ಅಂಗನವಾಡಿ ಕೇಂದ್ರಗಳಿಗೆ ಮುಗ್ಗಲು ಅಕ್ಕಿ, ಗೋಧಿ ಹಿಟ್ಟು ಸರಬರಾಜು
ಹುಳಿಯಾರು: ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಅಕ್ಕಿ, ಗೋಧಿ ಹಿಟ್ಟು, ಕಡಲೇ ಬೀಜ, ಹೆಸರು ಬೇಳೆ ಸೇರಿದಂತೆ ಇತರೆ ವಸ್ತುಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಅವುಗಳನ್ನೇ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ
ಎಂ.ಎಸ್.ಪಿ.ಸಿ ಸಂಸ್ಥೆಯ ಸಹಯೋಗದಲ್ಲಿ ಕೆ.ಬಿ.ಕ್ರಾಸ್ನಲ್ಲಿರುವ ಘಟಕಕ್ಕೆ ತಾ.ಪಂ.ಅಧ್ಯಕ್ಷ ನವೀನ್, ಇಓ ಕೃಷ್ಣನಾಯಕ್, ಎಡಿಪಿ ರವೀಂದ್ರಕುಮಾರ್ ದಿಢೀರ್ ಭೇಟಿ ನೀಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಕಿಬ್ಬನಹಳ್ಳಿ ಕ್ರಾಸ್ನಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸೇರಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಗ್ಗಲು ಬಂದ ಅಕ್ಕಿ, ಕಪ್ಪು ಹುಳುಗಳಿಂದ ಕೂಡಿದ ಗೋಧಿಹಿಟ್ಟು, ಹೆಸರು ಬೇಳೆಗಳನ್ನೇ ಪ್ಯಾಕ್ ಮಾಡಿ ಅಂಗನವಾಡಿಗಳಿಗೆ ಕಳುಹಿಸುತ್ತಿದ್ದಾರೆ. ಮಕ್ಕಳು, ಬಾಣಂತಿಯರಿಗೆ ಅಂಗನವಾಡಿ ಕೇಂದ್ರದ ಮೂಲಕ ಉತ್ತಮ ಪೌಷ್ಟಿಕ ಆಹಾರ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಾಗರೂಕತೆಯಿಂದ ಕಾರ್ಯ ನಿರ್ವಹಿಸದೇ ಕಳಪೆ ಗುಣಮಟ್ಟದ ಆಹಾರ
ಪದಾರ್ಥಗಳನ್ನು ಕೊಂಡುತಂದು ಅವುಗಳನ್ನೇ ಅಂಗನವಾಡಿಗಳಿಗೆ ಕಳುಹಿಸುತ್ತಿರುವ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ. ಕಳಪೆ ಆಹಾರ ಸೇವನೆಯ ಪರಿಣಾಮ ಮಕ್ಕಳ ಬೆಳವಣಿಗೆಯಲ್ಲಿ
ಕುಂಟಿತವಾಗುವುದಲ್ಲದೆ, ಅಪೌಷ್ಟಿಕತೆಯಿಂದ ಬಳಲಿ ಅನಾರೋಗ್ಯಕ್ಕೆ ತುತ್ತಾಗುವಂತ ಪರಿಸ್ಥಿತಿ ಎದುರಾಗುತ್ತದೆ ಎಂದು ತಿಳಿಸಿದರು. ಕೆ.ಬಿ.ಕ್ರಾಸ್ ಘಟಕಕ್ಕೆ ಬರುವ ಅಕ್ಕಿ, ಗೋಧಿ, ಹೆಸರು ಸೇರಿದಂತೆ ಇತರೆ ಬೇಳೆಕಾಳುಗಳ ಚೀಲದ ತೂಕದಲ್ಲೂ ವ್ಯತ್ಯಾಸವಿದ್ದು, 50 ಕೆಜಿ ಇರಬೇಕಾದ ಚೀಲಗಳು 49 ಕೆಜಿ ತೂಗುತ್ತಿರುವುದು ಈ ಸಂದರ್ಭದಲ್ಲಿ
ಬೆಳಕಿಗೆ ಬಂದಿದೆ. ಇಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸ್ವಸಹಾಯ ಸಂಘದ ಕೆಲಸಗಾರರಿಗೆ ಪಿಎಸ್, ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಎಂಎಸ್ಪಿಸಿ ಸಂಸ್ಥೆ ನೀಡಿಲ್ಲ ಎಂದರು. ಈ ಸಂದರ್ಭದಲ್ಲಿ ತಾ.ಪಂ. ಸದಸ್ಯರಾದ ನಿರಂಜನ್ ಮೂರ್ತಿ, ಸೀತಾರಾಂ ಇದ್ದರು.
ಇಂದು ವಿಜ್ಞಾನ ಕಾಲೇಜು ವಾರ್ಷಿಕೋತ್ಸವ
ತುಮಕೂರು: ತುಮಕೂರು ವಿವಿ ವಿಜ್ಞಾನ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಮಾ. 4 ರಂದು ಬೆಳಗ್ಗೆ 10-30 ಕ್ಕೆ ತುಮಕೂರು ವಿವಿ ಸಭಾಂಗಣದಲ್ಲಿ ಏರ್ಪಾಟಾಗಿದೆ. ಸಮಾರಂಭವನ್ನು ವಿವಿ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಉದ್ಘಾಟಿಸಲಿದ್ದಾರೆ. ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ, ಪರೀಕ್ಷಾಂಗ ಕುಲಸಚಿವ ಡಾ.ಎನ್.ಬಿ. ನಡುವಿನಮನಿ, ಉಪಪ್ರಾಂಶುಪಾಲೆ ರತ್ನಕುಮಾರಿ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ರಂಗಕರ್ಮಿ, ಕಿರುತೆರೆ ಕಲಾವಿದ ಗುಬ್ಬಿ ಪ್ರಕಾಶ್ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ವಿವಿ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ. ಎಚ್.ವೈ.ಈಶ್ವರ ವಹಿಸಲಿದ್ದಾರೆ.
ಬಸ್ ಡಿಕ್ಕಿ: ಮಹಿಳೆ ಕೈ ತುಂಡು
ಗುಬ್ಬಿ: ದ್ವಿಚಕ್ರ ವಾಹನಕ್ಕೆ ಕಾಲೇಜು ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಪತಿಯೊಂದಿಗೆ ಹೋಗುತ್ತಿದ್ದ ಮಹಿಳೆಯ ಕೈ ತುಂಡಾದ ಘಟನೆ ಇಂದು ಸಂಭವಿಸಿದೆ. ಗುಬ್ಬಿ ತಾಲೂಕಿನ ಕಗ್ಗೇನಹಳ್ಳಿ ನಿವಾಸಿ ಲಕ್ಷ್ಮಮ್ಮ (60) ಕೈ ಕಳೆದುಕೊಂಡವರು. ಇಂದು ಸಂತೆಯಿದ್ದು ಗಂಡ ಬೈರಪ್ಪ ಅವರೊಂದಿಗೆ ಟಿವಿಎಸ್ ವಾಹನದಲ್ಲಿ ಗುಬ್ಬಿಯ ಸಂತೆಗೆ ಬರುತ್ತಿದ್ದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಚನ್ನಬಸವೇಶ್ವರ ತಾಂತ್ರಿಕ ವಿದ್ಯಾಲಯದ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಹಿಂಬದಿಯಲ್ಲಿ ಕುಳಿತಿದ್ದ ಲಕ್ಷ್ಮಮ್ಮ ಕೆಳಗೆ ಬಿದ್ದಿದ್ದು ಬಲ ಕೈ ತುಂಡಾಗಿದೆ. ಕೂಡಲೇ ಅವರನ್ನು ತುಮಕೂರು ಖಾಸಗಿ ಆಸ್ವತ್ರೆಗೆ ದಾಖಲು ಮಾಡಲಾಗಿದೆ.