ಕರ್ನಾಟಕದಲ್ಲಿ ಮೋದಿ ಪ್ರಭಾವ ಇಲ್ಲ
ಕ.ಪ್ರ. ವಾರ್ತೆ ಮಧುಗಿರಿ ಮಾ.3
ಕರ್ನಾಟಕದಲ್ಲಿ ಮೋದಿ ಪ್ರಭಾವ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಮಧುಗಿರಿ ವಿಧಾನಸಬಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಆರೋಗ್ಯ ತಪಸಣಾ ಶಿಬಿರ ಮತ್ತು ಎಂ.ಎಸ್.ರಾಮಯ್ಯ ಸ್ಮಾರಕ ಭವನ ಉದ್ಘಾಟಿಸಿದ ನಂತರ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯರ್ಕರ ಮತ್ತು ಅಭಿಮಾನಿಗಳ
ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಬಿಜೆಪಿ ನಾಯಕರು ಭ್ರಷ್ಟಾಚಾರ ಎಸಗಿದ ಪರಿಣಾಮ ಜನರಿಗೆ ಮುಖ ತೋರಿಸಲಾಗದೇ ಮೋದಿ ಮುಂದಿಟ್ಟು ಕೊಂಡು ಓಡಾಡುತ್ತಿದ್ದಾರೆ. ಮೋದಿ ಕೂಡ ಪ್ರಧಾನಿ ಆಗಿದ್ದೇನೆ ಎಂಬ ಭ್ರಮೆಯಲ್ಲಿ ಮುಳುಗಿದ್ದಾರೆ. ಆದರೆ ರಾಜ್ಯದಲ್ಲಿ ಮೋದಿ ಆಟ ನಡೆಯಲ್ಲ, ಇನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರು ಸುಳ್ಳು ಹೇಳುವಲ್ಲಿ ನಿಸ್ಸೀಮರು. ದೇವರ ಹೆಸರಲ್ಲಿ ಸಮಾಜ ಒಡೆದು ನೂಚ್ಚು ನೂರು ಮಾಡುವ
ಶ್ರೀಮಂತರ, ಮೇಲ್ವರ್ಗದ ಜನರ ಪರವಾಗಿ ಕೆಲಸ ಮಾಡುವ ಪಕ್ಷ ಬಿಜೆಪಿ, ಕಳೆದ ಸಲ ಮೋದಿ ಎಲ್ಲೆಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರೋ ಅಲ್ಲೆಲ್ಲ ಬಿಜೆಪಿ ನೆಲ ಕಚ್ಚಿ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಿದೆ. ಜನತೆ ಕೂಡ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ನಿಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.
ಜೆಡಿಎಸ್ ಲೆಕ್ಕಕ್ಕಿಲ್ಲ: ಇನ್ನು ಜೆಡಿಎಸ್ ಅಪ್ಪ-ಮಕ್ಕಳ ಪಾರ್ಟಿ. ಆಟಕ್ಕೂಂಟು ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಒಂದೇ ಎಲ್ಲ ಜನರನ್ನು ಒಗ್ಗೂಡಿಸಿ ಕೊಂಡುಹೋಗುವ ಜಾತ್ಯತೀತ ಪಕ್ಷ, ಹಾಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಆಯ್ಕೆ ಮಾಡಿ ಕಳಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಹಸಿವು ಮುಕ್ತ ರಾಜ್ಯವನ್ನಾಗಿಸಬೇಕು ಎಂಬ ದೃಷ್ಟಿಯಿಂದ ನಾನು ಸಿಎಂ ಆದ ಕೂಡಲೇ ಎಲ್ಲ ವರ್ಗದ ಬಡವರಿಗೆ ಅಕ್ಕಿ ಕೊಟ್ಟೆವು. ಮುಂದೆ ರಾಗಿ, ಗೋಧಿ ವಿತರಿಸುತ್ತೇವೆ. ಉತ್ತರ ಕರ್ನಾಟಕದ ಜನತೆಗೆ ಜೋಳ ಕೊಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಿದವು.
ಸಂಸತ್ ಚುನಾವಣೆ ರಾಜ್ಯ ಸರ್ಕಾರಕ್ಕೆ ಜನಾದೇಶವಲ್ಲ
ತುಮಕೂರು: ಲೋಕಸಭಾ ಚುನಾವಣಾ ಫಲಿತಾಂಶ ನಮ್ಮ ಸರ್ಕಾರಕ್ಕೆ ಜನಾದೇಶವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಮಧುಗಿರಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಸರ್ಕಾರ ಬಂದು 9 ತಿಂಗಳಾಗಿವೆ. ಆದರೂ ಬಹುತೇಕ ಎಲ್ಲಾ ಭರವಸೆ ಈಡೇರಿಸಿದ್ದೇನೆ ಎಂದರು. ಎತ್ತಿನಹೊಳೆ ಯೋಜನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ. ಈ ಯೋಜನೆಯಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೇವಲ ಕೆಲವೇ ಟಿಎಂಸಿ ನೀರನ್ನು ಮಾತ್ರ ತೆಗೆದುಕೊಂಡು ಹೋಗುತ್ತೇವೆ ಎಂದರು. ಪರಿಶಿಷ್ಟ ಜಾತಿಯ ಜನರಿಗೆ ಶೇ. 80 ರಷ್ಟು ನೆರವು ನೀಡಿದ್ದೇವೆ. ಎಡ, ಬಲ, ಬೋವಿ ಅಂತಾ ಜಾತಿ ಆಧಾರದ ಮೇಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮಧುಗಿರಿಗೂ ನೀರು
ಎತ್ತಿನ ಹೊಳೆ ಯೋಜನೆಗೆ 12 ಸಾವಿರದ 912 ಕೋಟಿ ರು.ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದು ಬರುವ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ ಸಿದ್ದರಾಮಯ್ಯ ಈ ನೀರನ್ನು ಮಧುಗಿರಿ ಜನತೆಗೂ ಕೊಡುವದಲ್ಲದೆ ತಾಲೂಕಿನ 45 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸಿ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ಶಾಸಕ ಕೆ.ಎನ್.ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ ಸಿದ್ದರಾಮಯ್ಯ ನುಡಿದಂತೆ ನಡೆವ ವ್ಯಕ್ತಿ.ಎಲ್ಲ ವರ್ಗದ ಜನರ ಬಗ್ಗೆ ಕಾಳಜಿ ಉಳ್ಳವರಾಗಿದ್ದು ಬರುವ ಲೋಕಸಭಾ ಚುನಾವಣೆಯಲ್ಲಿ ಸಿಎಂ ಕೈ ಬಲಪಡಿಸುವಂತೆ ಕರೆ ನೀಡಿದರು. ಕೇಂದ್ರ ಸಚಿವ ಮುನಿಯಪ್ಪ,ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಾಮು, ಮಾಜಿ ಮಂತ್ರಿ ವೆಂಕಟರಮಣಪ್ಪ, ಜಿಲ್ಲಾಧ್ಯಕ್ಷ ಷಫೀ ಅಹಮದ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ, ಜಿ.ಪಂ.ಸದಸ್ಯೆ ಎಚ್.ಕಂಚಮಾರಯ್ಯ, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಜಿ.ಪಂ. ಸದಸ್ಯೆ ಎಚ್.ಕಂಚಮಾರಯ್ಯ, ಶಾಂತಲಾ ರಾಜಣ್ಣ, ಸುಮನ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ರಾಜ್‌ಗೋಪಾಲ್, ಪಿಸಿಕೆ ರೆಡ್ಡಿ, ರಾಧೇಶ್ಯಾಮ್, ಎಂ.ಆರ್. ಜಗನ್ನಾಥ್,ಚಿಕ್ಕಣ್ಣ, ಸತ್ಯನಾರಾಯಣ ಹಾಗೂ ಕಾಂಗ್ರೆಸ್ ಎಲ್ಲ ಹಂತದ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.