ಅರಿವನ್ನೇ ಗುರುವನ್ನಾಗಿಸಿಕೊಂಡು ಗುರಿ ಮುಟ್ಟಬೇಕು: ಶಿವಾಚಾರ್ಯ
ತುಮಕೂರು: ವಿದ್ಯಾರ್ಥಿಗಳಿಗೆ ಗುರಿಯಿರಬೇಕು. ಸದಾ ಸಾಧನೆ ಹಾದಿಯ ಚಿಂತನೆಯಲ್ಲಿ ತೊಡಗಬೇಕು. ಅರಿವನ್ನೇ ಗುರುವನ್ನಾಗಿಸಿಕೊಂಡು ಗುರಿಮುಟ್ಟಬೇಕು ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಶಾಖಾಮಠದ ಅಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ನಗರದ ವಿದ್ಯಾವಾಹಿನಿ ಪದವಿಪೂರ್ವ ಕಾಲೇಜಿನಲ್ಲಿ 2014-15ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ಸ್ವಾಗತ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯಾವ ವಿದ್ಯಾರ್ಥಿಗೆ ಓದುವುದರಲ್ಲಿ ವಿಶ್ವಾಸವಿರುವುದಿಲ್ಲವೋ ಅವನು ಏನನ್ನೂ ಸಾಧಿಸಲಾರ. ಹಾಗಾಗಿ ಓದಿನಲ್ಲಿ ವಿಶ್ವಾಸವಿಟ್ಟು, ಸಮರ್ಥ ಗುರುವನ್ನು ಆಯ್ಕೆಮಾಡಿಕೊಂಡು ವಿದ್ಯೆಯನ್ನು ಕಲಿಯಬೇಕು ಎಂದರು.
ನಿವೃತ್ತ ಎಸಿಪಿ ಹಾಗೂ ರಾಜ್ಯ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಸುಬ್ಬಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾಸ್ಯಕಲಾವಿದ ರಿಚರ್ಡ್ ಮಾತನಾಡಿದರು. ಸಂಸ್ಥೆ ಸಂಸ್ಥಾಪಕ ಹಾಗೂ ಅಧ್ಯಕ್ಷ ಕೆ.ಬಿ.ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್ ಮಾತನಾಡಿದರು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದ ವಿಜ್ಞಾನ ವಿಭಾಗದ ಹರ್ಷಿತಾ ಬಿ.ಎನ್. ಗೌಡ, ವಾಣಿಜ್ಯ ವಿಭಾಗದ ನಿತಿನ್ ಆರ್. ವಸಿಷ್ಠ, ಕಲಾ ವಿಭಾಗದ ರಚನಾ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ಪ್ರೋತ್ಸಾಹಧನ, ಸ್ವರ್ಣಪದಕ ನೀಡಿ ಗೌರವಿಸಲಾಯಿತು. ನಯನ ಮತ್ತು ನಮನ ಪ್ರಾರ್ಥಿಸಿ, ಪ್ರಾಚಾರ್ಯ ಸಿ.ಶಿವಣ್ಣ ಸ್ವಾಗತಿಸಿ, ಎನ್. ಗಂಗಾಧರ್ ಪ್ರತಿಜ್ಞಾವಿಧಿ ಬೋಧಿಸಿ, ಮಹೇಶ್ಚಂದ್ರ ಸಿ.ಜಿ. ಮತ್ತು ರಾಜಶೇಖರ ಜೆ.ಎಲ್. ನಿರೂಪಿಸಿ, ಟಿ.ಆರ್. ಮಹೇಶ್ವರಪ್ಪ ವಂದಿಸಿದರು.