ಜನರ ಸಮಸ್ಯೆ ನಿವಾರಿಸುವುದೇ ನನ್ನ ಉದ್ದೇಶ
ಕ.ಪ್ರ.ವಾರ್ತೆ ಕುಣಿಗಲ್ ಮಾ.3
ಕೇವಲ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ. ನನ್ನ ರಾಜಕಾರಣ ಏನಿದ್ದರೂ ಜನಪರ, ಜನತೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸುವ ಪರವಾಗಿದೆ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಸೋಮವಾರ, ತಾಲೂಕಿನ ವಿವಿದೆಡೆಯಲ್ಲಿ ಪಿಎಂಜಿಎಸ್ವೈ ಯೋಜನೆಯ 7ಕೋಟಿ ವೆಚ್ಚದಲ್ಲಿ 12 ಕಿಮಿ ಚಿಕ್ಕೋನಹಳ್ಳಿಗೇಟ್ನಿಂದ ಅಂಕನಹಳ್ಳಿಮಠ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ 2 ನೇಹಂತದಲ್ಲಿ ಒಟ್ಟಾರೆ 23 ಕೋಟಿ ರು.ವೆಚ್ಚದಲ್ಲಿ, ರಾಮನಗರ-ಅನಂತಪುರ ರಾಜ್ಯ ಹೆದ್ದಾರಿಯ 30 ಕಿಮಿ, ಮಾಗಡಿಗಡಿಯಿಂದ ಹುಲಿಯೂರುದುರ್ಗ-ಉಂಗ್ರ-ಯಡವಾಣಿ 23 ಕಿಮಿ ಒಟ್ಟು 55ಕಿಮಿ ರಾಜ್ಯ ಹೆದ್ದಾರಿಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಶಾಸಕನಾಗಿ ಅಲ್ಪ ಅವಧಿಯಲ್ಲೆ ತಮ್ಮ ಅಭಿವೃದ್ಧಿ ಕಾಮಗಾರಿ ಸಹಿಸದ ವಿರೋಧ ಪಕ್ಷದವರು, ಕಾಮಗಾರಿ ಗಳು ಕೇವಲ ಚುನಾವಣೆ ಮುನ್ನ ಶಂಕುಸ್ಥಾಪನೆಯಾಗುತ್ತಿವೆ. ನಂತರ ಆಗದು ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ಇದು ಖಂಡನೀಯ ಎಂದರು. ಸಭೆಯಲ್ಲಿ ಕೆಲಗ್ರಾಮಸ್ಥರು, ಅಭಿವೃದ್ಧಿ ಕಾಮಗಾರಿಗಳಿಗೆ ಸುಳ್ಳು ಅರ್ಜಿ ನೀಡುವುದರಿಂದ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ, ಇದರಿಂದಾಗ 21ಲಕ್ಷ ಅನುದಾನ ಇದ್ದರೂ ಮೇಲುಸ್ಥರದ ಕುಡಿಯುವ ನೀರು ಪೂರೈಕೆ ಟ್ಯಾಂಕ್ ನಿರ್ಮಾಣಕ್ಕೆ ಯಾರು ಮುಂದೆ ಬರುತ್ತಿಲ್ಲವೆಂದು ಗಮನ ಸೆಳೆದಾಗ, ಶಾಸಕರು ಪ್ರತಿಕ್ರಿಯಿಸಿ, ಕೆಲವರಿಗೆ ಅಭಿವೃದ್ಧಿ ಕಾರ್ಯದ ಏಳಿಗೆ ಸಹಿಸಲು ಆಗದು. ಆದ್ದರಿಂದ ಅರ್ಜಿ ನೀಡುವುದೇ ಕಾಯಕ ಮಾಡಿಕೊಂಡಿದ್ದಾರೆ.ಇದರಿಂದ ಏನು ಆಗದು, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಇರುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುವ ನಿಟ್ಟಿನಲ್ಲಿ ಜನತೆಯೂ ಸಹಕರಿಸಬೇಕೆಂದರಲ್ಲದೆ, ಕೂಡಲೆ ಟ್ಯಾಂಕ್ ನಿರ್ಮಾಣ ಕೈಗೊಳ್ಳಲು ಅಗತ್ಯ ಪ್ರಕ್ರಿಯೆ ಪ್ರಾರಂಭಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಜಿಲ್ಲಾಪಂಚಾಯಿತಿ ಸದಸ್ಯ ಡಾ.ಬಿ.ಎನ್.ರವಿ, ಗ್ರಾಪಂ ಅಧ್ಯಕ್ಷರಾದ ವೆಂಕಟೇಶ್, ಶಿವಣ್ಣ, ಪ್ರಮುಖರಾದ ವರದರಾಜು, ಬಾಬು, ಸತೀಶ, ರಮೇಶ, ಪ್ರಭಾರ ತಹಸೀಲ್ದಾರ್ ಮಾರೆಗೌಡ, ಎಇಇ ಲಕ್ಷ್ಮೀಪ್ರಸನ್ನ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.