ದಲಿತರಿಗೆ ಇನ್ನೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ವೆಂಕಟಗಿರಿಯಯ್ಯ
ಶಿರಾ: ಈ ದೇಶದ ಮೂಲ ನಿವಾಸಿಗಳಾಗಿ ಸಿಂಧೂ ನಾಗರಿಕತೆಯ ಮೊಮ್ಮಕ್ಕಳಾಗಿರುವ ನಮಗೆ 21ನೇ ಶತಮಾನ ಕಳೆದರೂ ದಲಿತರಿಗೆ ಇನ್ನೂ ಸಾಮಾಜಿಕ ಸಮಾನತೆ ನ್ಯಾಯ ದೊರಕದಿರುವುದು ವಿಷಾದನೀಯ ಸಂಗತಿ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸಂಚಾಲಕ ವೆಂಕಟಗಿರಿಯಯ್ಯ ಹೇಳಿದರು. ಶಿರಾ ನಗರದ ಕೋಟೆ ಕೆರೆಹಿಂದಲಹಟ್ಟಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ನಗರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಅವ್ವ ಸಂಸ್ಕೃತಿ ದಲಿತರದ್ದು. ಅವ್ವ ಸಂಸ್ಕೃತಿ ಎಂದರೆ ಸಮಾನವಾಗಿ ಹಂಚಿಕೊಂಡು ಬದುಕುವ ಸಂಸ್ಕೃತಿಯಾಗಿದೆ. ಆದರೆ ಇಷ್ಟು ವರ್ಷ ಸಮಾಜದ, ದೇಶದ ಸೇವೆ ಮಾಡುತ್ತಿರುವ ನಮಗೆ ಇನ್ನೂ ಸಮಾಜ ನಮ್ಮನ್ನು ನೀವು ನಮ್ಮಂತೆಯೇ ಎಂದು ಹಂಚಿಕೊಂಡು ಬಾಳುತ್ತಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ದಸಂಸ ಸಂಚಾಲಕ ಟೈರ್ ರಂಗನಾಥ್ ವಹಿಸಿದ್ದರು. ಸರಿತಾ ರವಿಕುಮಾರ್, ಬೆಲ್ಲದಮಡು ಭರತ್ಕುಮಾರ್, ತಿಪ್ಪೇಸ್ವಾಮಿ, ಶೀಬಿ ರಂಗಯ್ಯ, ಕೆ.ಮಂಜುನಾಥ್, ರಾಜು, ಸುರೇಶ್ ಇದ್ದರು.