ಆಗ್ನೇಯ ಪದವೀಧರ ಚುನಾವಣೆ ಚರುಕು
-ಉಗಮ ಶ್ರೀನಿವಾಸ್
ತುಮಕೂರು: ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಕಾವು ದಿನೇ ದಿನೇ ಏರುತ್ತಿದೆ.
ಬಿಜೆಪಿಯಿಂದ ಹಾಲಿ ಎಂಎಲ್ಸಿ ಶಿವಯೋಗಿಸ್ವಾವು, ಜೆಡಿಎಸ್ನಿಂದ ಕಳೆದ ಸಾಲಿನಲ್ಲಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಚೌಡರೆಡ್ಡಿ ಹಾಗೂ ಕಾಂಗ್ರೆಸ್ನಿಂದ ಮುರುಗೇಂದ್ರಪ್ಪ ಸ್ಪರ್ಧಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರ ಮೊದಲಿನಿಂದಲೂ ಬಿಜೆಪಿ ಭದ್ರಕೋಟೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮಲ್ಲಿಕಾರ್ಜುನಯ್ಯ ನಾಲ್ಕು ಬಾರಿ ಜಯಶಾಲಿಯಾಗಿದ್ದರು. ಹಾಲಿ ಬಿಜೆಪಿ ಎಂಎಲ್ಸಿ ಶಿವಯೋಗಿ ಸ್ವಾಮಿ 2 ಬಾರಿ ಜಯಗಳಿಸಿದ್ದರೆ, ಕರಂಬಳ್ಳಿ ಸಂಜೀವಶೆಟ್ಟಿ ಅವರು ಒಂದು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ದಾವಣಗೆರೆಯ ಶಿವಶಂಕರ್ ಜನತಾದಳದಿಂದ ಒಂದು ಬಾರಿ ಆಯ್ಕೆಯಾಗಿದ್ದು, ಬಿಟ್ಟರೆ ಮಿಕ್ಕೆಲ್ಲಾ ಚುನಾವಣೆಯಲ್ಲೂ ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಪಾಲಾಗಿದೆ.
ಶಿವಯೋಗಿಸ್ವಾವು ಈಗ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬೇರೆಲ್ಲಾ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪ್ರಚಾರದ ದೃಷ್ಟಿಯಿಂದ ಜೋರಾಗಿದೆ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ರೇಲ್ವೆ ಸಚಿವ ಸದಾನಂದಗೌಡ, ಮಾಜಿ ಸಚಿವರ ದೊಡ್ಡ ದಂಡೇ ತುಮಕೂರಿಗೆ ಪ್ರಚಾರಕ್ಕೆ ಆಗಮಿಸಿದೆ.
ಈ ಎಲ್ಲಾ 5 ಜಿಲ್ಲೆಗಳಿಂದ 97,805 ಮತದಾರರಿದ್ದಾರೆ. ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕೀರ್ತಿ ತುಮಕೂರಿಗೆ ಲಭಿಸಿದರೆ, ಅತಿ ಕಡಿಮೆ ಮತದಾರರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 28,635 ಮತದಾರರಿದ್ದರೆ, ಕೋಲಾರದಲ್ಲಿ 15328, ಚಿಕ್ಕಬಳ್ಳಾಪುರದಲ್ಲಿ 10304, ಚಿತ್ರದುರ್ಗದಲ್ಲಿ 15998 ಹಾಗೂ ದಾವಣಗೆರೆಯಲ್ಲಿ 27503. ಒಟ್ಟು ಮತದಾರರ ಪೈಕಿ ಶೇ.45ಕ್ಕೂ ಹೆಚ್ಚು ಶಿಕ್ಷಕರೇ ಇದ್ದಾರೆ. ಮತದಾರರ ಸಂಖ್ಯೆ 1 ಲಕ್ಷ ಗಡಿ ದಾಟುವ ಅಂದಾಜಿದೆ.
ಈ ಮೊದಲು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಾಲ್ಕು ಜಿಲ್ಲೆಗಳು ಬರುತ್ತಿದ್ದವು. ಆದರೆ ಈ ಬಾರಿ ಚಿಕ್ಕಬಳ್ಳಾಪುರವನ್ನು ಸೇರಿಸಲಾಗಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಆಗ್ನೇಯ ಪದವೀಧರ ಕ್ಷೇತ್ರವನ್ನು ಕಿತ್ತುಕೊಳ್ಳಲು ಜೆಡಿಎಸ್ ಹಾಗೂ ಕಾಂಗ್ರೆಸ್ ತಂತ್ರ ರೂಪಿಸುತ್ತಿವೆ. ಇದೇ ತಿಂಗಳ 20 ರಂದು ನಡೆಯಲಿರುವ ಚುನಾವಣೆಯಲ್ಲಿ ಈಗಾಗಲೇ ಬಿರುಸಿನ ಕಾವು ಪಡೆದುಕೊಳ್ಳುತ್ತಿದೆ. ಈಗಾಗಲೇ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಜಿಲ್ಲೆಯಲ್ಲಿ ಕೇವಲ 1 ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿರುವ ಬಿಜೆಪಿಗೆ ಈ ಚುನಾವಣೆ ಗೆದ್ದು ಬಿಜೆಪಿ ಕೋಟೆ ಎಂಬುದನ್ನು ಸಾಬೀತುಪಡಿಸಬೇಕಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಲೋಕಸಭಾ ಸದಸ್ಯರು ಹಾಗೂ ತುಮಕೂರು ನಗರ ಶಾಸಕರು ಕಾಂಗ್ರೆಸ್ಸಿಗರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಖಾತೆ ತೆರೆಯದ ಕಾಂಗ್ರೆಸ್ ಈ ಬಾರಿಯಾದರೂ ಗೆಲುವು ಸಾಧಿಸಲಿದೆಯೇ ಎಂಬ ಕುತೂಹಲವಿದೆ. ಇನ್ನು ಸ್ಥಳೀಯ ಸಂಸ್ಥೆಗಳಲ್ಲಿ ಗಣನೀಯ ಸಾಧನೆ ಮಾಡಿರುವ ಜೆಡಿಎಸ್ ಗೆಲುವು ಸಾಧಿಸುತ್ತಿದೆಯೇ ಎಂಬುದಕ್ಕೆ ಇದೇ ತಿಂಗಳ 20 ರವರೆಗೂ ಕಾಯಬೇಕು.