಧಿ, ಗುರುಚೆನ್ನಬಸವನ ರಗಳೆ, ಶರಣ ಚರಿತೆ, ಹರಗಣಂಗಳ ಚರಿತೆ, ಇಷ್ಟಲಿಂಗದ ಚರಿತ್ರೆ, ಮಂತ್ರ ಮಹತ್ವದ ರಗಳೆ ಮುಂತಾದ 25 ಕೃತಿಗಳನ್ನು ರಚಿಸಿದ್ದಾರೆ ಎಂದರು.
ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಕೆ. ಟಿ. ಸುಶೀಲ ಪ್ರಾರ್ಥಿಸಿದರು. ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿ ವಂದಿಸಿದರು. ಶಿರಾ ಲೋಕೇಶ್ ನಿರೂಪಿಸಿದರು.
ಜನರ ಹಕ್ಕುಗಳಿಗೆ ಗೌರವ ಜನಪ್ರತಿನಿಧಿಗಳ ಕರ್ತವ್ಯ: ಕೆ. ದೊರೈರಾಜ್
ತುಮಕೂರು: ಜನರ ಹಕ್ಕುಗಳನ್ನು ಗೌರವಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಚಿಂತಕ ಕೆ. ದೊರೈರಾಜು ಅಭಿಪ್ರಾಯಪಟ್ಟರು. ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸಫಾಯಿ ಕರ್ಮಚಾರಿ ಕಾವಲು ಸಮಿತಿಯಿಂದ ಪಿ.ಕೆ.ಎಸ್ ಕಾಲೋನಿಯ ನಗರ ವಂಚಿತ ಯುವ ಜನಸಂಪನ್ಮೂಲ ಕೇಂದ್ರದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಜನೆಗಳು ಸದ್ಬಳಕೆಯಾಗದಂತೆ, ವ್ಯವಸ್ಥೆಯಲ್ಲಿ ಜನರನ್ನು ಮೋಸ ಮಾಡುವ ತಂತ್ರ ಹಿಂದಿನಿಂದಲೂ ಇದ್ದು, ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಭಾರತದಾದ್ಯಂತ ಚಾಲ್ತಿಯಾಲ್ಲಿದೆ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಯೋಜನೆ ಬಗ್ಗೆ ಜನರೊಂದಿಗೆ ಚರ್ಚಿಸಿ, ಅವರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಬೇಕು ಎಂದರು.ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಸಂಚಾಲಕ ಓಬಳೇಶ್ ಮಾತನಾಡಿದರು. ಶಿಬಿರದಲ್ಲಿ ದಲಿತ ಕಾಲೋನಿಗಳಲ್ಲಿ ಮತ್ತು ಜಿಲ್ಲೆಯ ದಲಿತ ಕೇರಿಗಳಲ್ಲಿ ಯೋಜನೆ ಮತ್ತು ಕಾಯ್ದೆ ಬಗ್ಗೆ ಕಿರು ಹೊತ್ತಗೆ ಮುಖಾಂತರ ಸಮುದಾಯಗಳನ್ನು ಜಾಗೃತಿಗೊಳಿಸಲು ಒಮ್ಮತಕ್ಕೆ ಬರಲಾಯಿತು.
ಕೊರಟೆಗೆರ ತಾಲೂಕು ಮತಗಟ್ಟೆ ಸಂಖ್ಯೆ 55
ಕೊರಟಗೆರೆ: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಜೂ.20ರಂದು ನಡೆಯಲಿರುವ ಮತದಾನಕ್ಕಾಗಿ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಮತಗಟ್ಟೆ ತೆರೆಯಲಾಗಿದೆ. ಕೊರಟಗೆರೆ ತಾಲೂಕಿನ ಮತಗಟ್ಟೆ ಸಂಖ್ಯೆ 55. ಮತದಾರರ ಪಟ್ಟಿಯ ಭಾಗದ ಸಂಖ್ಯೆ 24 ಮತ್ತು ಕೊರಟಗೆರೆ ಕೊಠಡಿ ಸಂಖ್ಯೆ 11 ಎಂದು ತಹಸೀಲ್ದಾರ್ ಡಿ.ಕೆ.ರಾಮಚಂದ್ರಪ್ಪ ತಿಳಿಸಿದ್ದಾರೆ. ಅಲ್ಲದೆ ತಾಲೂಕು ಕಚೇರಿಯಲ್ಲಿ ಪದವೀಧರ ಮತದಾರರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಪದವೀಧರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ 08138-232153 ಸಂಪರ್ಕಿಸಬಹುದು.
ಮಾತೃ ವಂದನಾ ಕಾರ್ಯಕ್ರಮ ಇಂದು
ತುಮಕೂರು: ಇಲ್ಲಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜೂ.16 ರಂದು ಬೆಳಿಗ್ಗೆ 11.30ಕ್ಕೆ ಡಾ. ಸೂಲಗಿತ್ತಿ ನರಸಮ್ಮನವರ 94ನೇ ಜನ್ಮದಿನ ಪ್ರಯುಕ್ತ ಮಾತೃ ವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಂಸದ ಮುದ್ದಹನುಮೇಗೌಡ ವಹಿಸಲಿದ್ದಾರೆ. ಚಿತ್ರದುರ್ಗ ಸಂಸದ ಬಿ.ಎನ್. ಚಂದ್ರಪ್ಪ ಅಭಿನಂದಿಸಲಿದ್ದಾರೆ. ಪುಸ್ತಕವನ್ನು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರೊ. ರಾಜಾಸಾಬ್, ಪಿಚ್ಚಹಳ್ಳಿ ಶ್ರೀನಿವಾಸ್, ಡಾ. ಸಿ.ಸೋಮಶೇಖರ್, ಡಾ. ಆರ್. ರಾಜು, ಅನ್ನಪೂರ್ಣ ವೆಂಕಟನಂಜಪ್ಪ, ಕವಿತಾಕೃಷ್ಣ, ಪದ್ಮಪ್ರಸಾದ್ ಉಪಸ್ಥಿತರಿರುವರು.
ಹಳ್ಳಿಗಳಲ್ಲಿರುವ ಗುಂಪುಗಾರಿಕೆ ತಪ್ಪಿಸಿ: ಯಾದವ ಶ್ರೀ
ಚಿಕ್ಕನಾಯಕನಹಳ್ಳಿ: ಅಭಿವೃದ್ಧಿ ಹೊಂದಿರುವ ಮಠಮಾನ್ಯಗಳಿರುವ ಸಮಾಜ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿವೆ ಎಂದು ಚಿತ್ರದುರ್ಗದ ಅಖಿಲ ಭಾರತ ಯಾದವ ಸಂಸ್ಥಾನ ಮಠದ ಶ್ರೀಯಾದವಾನಂದ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇಂದು ಸಮಾಜದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿದ್ದು ಸಣ್ಣಪುಟ್ಟ ಜಾತಿಗಳು ಮಸುಕಾಗಿವೆ. ರಾಜಕೀಯ ಸ್ಥಾನಮಾನ ಪಡೆಯುವಲ್ಲಿ ಪ್ರಬಲ ಕೋಮುಗಳು ಶಕ್ತವಾಗಿವೆ. ಜನಾಂಗ ಉದ್ಧಾರವಾಗಬೇಕಾದರೆ ಹಳ್ಳಿಗಳಲ್ಲಿರುವ ಗುಂಪುಗಾರಿಕೆ ತಪ್ಪಿಸಿ ಎಂದರು.
ಪಾಠ ಕಲಿಸಿ: ಹೊಳಲು ಮಾಸಪತ್ರಿಕೆ ಸಂಪಾಕರಾದ ರಾಮಲಿಂಗಾರೆಡ್ಡಿ ಮಾತನಾಡಿ ಅಸಂಘಟಿತವಾದ ನಮ್ಮ ಸಮಾಜದ ದೌರ್ಬಲ್ಯವನ್ನು ಉಯೋಗಿಸಿಕೊಂಡು, ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಜನಾಂಗದ ಅಭ್ಯರ್ಥಿಗೆ ಕೈಕೊಟ್ಟವರಿಗೆ ಮುಂಬರುವ ಚುನಾವಣೆಗಳಲ್ಲಿ ನಾವು ಸಂಘಟಿತರಾಗುವ ಮೂಲಕ ಪಾಠಕಲಿಸಬೇಕಿದೆ ಎಂದರು
ತಾಲೂಕು ಯಾದವ ಮುಖಂಡರಾದ ವಾಸುದೇವ್, ಹರಳಕಟ್ಟೆ ಶಿವಣ್ಣ ಮಾತನಾಡಿ ಯಾದವರು ಶೋಷಿತ ವರ್ಗಕ್ಕೆ ಸೇರಿದ್ದು, ಜಾತೀಯತೆ ತೊಲಗಲು ಇಡೀ ಸಮಾಜ ಮನಪರಿವರ್ತನೆ ಮಾಡಬೇಕಿದೆ ಎಂದರು.
ಯಾದವ ಯುವಸೇನೆಯ ರಾಜ್ಯಾಧ್ಯಕ್ಷರಾದ ಅಮ್ಮನಹಟ್ಟಿ ಹರೀಶ್ಯಾದವಸಿಂಹ, ತೀರ್ಥಪುರ ವಾಸುದೇವ್, ಹರಳಕಟ್ಟೆ ಶಿವಣ್ಣ, ಭರತ್ ಯಾದವ್, ಧರಣೀಶ್ ಯಾದವ್, ಬಾಲುಯಾದವ್, ಶಂಕರ್, ರಾಜ್ಯ ಸಂಚಾಲಕರಾದ ವಸಂತಕುಮಾರ್ ಮುಂತಾದವರು ಭಾಗವಹಿಸಿದ್ದರು.